ADVERTISEMENT

ವಿವಾಹಿತ ಪುರುಷ, ಮಹಿಳೆ ಒಟ್ಟಿಗೆ ಆತ್ಮಹತ್ಯೆ

ಒಂದೇ ಹಗ್ಗದ ಕುಣಿಕೆಗೆ ನೇಣು ಹಾಕಿಕೊಂಡರು

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 20:20 IST
Last Updated 1 ಜುಲೈ 2019, 20:20 IST

ಮೈಸೂರು: ನಗರದಲ್ಲಿ ವಿವಾಹಿತ ಪುರುಷ ಹಾಗೂ ಮಹಿಳೆ ಸೋಮವಾರ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ರಮ ಸಂಬಂಧದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ರಮಾಬಾಯಿನಗರದ ನಿವಾಸಿ ಸಂತೋಷ್‌ಕುಮಾರ್ (34) ಹಾಗೂ ಜೆ.ಪಿ.ನಗರದ ನಿವಾಸಿ ಸುಮಿತ್ರಾ (35) ಆತ್ಮಹತ್ಯೆ ಮಾಡಿಕೊಂಡವರು. ಇವರಿಬ್ಬರೂ ಸಂತೋಷ್‌ಕುಮಾರ್ ನಿವಾಸದಲ್ಲಿ ಒಂದೇ ಹಗ್ಗದಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.

ಘಟನೆ ವಿವರ: ಸಂತೋಷ್‌ಕುಮಾರ್‌ ಅವರು ಅರ್ಚನಾ ಎಂಬುವವರನ್ನು ಸುಮಿತ್ರಾ ಅವರು ಸಿದ್ದರಾಜು ಎಂಬುವವರನ್ನು ವಿವಾಹವಾಗಿದ್ದರು. ಇಬ್ಬರಿಗೂ ಮಕ್ಕಳಿದ್ದರು. ಇವರಿಬ್ಬರೂ ಜೆ.ಪಿ.ನಗರದ ಕಾರ್ಖಾನೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ಮಧ್ಯೆ ಹೆಚ್ಚು ಆತ್ಮೀಯ ಒಡನಾಟ ಇತ್ತು. ಕೆಲ ದಿನಗಳ ಹಿಂದೆಯಷ್ಟೇ ಇಬ್ಬರ ಮಧ್ಯೆ ಅಕ್ರಮ ಸಂಬಂಧ ಇದೆ ಎಂಬ ಸುದ್ದಿ ಹಬ್ಬಿ ರಾಜಿಪಂಚಾಯಿತಿ ಸಹ ನಡೆದಿತ್ತು. ಸಂತೋಷ್‌ಕುಮಾರ್ ಪತ್ನಿ ಅರ್ಚನಾ ಊರಿಗೆ ತೆರಳಿದ್ದಾಗ ಸುಮಿತ್ರಾ ಮನೆಗೆ ಬಂದಿದ್ದಾರೆ. ಅಕ್ಕಪಕ್ಕದವರಿಂದ ಮಾಹಿತಿ ಪಡೆದ ಅರ್ಚನಾ ಮನೆಗೆ ಬಂದು ಬಾಗಿಲು ತೆರೆಯುವಂತೆ ಸೋಮವಾರ ಗಲಾಟೆ ಮಾಡಿದ್ದಾರೆ. ಈ ವೇಳೆ ಸುಮಿತ್ರಾ ಪತಿ ಸಿದ್ದರಾಜು ಸಹ ಮನೆ ಕಡೆಗೆ ಬಂದು ಗಲಾಟೆ ಆರಂಭಿಸಿದ್ದಾರೆ. ಅರ್ಚನಾ ಮಹಿಳಾ ಠಾಣೆಗೆ ದೂರು ನೀಡಲು ತೆರಳಿದ್ದಾರೆ. ಇದರಿಂದ ಮನನೊಂದ ಸಂತೋಷ್‌ಕುಮಾರ್ ಹಾಗೂ ಸುಮಿತ್ರಾ ನೇಣಿಗೆ ಶರಣಾಗಿದ್ದಾರೆ.

ADVERTISEMENT

ಮಧ್ಯಾಹ್ನದ ವೇಳೆಗೆ ಪೊಲೀಸರೊಂದಿಗೆ ಮನೆಗೆ ಬಂದ ಅರ್ಚನಾ ಬಾಗಿಲು ಒಡೆದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಮೈಸೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆ
ಮೈಸೂರು:
ಇಲ್ಲಿನ ಯಾದವಗಿರಿ ನಿವಾಸಿ ಮನೋಜ್‌ ಭಾರದ್ವಾಜ್ (29) ತಾವು ವಾಸವಿದ್ದ ಬಾಡಿಗೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಮನೋಜ್ ಇಲ್ಲಿನ ರಂಗನಾಥ್ ಎಂಬುವವರ ಮನೆಯಲ್ಲಿ ಚಾಲಕ ವೃತ್ತಿ ಮಾಡಿಕೊಂಡಿದ್ದು, ಅವರ ಬಾಡಿಗೆ ಮನೆಯಲ್ಲೇ ವಾಸವಿದ್ದರು. ಹಣಕಾಸು ಮುಗ್ಗಟ್ಟಿನಿಂದ ಬಳಲುತ್ತಿದ್ದ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‌‌ನ್ಯಾಯಾಲಯಕ್ಕೆ ಬಂದಿದ್ದ ವ್ಯಕ್ತಿಗೆ ಹೃದಯಾಘಾತ
ಮೈಸೂರು:
ಇಲ್ಲಿನ ಜಯನಗರದಲ್ಲಿರುವ ನ್ಯಾಯಾಲಯಗಳ ನೂತನ ಕಟ್ಟಡ ಸಂಕೀರ್ಣಕ್ಕೆ ಬಂದಿದ್ದ ಮಂಡಕಳ್ಳಿ ನಿವಾಸಿ ಎಸ್.ನಂದೀಶ್ (36) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇವರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಬಂದಿದ್ದರು. ಈ ವೇಳೆ ನ್ಯಾಯಾಲಯದ ಆವರಣದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಅಂಬುಲೆನ್ಸ್ ಬರುವಷ್ಟರಲ್ಲಿ ಇವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಈ ಕುರಿತು ಪ್ರಕರಣ ದಾಖಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.