ADVERTISEMENT

ಪುನರ್ವಸತಿ: ಆದಿವಾಸಿಗಳ ಬೀದಿಪಾಲು- ಪಿ.ಕೆ.ರಾಮು ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2023, 5:33 IST
Last Updated 13 ಸೆಪ್ಟೆಂಬರ್ 2023, 5:33 IST
ಹುಣಸೂರು ನಗರದ ಡೀಡ್ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮವನ್ನು ಆದಿವಾಸಿಗಳು ಉದ್ಘಾಟಿಸಿದರು
ಹುಣಸೂರು ನಗರದ ಡೀಡ್ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮವನ್ನು ಆದಿವಾಸಿಗಳು ಉದ್ಘಾಟಿಸಿದರು   

ಹುಣಸೂರು: ‘ಆದಿವಾಸಿ ಗಿರಿಜನರು ಕಾಡಿನಲ್ಲಿ ತಮ್ಮದೇ ಯಜಮಾನಿಕೆಯಲ್ಲಿ ಪ್ರಜಾಪ್ರಭುತ್ವ ಸಿದ್ಧಾಂತದ ತಳಹದಿಯಲ್ಲಿ ಸ್ವತಂತ್ರವಾಗಿ ಜೀವನ ನಡೆಸುತ್ತಿದ್ದರು. ಆದರೆ, ಪುನರ್ವಸತಿ ಹೆಸರಿನಲ್ಲಿ ಈ ಸಮುದಾಯವನ್ನು ಬೀದಿಪಾಲು ಮಾಡಲಾಗಿದೆ’ ಎಂದು ಆದಿವಾಸಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಡೀಡ್ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಆದಿವಾಸಿ ಅಧಿಕಾರ ದಿವಸ ಮತ್ತು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಪ್ರಜಾಪ್ರಭುತ್ವದಲ್ಲಿ ಸರ್ವರಿಗೂ ಸಮಾನ ಅವಕಾಶವನ್ನು ಎಲ್ಲಾ ರಂಗದಲ್ಲೂ ನೀಡಿ ಆಡಳಿತ ನಡೆಸುವ ವ್ಯವಸ್ಥೆ ಇದ್ದರೂ ಆದಿವಾಸಿ ಗಿರಿಜನರಿಗೆ 4 ದಶಕಗಳಿಂದ ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಸಮಾನ ಅವಕಾಶಗಳು ಸಿಕ್ಕಿಲ್ಲ. ಆದಿವಾಸಿಗಳು ಅತಂತ್ರ ಜೀವನ ನಡೆಸುತ್ತಿದ್ದಾರೆ’ ಎಂದರು.

ADVERTISEMENT

‘ಗಿರಿಜನರು ನಾಲ್ಕು ದಶಕಗಳಿಂದ ಅರಣ್ಯದಿಂದ ಹೊರ ಬಂದು ಬದುಕು ಕಟ್ಟಿಕೊಳ್ಳಲಾಗದೆ ಬೀದಿಪಾಲಾಗಿದ್ದಾರೆ. ಅರಣ್ಯ ಹಕ್ಕು ಕಾಯ್ದೆ ಕಾನೂನಾತ್ಮಕವಾಗಿ ಸಿಂಧುವಾಗಿದ್ದರೂ ಸರ್ಕಾರ ಅನುಷ್ಠಾನಗೊಳಿಸದೆ ಗಿರಿಜನರಿಗೆ ಅನ್ಯಾಯ ಮಾಡಿದೆ. ಹುಲಿ ಯೋಜನೆ ಹೆಸರಿನಲ್ಲಿ ಅರಣ್ಯದಿಂದ ಹೊರ ಹಾಕಿದ 3,418 ಗಿರಿಜನ ಕುಟುಂಬಗಳಿಗೆ ಈವರೆಗೂ ಸೂರು ನೀಡಿಲ್ಲ’ ಎಂದು ದೂರಿದರು.

ಮಾದರಿ ಹಾಡಿ ನಿರ್ಮಿಸಿ ಭಾರತದ ಸಂವಿಧಾನ ಪೀಠಿಕೆಯನ್ನು ಅಧಿಕೃತ ಭಾಷೆಯಲ್ಲಿ ಮುದ್ರಿಸಿ ಗಿರಿಜನರ ಮನೆಗಳಿಗೆ ತಲಪಿಸಬೇಕು. ಹುಣಸೂರು ನಗರ ವ್ಯಾಪ್ತಿಯಲ್ಲಿ ಮಾದರಿ ಹಾಡಿ ನಿರ್ಮಿಸಿ 100 ಗಿರಿಜನ ಕುಟುಂಬಗಳಿಗೆ ಆಶ್ರಯ ನೀಡಬೇಕು. ರಾಜ್ಯ ಸರ್ಕಾರ ಹೈಕೋರ್ಟ್ ನೀಡಿರುವ ತೀರ್ಪನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿ ಗಿರಿಜನರಿಗೆ ಅರಣ್ಯ ಹಕ್ಕು ನೀಡಬೇಕು. 3418 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕು.

ಕಾರ್ಯಕ್ರಮದಲ್ಲಿ ವಿಠಲ್ ನಾಣಚ್ಚಿ ಸರ್ಕಾರಕ್ಕೆ ಸಲ್ಲಿಸಲಿರುವ ಮನವಿಯನ್ನು ಸಭೆಗೆ ಓದಿ ತಿಳಿಸಿದರು. ಎ.ಪ್ರಕಾಶ್ ಪ್ರಜಾಪ್ರಭುತ್ವ ಮಹತ್ವ ಕುರಿತು ವಿಚಾರ ಮಂಡಿಸಿದರು.

ಡೀಡ್ ಸಂಸ್ಥೆಯ ನಿರ್ದೇಶಕ ಶ್ರೀಕಾಂತ್ ಪ್ರಾಸ್ತಾವಿಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.