ADVERTISEMENT

ಜ್ಞಾನ, ಕೌಶಲ ಬೆಳೆಸಿಕೊಳ್ಳಲು ಶ್ರಮಿಸಿ: ಕುಲಸಚಿವೆ ಎಂ.ಕೆ.ಸವಿತಾ

ಉದ್ಯೋಗ ಕೌಶಲ ಕುರಿತ ಉಪನ್ಯಾಸ: ಕುಲಸಚಿವೆ ಎಂ.ಕೆ.ಸವಿತಾ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 2:43 IST
Last Updated 4 ಫೆಬ್ರುವರಿ 2026, 2:43 IST
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ‘ಉದ್ಯೋಗ ಕೌಶಲ’ ಕುರಿತು ಮಂಗಳವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಕುಲಸಚಿವೆ ಎಂ.ಕೆ.ಸವಿತಾ ಉದ್ಘಾಟಿಸಿದರು. ವಿ.ಷಣ್ಮುಗಂ, ಪ್ರೊ.ಎನ್.ನಾಗರಾಜ, ಪ್ರೊ.ಪಿ.ಎನ್.ಹೇಮಚಂದ್ರ, ಪ್ರೊ.ಮಹೇಶ್, ವಾಸುದೇವ್‌ ಪಾಲ್ಗೊಂಡಿದ್ದರು 
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ‘ಉದ್ಯೋಗ ಕೌಶಲ’ ಕುರಿತು ಮಂಗಳವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಕುಲಸಚಿವೆ ಎಂ.ಕೆ.ಸವಿತಾ ಉದ್ಘಾಟಿಸಿದರು. ವಿ.ಷಣ್ಮುಗಂ, ಪ್ರೊ.ಎನ್.ನಾಗರಾಜ, ಪ್ರೊ.ಪಿ.ಎನ್.ಹೇಮಚಂದ್ರ, ಪ್ರೊ.ಮಹೇಶ್, ವಾಸುದೇವ್‌ ಪಾಲ್ಗೊಂಡಿದ್ದರು     

ಮೈಸೂರು: ‘ವಿದ್ಯಾರ್ಥಿ ಜೀವನ ಅತಿಮುಖ್ಯವಾಗಿದ್ದು, ತಂತ್ರಜ್ಞಾನವನ್ನು ಜ್ಞಾನ ಕೌಶಲ ಹೆಚ್ಚಿಸಿಕೊಳ್ಳಲಷ್ಟೇ ಬಳಸಿಕೊಳ್ಳಬೇಕು. ಮೊಬೈಲ್‌ನತ್ತ ಆಕರ್ಷಿತರಾಗದೇ, ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥಮಾಡದೇ ಓದಿನ ಕಡೆಗೆ ಗಮನಹರಿಸಿ’ ಎಂದು ಕುಲಸಚಿವೆ ಎಂ.ಕೆ.ಸವಿತಾ ಹೇಳಿದರು. 

ನಗರದ ಮಹಾರಾಜ ಕಾಲೇಜಿನಲ್ಲಿ ‘ಉದ್ಯೋಗ ಕೌಶಲ’ ಕುರಿತು ಮಂಗಳವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಇಂದಿನ ಯುವ ಸಮೂಹ ಹಾದಿ ತಪ್ಪುತ್ತಿದೆ. ನಾಗರಿಕ ಸೇವೆಗಳು ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬೇಕಾದ ಕೌಶಲ ಸಿದ್ಧಿಸಿಕೊಳ್ಳಲು ಪರಿಶ್ರಮ ಪಡಬೇಕು’ ಎಂದು ಸಲಹೆ ನೀಡಿದರು.

‘ನಿತ್ಯ ಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವಿನ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ತಯಾರಿ ಮಾಡಿಕೊಳ್ಳಬೇಕು. ಯೋಜಿತ ಅಭ್ಯಾಸ, ನಿರಂತರತೆ ಕಾಯ್ದುಕೊಂಡರೆ ಯಶಸ್ಸು ಸುಲಭ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಏನೇ ಓದಿದರೂ, ಉಪನ್ಯಾಸ ಕೇಳಿದರೂ ಅದನ್ನು ಟಿಪ್ಪಣಿ ಮಾಡುವ ಹಾಗೂ ಪುನರ್‌ಮನನ ಮಾಡಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು. ಕಲಿತದ್ದನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬೇಕು. ಅದರಿಂದ ನೆನಪು ಅಚ್ಚಳಿಯದೇ ಉಳಿಯುತ್ತದೆ’ ಎಂದರು. 

‘ಉದ್ಯೋಗ ಕೌಶಲ’ ಕುರಿತು ಮಹಾರಾಣಿ ಕಾಲೇಜಿನ ಪ್ರೊ.ಪಿ.ಎನ್.ಹೇಮಚಂದ್ರ ಮಾತನಾಡಿ, ‘ಖಾಸಗಿ ಕ್ಷೇತ್ರದಲ್ಲೂ ವಿಪುಲವಾದ ಉದ್ಯೋಗವಕಾಶವಿದೆ. ಅದಕ್ಕೆ ಸಂವಹನ, ವೃತ್ತಿಪರ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗಗಳು, ಇಲಾಖೆಗಳು ನಡೆಸುವ ಉದ್ಯೋಗ ನೇಮಕಾತಿ ಪರೀಕ್ಷೆ ಬಗ್ಗೆ ಅರಿತು, ಅದಕ್ಕೆ ಪೂರಕವಾದ ತಯಾರಿ ನಡೆಸಬೇಕು’ ಎಂದರು. 

‘ಮೊಬೈಲ್‌ ಅನ್ನು ಉಪ್ಪಿನಕಾಯಿಯಂತೆ ಬಳಸಿಕೊಳ್ಳಬೇಕೆ ಹೊರತು ಅದೇ ಊಟವಾಗಬಾರದು. ಅರಣ್ಯ ಸೇವೆ, ಸಾರ್ವಜನಿಕ ಉದ್ಯಮಗಳು, ಎಸ್‌ಎಸ್‌ಸಿ, ಬ್ಯಾಂಕಿಂಗ್, ಆರ್‌ಆರ್‌ಬಿ, ರಕ್ಷಣಾ ಇಲಾಖೆ, ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಪ್ರಯತ್ನ ಪಡಬೇಕು. ಆರ್‌ಆರ್‌ಬಿ ಪರೀಕ್ಷೆಗಳೀಗ ಕನ್ನಡದಲ್ಲೂ ನಡೆಯುತ್ತಿದ್ದು, ಅದರ ಪ್ರಯೋಜನ ಪಡೆಯಬೇಕು’ ಎಂದು ಸಲಹೆ ನೀಡಿದರು.

ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ, ಪ್ರಾಂಶುಪಾಲ ವಿ.ಷಣ್ಮುಗಂ, ಬಹದ್ದೂರು ವ್ಯವಸ್ಥಾಪನ ವಿಜ್ಞಾನ ಸಂಸ್ಥೆ ನಿರ್ದೇಶಕ ಪ್ರೊ.ಮಹೇಶ್, ವಿಶ್ವಮಾನವ ನೌಕರರ ವೇದಿಕೆಯ ವಾಸುದೇವ್‌ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.