ಮೈಸೂರು: ‘ಸರ್ಕಾರವು ಇನ್ನಷ್ಟು ಸರ್ಕಾರಿ ಆಸ್ಪತ್ರೆಗಳನ್ನು ತೆರೆಯುವ ಬದಲು ಖಾಸಗಿ ಆರೋಗ್ಯ ವ್ಯವಸ್ಥೆ ಬಲವರ್ಧನೆಗೆ ಆದ್ಯತೆ ನೀಡಬೇಕು’ ಎಂದು ಭಾರತ್ ಆಸ್ಪತ್ರೆಯ ಕಾರ್ಯನಿರ್ವಾಹಕ ಅಧ್ಯಕ್ಷ ಡಾ.ಬಿ.ಎಸ್. ಅಜಯ್‌ಕುಮಾರ್ ಸಲಹೆ ನೀಡಿದರು.
‘ಸರ್ಕಾರವು ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಬೇಕು. ತಾನೇ ಕ್ಯಾನ್ಸರ್ ಚಿಕಿತ್ಸೆ ಆಸ್ಪತ್ರೆ ತೆರೆಯುವ ಬದಲು ಈಗಾಗಲೇ ಈ ಕೆಲಸದಲ್ಲಿ ತೊಡಗಿಸಿಕೊಂಡಿರುವ ಲಾಭರಹಿತ ಆಸ್ಪತ್ರೆಗಳಿಗೆ ಆರ್ಥಿಕ ನೆರವು ನೀಡಿ ಅದನ್ನು ಕಾಲಕಾಲಕ್ಕೆ ಮೇಲ್ವಿಚಾರಣೆ ಮಾಡಬಹುದು. ಇದರಿಂದ ಹೆಚ್ಚಿನ ಬಂಡವಾಳದ ಹೂಡಿಕೆಯ ಅಗತ್ಯವೂ ಇರುವುದಿಲ್ಲ. ಆರೋಗ್ಯ ಸೇವೆಯೂ ಬೆಳೆಯುತ್ತದೆ. ಈ ಕುರಿತು ಈಗಾಗಲೇ ಆರೋಗ್ಯ ಸಚಿವರಿಗೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಈಗಾಗಲೇ ಸರ್ಕಾರವು ಯಶಸ್ವಿನಿ, ಆರೋಗ್ಯ ಕರ್ನಾಟಕದಂತಹ ಹಲವು ಸಾರ್ವತ್ರಿಕ ಆರೋಗ್ಯ ಯೋಜನೆಗಳನ್ನು ನೀಡುತ್ತಿದೆ. ಇದರ ಜೊತೆಗೆ ಎಲ್ಲರಿಗೂ ಸಾರ್ವತ್ರಿಕ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೊಳಿಸಬೇಕು’ ಎಂದು ಅವರು ಕೋರಿದರು.
ರೋಬೊಟಿಕ್ ಶಸ್ತ್ರಚಿಕಿತ್ಸೆ: ‘ಭಾರತ್ ಆಸ್ಪತ್ರೆಯು ಮೈಸೂರಿನಲ್ಲೇ ಮೊದಲ ಬಾರಿಗೆ ರೋಬೊಟಿಕ್ ಶಸ್ತ್ರಚಿಕಿತ್ಸೆ ಆರಂಭಿಸುತ್ತಿದೆ. ಇದರಿಂದ ಕ್ಯಾನ್ಸರ್‌ಗೆ ನಿಖರ ಶಸ್ತ್ರಚಿಕಿತ್ಸೆ ಸಾಧ್ಯವಾಗಲಿದ್ದು, ರೋಗಿಗಳು ಬೇಗ ಚೇತರಿಕೆಗೊಳ್ಳಲಿದ್ದಾರೆ. ಆಸ್ಪತ್ರೆಯು ಕ್ಯಾನ್ಸರ್ ಸಂಶೋಧನೆಗಾಗಿ ಪ್ರತ್ಯೇಕ ಘಟಕ ತೆರೆಯಲು ಯೋಜಿಸಿದೆ’ ಎಂದು ಮಾಹಿತಿ ನೀಡಿದರು.
ಕ್ಯಾನ್ಸರ್ ಆರೈಕೆ ಕುರಿತು ಸಮ್ಮೇಳನ: ಭಾರತ್ ಆಸ್ಪತ್ರೆ ಹಾಗೂ ಕ್ಯಾನ್ಸರ್ ಸಂಶೋಧನೆ ಮತ್ತು ಸಾಂಖ್ಯಿಕ ಫೌಂಡೇಶನ್ ಸಹಯೋಗದಲ್ಲಿ ನಗರದ ರ್‍ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಕ್ಯಾನ್ಸರ್ ರೋಗಿಗಳ ಆರೈಕೆ ಕುರಿತು ಒಂದು ದಿನದ ಸಮ್ಮೇಳನ ನಡೆಯಿತು. ಕ್ಯಾನ್ಸರ್ ಚಿಕಿತ್ಸೆ ಹಾಗೂ ಸಂಶೋಧನೆ ಕುರಿತು ಸಂಪನ್ಮೂಲ ವ್ಯಕ್ತಿಗಳು ಬೆಳಕು ಚೆಲ್ಲಿದರು. ದೇಶದ ವಿವಿಧ ಭಾಗಗಳಿಂದ ತಜ್ಞ ವೈದ್ಯರು ಪಾಲ್ಗೊಂಡರು.
ವೈದ್ಯರಾದ ಶೇಖರ್ ಪಾಟೀಲ, ಮಾಧವಿ, ಕವಿತಾ, ಗೌತಮ್, ರಕ್ಷಿತ್, ಅಮೋಘ್, ಅಭಿಲಾಷ್, ಸೌಮ್ಯಾ, ಪ್ರಶಾಂತಿ, ಕಾರ್ಯಕ್ರಮ ಸಂಯೋಜಕರಾದ ಡಾ.ಕೆ.ಶ್ರೀನಿವಾಸ ಹಾಗೂ ಡಾ.ಎಂ.ವಿಜಯ್‌ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.