ADVERTISEMENT

ಹದಿಹರೆಯ: ಭವಿಷ್ಯ ಭದ್ರಪಡಿಸಲು ಬಳಸಿಕೊಳ್ಳಿ; ನಟ ಕೆ.ಸುಚೇಂದ್ರ ಪ್ರಸಾದ್

9ನೇ ಅಂತರ ವಿಶ್ವವಿದ್ಯಾಲಯ ನೈರುತ್ಯ ವಲಯದ ‘ಯುವೋತ್ಸವ’ಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:53 IST
Last Updated 10 ಫೆಬ್ರುವರಿ 2026, 5:53 IST
ಮೈಸೂರಿನ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಲ್ಲಿ ಸೋಮವಾರ ಆರಂಭವಾದ 9ನೇ ಅಂತರ ವಿಶ್ವವಿದ್ಯಾಲಯ ನೈರುತ್ಯ ವಲಯದ ‘ಯುವೋತ್ಸವ’ದಲ್ಲಿ ಗಣ್ಯರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು
ಮೈಸೂರಿನ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಲ್ಲಿ ಸೋಮವಾರ ಆರಂಭವಾದ 9ನೇ ಅಂತರ ವಿಶ್ವವಿದ್ಯಾಲಯ ನೈರುತ್ಯ ವಲಯದ ‘ಯುವೋತ್ಸವ’ದಲ್ಲಿ ಗಣ್ಯರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು   

ಮೈಸೂರು: ‘ಹದಿಹರೆಯವು ಬದುಕಿನ ಅತ್ಯಂತ ಉಪಯುಕ್ತ ಕಾಲ, ಇದನ್ನು ಸಕ್ರಿಯವಾಗಿ ಬಳಸಿಕೊಂಡು ಭವಿಷ್ಯ ಭದ್ರಗೊಳಿಸಿಕೊಳ್ಳಬೇಕು’ ಎಂದು ಚಲನಚಿತ್ರ ನಟ ಕೆ.ಸುಚೇಂದ್ರ ಪ್ರಸಾದ್ ಹೇಳಿದರು.

ಇಲ್ಲಿನ ಬನ್ನಿಮಂಟಪದ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಲ್ಲಿ ಸೋಮವಾರ ಆರಂಭವಾದ ಐದು ದಿನಗಳ 9ನೇ ಅಂತರ ವಿಶ್ವವಿದ್ಯಾಲಯ ನೈರುತ್ಯ ವಲಯದ ‘ಯುವೋತ್ಸವ’ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎಲ್ಲರನ್ನೂ ಸಂಘಟಿತರಾಗಿಸಿ ಒಂದೇ ಸೂರಿನಡಿ ತರುವ ಉತ್ಸವಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸ ಮಾಡುತ್ತಿವೆ. ಯುವೋತ್ಸವವು ಯುವಜನರನ್ನು ಸಹಬಾಳ್ವೆಗೆ, ಎಲ್ಲರೂ ಒಂದೇ ಎಂಬ ಭಾವನೆಯನ್ನು ಜಾಗೃತಗೊಳಿಸಲು ಸಾಧ್ಯವಾಗುತ್ತದೆ’ ಎಂದರು.

ADVERTISEMENT

‘ದೇಶವೆಂದರೆ ಬಾವುಟ, ಗಡಿ, ಭಾಷೆಗಳಲ್ಲ. ವಿಶ್ವಕ್ಕೆ ಉತ್ತಮ ಆಲೋಚನೆಗಳನ್ನು ಪಸರಿಸುವ ಸ್ಥಳ. ವಿಶ್ವವಿದ್ಯಾಲಯಗಳ ಮೂಲಕ ಜಗತ್ತಿನ ಉತ್ತಮ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ನಮ್ಮನ್ನು ನಾವು ಅರಿತು ಜನ್ಮ ಸಾರ್ಥಕದ ಮಾರ್ಗವನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. 

ಕುಲಪತಿ ಎಚ್.ಬಸವನಗೌಡಪ್ಪ, ಸಮಕುಲಾಧಿಪತಿ ಬಿ.ಸುರೇಶ್, ಸಂಘಟನಾ ಕಾರ್ಯದರ್ಶಿ ವಿಶಾಲ್ ಕುಮಾರ್ ಗುಪ್ತ ಹಾಗೂ ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ. ಬೆಟಸೂರಮಠ ಮಾತನಾಡಿದರು. ‌

ಕುಲಸಚಿವ ಬಿ.ಮಂಜುನಾಥ್‌, ನವದೆಹಲಿಯ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ವೀಕ್ಷಕರಾದ, ಉತ್ತರಪ್ರದೇಶದ ಸುಭಾರ್ತಿ ವಿಶ್ವವಿದ್ಯಾಲಯದ ಲಲಿತಕಲೆ ವಿಭಾಗದ ಮುಖ್ಯಸ್ಥೆ ಪ್ರೊ.ಭಾವನಾ ಗ್ರೊವರ್, ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸಹ ಪ್ರಾಧ್ಯಾಪಕ ಬಾಲ ಲಖೇಂದ್ರ ಹಾಜರಿದ್ದರು.

ವಲಯದ ಒಟ್ಟು 33 ವಿಶ್ವವಿದ್ಯಾಲಯಗಳಿಂದ 1,500 ವಿದ್ಯಾರ್ಥಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ದೇಶದ ವಿವಿಧ ಭಾಗಗಳ ಸಂಸ್ಕೃತಿಯನ್ನು ಪರಿಚಯಿಸುವ ನೃತ್ಯ ಪ್ರದರ್ಶನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.