ADVERTISEMENT

ತಗಡೂರು | ವಸತಿ ಶಾಲೆಯಲ್ಲಿ ಅವ್ಯವಸ್ಥೆಗೆ ಖಂಡನೆ; ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 3:49 IST
Last Updated 4 ಆಗಸ್ಟ್ 2025, 3:49 IST
ನಂಜನಗೂಡು ತಾಲೂಕಿನ ತಗಡೂರು ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಅವ್ಯವಸ್ಥೆ ಖಂಡಿಸಿ ಭಾನುವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು
ನಂಜನಗೂಡು ತಾಲೂಕಿನ ತಗಡೂರು ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಅವ್ಯವಸ್ಥೆ ಖಂಡಿಸಿ ಭಾನುವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು   

ನಂಜನಗೂಡು: ತಾಲ್ಲೂಕಿನ ತಗಡೂರು ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಮತ್ತು ವಿಜ್ಞಾನ ಪಿಯು ಕಾಲೇಜಿನ ಅವ್ಯವಸ್ಥೆ ವಿರುದ್ಧ ಭಾನುವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಯ ಗೇಟ್ ಮುಂಭಾಗ ಜಮಾವಣೆಗೊಂಡ ವಿದ್ಯಾರ್ಥಿಗಳು ಊಟ, ತಿಂಡಿ ತ್ಯಜಿಸಿ ಉಪವಾಸ ಮಾಡುವ ಮೂಲಕ ಶಾಲೆಯ ಅವ್ಯವಸ್ಥೆಗೆ ಕಾರಣಕರ್ತರಾದವರನ್ನು ಸೇವೆಯಿಂದ ವಜಾಗೊಳಿಸುವಂತೆ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಮುಖಂಡರು ಮಾತನಾಡಿ ‘ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಮತ್ತು ವಿಜ್ಞಾನ ಪಿಯು ಕಾಲೇಜಿನಲ್ಲಿ 580 ವಿದ್ಯಾರ್ಥಿಗಳು 6ನೇ ತರಗತಿಯಿಂದ ದ್ವಿತೀಯ ಪಿಯುಸಿ ತನಕ ವಿದ್ಯಾಭ್ಯಾಸ ಮಾಡುತ್ತಿದ್ದು, ತರಗತಿಗಳು ಸೇರಿದಂತೆ ವಸತಿ ನಿಲಯದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿವೆ. ಇಲಾಖೆಯ ನಿಯಮದಂತೆ ಮೇನು ಚಾರ್ಟ್ ಪ್ರಕಾರ ಊಟ, ತಿಂಡಿ ಆಹಾರ ಪದಾರ್ಥಗಳನ್ನ ನೀಡುತ್ತಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಹಳಸಿದ ಅನ್ನವನ್ನು ನೀಡುತ್ತಿದ್ದು, ಶಾಲೆಯ ಆವರಣ ಹಾಗೂ ಶೌಚಾಗೃಹಗಳಲ್ಲಿ ಸ್ವಚ್ಛತೆ ಇಲ್ಲದೇ ಗುಂಡಿಗಳು ಬಾಯಿ ತೆರೆದಿದ್ದು ಶಾಲೆಯ ಆವರಣ ಗಬ್ಬು ನಾರುತ್ತಿದೆ. ವಿದ್ಯುತ್ ಉಪಕರಣಗಳು ಹಾಳಾಗಿದ್ದು, ಭಯದಲ್ಲೇ ತಿರುಗಾಡಬೇಕು, ಕುಡಿಯುವ ನೀರಿನ ವ್ಯವಸ್ಥೆ ಸರಿಯಿಲ್ಲ. ಮೂರು ವರ್ಷಗಳ ಹಿಂದೆ ಕೊಟ್ಟಿದ್ದ ಹಾಸಿಗೆ ದಿಂಬುಗಳನ್ನು ಬದಲಾವಣೆ ಮಾಡಿಲ್ಲ. ಸೋಲಾರ್ ಕೆಟ್ಟಿದ್ದು ಬಿಸಿನೀರು ಬಾರದೆ ವಾರಕ್ಕೊಮ್ಮೆ ಸ್ನಾನ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ವಿದ್ಯಾರ್ಥಿಗಳು ದೂರಿದರು.

ಸ್ಥಳಕ್ಕೆ ಕ್ರೈಸ್ಟ್ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ವಸತಿ ನಿಲಯಗಳ ಎಇಇ ಲಿಂಗರಾಜು, ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಹಾಯಕ ಸಿ.ಟಿ. ಕುಮಾರ್, ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ ಭೇಟಿ ನೀಡಿ ಪೋಷಕರ ಸಭೆ ನಡೆಸಿದರು.

ಸಭೆಗೆ ಬಂದಿದ್ದ ನೂರಾರು ಪೋಷಕರು ಸಮಸ್ಯೆಗಳ ಬಗ್ಗೆ ತಿಳಿಸಿ, ವಸತಿ ನಿಲಯದ ಎಲ್ಲಾ ಶಿಕ್ಷಕರನ್ನು ತಕ್ಷಣ ವಜಾಗೊಳಿಸುವಂತೆ ಪಟ್ಟು ಹಿಡಿದರು.

ಜಂಟಿ ನಿರ್ದೇಶಕ ರಂಗೇಗೌಡ ಮಾತನಾಡಿ, ‘ಈಗಾಗಲೇ ವಸತಿ ಶಾಲೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಂದ ದೂರುಗಳು ಬಂದಿದ್ದು, ವಾರದೊಳಗೆ ಸಮಸ್ಯೆಗಳನ್ನು ಬಗೆಹರಿಸಲಾಗುವುದು’ ಎಂದರು.

ವಸತಿ ಶಾಲೆಯ ಪ್ರಾಂಶುಪಾಲೆ ವಸಂತಕುಮಾರಿ ನಿಲಯ ಪಾಲಕ ಮಹದೇವಪ್ಪ ಹಾಗೂ ಅತಿಥಿ ಶಿಕ್ಷಕ ಗುರುಸ್ವಾಮಿ ಅವರನ್ನು ಅಮಾನತುಗೊಳಿಸಲು ಕ್ರಮ ಕೈಗೊಳ್ಳಲಾಗುವುದು
ರಂಗೇಗೌಡ ಜಂಟಿ ನಿರ್ದೇಶಕ

ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ: ಆರೋಪ

‘ಈ ಬಗ್ಗೆ ಪ್ರಶ್ನೆ ಮಾಡಿದರೆ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುತ್ತಾರೆ. ಅತಿಥಿ ಶಿಕ್ಷಕ ಗುರುಸ್ವಾಮಿ ಎಂಬಾತ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ತೋರುತ್ತಿದ್ದು ಜಾತಿ ತಾರತಮ್ಯ ಮಾಡುತ್ತಾರೆ’ ಎಂದು ಆರೋಪಿಸಿದರು. ಅವ್ಯವಸ್ಥೆಗಳಿಗೆ ಕಾರಣರಾದ ಪ್ರಾಂಶುಪಾಲೆ ವಸಂತಕುಮಾರಿ ನಿಲಯಪಾಲಕ ಮಹದೇವಪ್ಪ ಅತಿಥಿ ಶಿಕ್ಷಕ ಗುರುಸ್ವಾಮಿ ಅವರನ್ನು ಸೇವೆಯಿಂದ ವಜಾ ಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.