ADVERTISEMENT

ತತ್ವಶಾಸ್ತ್ರದಲ್ಲಿ ಕಣ್ಮರೆಯಾದ ಕರ್ನಾಟಕದ ದಾರ್ಶನಿಕರು: ಪ್ರೊ.ತರೀಕೆರೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 14:21 IST
Last Updated 23 ಜನವರಿ 2025, 14:21 IST
ಪ್ರೊ.ರಹಮತ್‌ ತರೀಕೆರೆ
ಪ್ರೊ.ರಹಮತ್‌ ತರೀಕೆರೆ   

ಮೈಸೂರು: ‘ವಿಶ್ವವಿದ್ಯಾಲಯಗಳ ತತ್ವಶಾಸ್ತ್ರ ವಿಭಾಗದಲ್ಲಿ ಕರ್ನಾಟಕದ ದಾರ್ಶನಿಕರ ಅಧ್ಯಯನ ಇಲ್ಲವಾಗಿರುವುದು ವಿಷಾದನೀಯ. ಸಂಸ್ಕೃತ ಹಾಗೂ ಪಶ್ಚಿಮದ ದಾರ್ಶನಿಕರ ಅಧ್ಯಯನವನ್ನಷ್ಟೇ ಮಾಡಬೇಕೆನ್ನುವುದು ‌ಶೈಕ್ಷಣಿಕ ಅಪರಾಧ’ ಎಂದು ಪ್ರೊ.ರಹಮತ್‌ ತರೀಕೆರೆ ಪ್ರತಿಪಾದಿಸಿದರು.

ನಗರದ ಮಾನಸಗಂಗೋತ್ರಿಯ ತತ್ವಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಗುರುವಾರ ಅಂಬೇಡ್ಕರ್‌ ಸಂಶೋಧನೆ ಮತ್ತು ಅಧ್ಯಯನ ಕೇಂದ್ರವು ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ, ‘ಅಂಬೇಡ್ಕರ್‌ ಅವರನ್ನು ಪ್ರಭಾವಿಸಿದ ಸಂತ ಕಬೀರ್‌ದಾಸ್‌ ಚಿಂತನೆಗಳ ತಾತ್ವಿಕ ನೆಲೆಗಳು’ ಕುರಿತು ಮಾತನಾಡಿದರು.

‘ತತ್ವಶಾಸ್ತ್ರದಲ್ಲಿ ಆರೂಢ, ಅವಧೂತರ ತತ್ವಪದ, ಶರಣ, ಸೂಫಿಗಳ ಅಧ್ಯಯನವಿಲ್ಲ. ಅಭಿನವಗುಪ್ತರಿಗೆ ಸಮಾನವಾಗಿ ಚಿಂತಿಸಿದ ಅಲ್ಲಮಪ್ರಭು, ಅಂಬೇಡ್ಕರ್‌ ತಮ್ಮ ಗುರುವಾಗಿ ಸ್ವೀಕರಿಸಿದ ಕಬೀರ್‌ದಾಸ್‌ ಕುರಿತು ಅಧ್ಯಯನವೇ ಇಲ್ಲ. ನಮ್ಮ ನೆಲದ ತತ್ವಶಾಸ್ತ್ರವನ್ನು ಯಾಕೆ ಬಿಟ್ಟಿದ್ದೀರಿ’ ಎಂದು ಪ್ರಶ್ನಿಸಿದರು.

ADVERTISEMENT

‘ರಾಜ್ಯದ ಎಲ್ಲಾ ತತ್ವಶಾಸ್ತ್ರ ಅಧ್ಯಯನ ಕೇಂದ್ರಗಳಲ್ಲಿ ಕರ್ನಾಟಕದ ದಾರ್ಶನಿಕರ ಕುರಿತ ಅಧ್ಯಯನಕ್ಕೆ ಅವಕಾಶವಿರಬೇಕು’ ಎಂದು ಆಗ್ರಹಿಸಿದರು.

‘ತತ್ವಶಾಸ್ತ್ರವನ್ನು ನಾವು ಸದಾ ಧರ್ಮಕ್ಕೆ ಸೇರಿಸಿಬಿಡುತ್ತೇವೆ. ಅದು ತಪ್ಪು. ತತ್ವಶಾಸ್ತ್ರವು ಧರ್ಮಕ್ಕೆ ಹೊರತಾದ ವಿಚಾರ. ಹುಟ್ಟು ಹಾಗೂ ವೃತ್ತಿಯ ಕಾರಣಕ್ಕಾಗಿ ಕೀಳಾಗಿ ಕಾಣುವ ಸಮಾಜದಲ್ಲಿ ದಾರ್ಶನಿಕರು ಹುಟ್ಟಿಕೊಂಡಿದ್ದು, ಜ್ಞಾನಮಾರ್ಗದ ಮೂಲಕ ತಮ್ಮನ್ನು ಗುರುತಿಸುವಂತ ಸಾಧನೆ ಮಾಡಿದ್ದಾರೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.