
ಕೆ.ಆರ್.ನಗರ: ‘ಇಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ರಾಜ್ಯಕ್ಕೆ ಮಾದರಿಯಾಗಿದ್ದು, ಅದನ್ನು 100 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಇಲ್ಲಿನ ತಾಲ್ಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ₹1 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಇಲ್ಲಿನ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿರುವುದರಿಂದ ಹೆರಿಗೆಗಾಗಿ ಅಕ್ಕಪಕ್ಕದ ತಾಲ್ಲೂಕಿನ ಮಹಿಳೆಯರು ಹೆಚ್ಚಾಗಿ ದಾಖಲಾಗುತ್ತಿದ್ದಾರೆ. ಇದರಿಂದ ಆಸ್ಪತ್ರೆ, ವೈದ್ಯರು ಮತ್ತು ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಾಗಿದೆ. ಈಗಿನ 50 ಹಾಸಿಗೆಯಿಂದ 100ಕ್ಕೆ ಹೆಚ್ಚಿಸಲಾಗುವುದು’ ಎಂದರು.
‘ಇಲ್ಲಿನ ತಾಲ್ಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ರಾತ್ರಿ ವೇಳೆ ರೋಗಿಗಳಿಗೆ ಲಭ್ಯ ಇರುವುದಿಲ್ಲ ಎನ್ನುವ ದೂರು ಕೇಳಿ ಬರುತ್ತಿದ್ದು, ಹಾಗಾಗಂತೆ ನೋಡಿಕೊಳ್ಳಬೇಕು’ ಎಂದು ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಬಿ.ಜೆ.ನವೀನ್ ಅವರಿಗೆ ಸೂಚನೆ ನೀಡಿದರು.
‘ಸರ್ಕಾರಿ ಆಸ್ಪತ್ರೆಯಲ್ಲಿ ಸಮಸ್ಯೆಯಾಗದಂತೆ, ದೂರು ಬಾರದಂತೆ ಆರೋಗ್ಯ ರಕ್ಷಾ ಸಮಿತಿ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಸಾರ್ವಜನಿಕರೊಂದಿಗೆ ವೈದ್ಯರು ಮತ್ತು ಸಿಬ್ಬಂದಿ ಸೌಜನ್ಯದಿಂದ ವರ್ತಿಸಬೇಕು’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಆರ್.ನಗರಕ್ಕೆ ಆಗಮಿಸಿದ್ದ ಸಂದರ್ಭ ₹1 ಕೋಟಿ ಅನುದಾನದಲ್ಲಿ ಆಸ್ಪತ್ರೆಯ ಆವರಣದಲ್ಲಿ ಟೈಲ್ಸ್, ಉದ್ಯಾನ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಆ ಕಾಮಗಾರಿಗೆ ಇಂದು ಚಾಲನೆ ನೀಡಲಾಗುತ್ತಿದೆ’ ಎಂದರು.
‘ಇಲ್ಲಿನ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಅದನ್ನು ನಿವಾರಿಸಲು ಈಗಾಗಲೆ ಎರಡು ಬೋರ್ವೆಲ್ ಕೊರೆಸಲಾಗಿದೆ. ಸರ್ಕಾರದಿಂದ ಅನುದಾನ ತಂದು ಇನ್ನು ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಬಿ.ಜೆ.ನವೀನ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಹೆಬ್ಬಾಳು ನಾಗೇಂದ್ರ ಮಾತನಾಡಿದರು.
ಪುರಸಭೆ ಅಧ್ಯಕ್ಷ ಶಿವುನಾಯಕ್, ಸದಸ್ಯರಾದ ಕೋಳಿ ಪ್ರಕಾಶ್, ಶಂಕರ್, ಎಂ.ನಟರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ನಗರ ಘಟಕದ ಅಧ್ಯಕ್ಷ ಎಂ.ಜೆ.ರಮೇಶ್, ವಕ್ತಾರ ಸಯ್ಯದ್ ಜಾಬೀರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಲೋಕೇಶ್, ಮಂಜುನಾಥ್, ಗೌತಂ, ಮಧುಕಿರಣ್, ಸಾಗರ್, ರತ್ನಕ್ಕ, ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ನಟರಾಜ್, ಡಾ.ಮಾಧವ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.