ADVERTISEMENT

ಸೂಫಿ ಧರ್ಮವಲ್ಲ, ಅದೊಂದು ದಾರ್ಶನಿಕ ಪಂಥ: ಪ್ರೊ. ರಹಮತ್ ತರೀಕೆರೆ

ಸಿಐಐಎಲ್‌ ಭಕ್ತಿ ಬಹು ಅಭಿವ್ಯಕ್ತಿ ವೆಬಿನಾರ್‌: ವಿಮರ್ಶಕ ಪ್ರೊ.ರಹಮತ್ ತರೀಕೆರೆ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 3:37 IST
Last Updated 12 ಆಗಸ್ಟ್ 2021, 3:37 IST
ವೆಬಿನಾರ್‌ನಲ್ಲಿ ಪ್ರೊ.ರಹಮತ್‌ ತರೀಕೆರೆ ಮಾತನಾಡಿದರು
ವೆಬಿನಾರ್‌ನಲ್ಲಿ ಪ್ರೊ.ರಹಮತ್‌ ತರೀಕೆರೆ ಮಾತನಾಡಿದರು   

ಮೈಸೂರು: ‘ಸೂಫಿ ಧರ್ಮವಲ್ಲ, ಅದೊಂದು ದಾರ್ಶನಿಕ ಪಂಥ. ಮಧ್ಯ ಏಷ್ಯಾದಿಂದ ಭಾರತಕ್ಕೆ ಬಂದು ಇಲ್ಲಿನ ಹಲವು ಜ್ಞಾನಧಾರೆಗಳ ಜೊತೆಗೆ ಸೇರಿ ಮರುಹುಟ್ಟನ್ನು ಪಡೆದ ಪಂಥ’ ಎಂದು ವಿಮರ್ಶಕ ಪ್ರೊ. ರಹಮತ್ ತರೀಕೆರೆ ಹೇಳಿದರು.

ನಗರದ ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್‌) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಆಯೋಜಿಸಿದ್ದ ‘ಭಕ್ತಿ ಬಹು ಅಭಿವ್ಯಕ್ತಿ ಉಪನ್ಯಾಸ ಸರಣಿ–2’ರಲ್ಲಿ ಬುಧವಾರ ‘ಸೂಫಿಪಂಥದ ಪ್ರಮುಖ ತಾತ್ವಿಕ ನೆಲೆಗಳು’ ಕುರಿತು ಅವರು
ಮಾತನಾಡಿದರು.

‘ಪ್ರೇಮವೇ ಸೂಫಿಗಳ ಕಾವ್ಯದ ಉಸಿರು. ಸ್ಥಳೀಯ ಭಾಷೆಗಳಲ್ಲಿಯೇ ಅವರು ಸಾಹಿತ್ಯ ಬರೆದರು. ಪಂಜಾಬಿ, ಬಂಗಾಳಿ, ದಖ್ಖನಿ, ಹಿಂದಿ, ಅವಧಿ, ಸಿಂಧಿ ಸೇರಿದಂತೆ ಭಾರತದ 16 ಸ್ಥಳೀಯ ಭಾಷೆಗಳಲ್ಲಿ ಬರೆದಿದ್ದಾರೆ. ಕಾವ್ಯ– ಪ್ರೇಮ– ಸಂಗೀತ– ಭಾಷೆಗಳ ಮೂಲಕ ಸಾಮರಸ್ಯ ಸಮಾಜವನ್ನು ಕಟ್ಟಿದ್ದಾರೆ’ ಎಂದು ಬಣ್ಣಿಸಿದರು.

ADVERTISEMENT

‘ಸೂಫಿಯ ತಾತ್ವಿಕ ನೆಲೆಯು ಯಾವುದೋ ಒಂದು ದೇಶದಿಂದ ರೂಪುಗೊಂಡಿಲ್ಲ. ಇರಾಕ್‌, ಟರ್ಕಿ, ಅಫ್ಗಾನಿಸ್ತಾನದ ಮೂಲಕ ಭಾರತವನ್ನು ಪ್ರವೇಶಿಸುವ ಪ್ರಯಾಣದಲ್ಲಿ ವಿವಿಧ ಜ್ಞಾನಧಾರೆಗಳನ್ನು ಪಡೆದು ಜಾತ್ಯತೀತ ತತ್ವವನ್ನು ಒಳಗೊಂಡಿದೆ’ ಎಂದರು.

‘ಸೂಫಿ ಗುರು ಕೇಂದ್ರಿತವಾದ ಪಂಥ. ಭಕ್ತಿಯು ದೊಡ್ಡ ಶಕ್ತಿಯೊಂದಕ್ಕೆ ಸಮರ್ಪಣೆಯಾದರೆ, ಚೈತನ್ಯದ ಅಂತರ್ಮುಖಿ ಹುಡುಕಾಟವೇ ಅಧ್ಯಾತ್ಮ. ಏನನ್ನು ಹುಡುಕುತ್ತಿದ್ದೇವೆಯೋ ಅದೇ ನಾವಾಗುವುದು ಅನುಭಾವ. ಆ ನಿಟ್ಟಿನಲ್ಲಿ ಸೂಫಿಗಳು ಅನುಭಾವಿಗಳು’ ಎಂದು ಹೇಳಿದರು.

‘ಸ್ಥಳೀಯವಾದ ಭಕ್ತಿ ಮತ್ತು ಅನುಭಾವಿ ಪಂಥಗಳ ಜತೆ ಸೂಫಿಗಳು ಒಡನಾಟ ನಡೆಸಿದರು. ಅವರ ತತ್ವ ಹೊಸ
ರೂಪಾಂತರಗಳನ್ನು ಪಡೆದಿದೆ. ಭಾಷೆ, ಸಾಹಿತ್ಯ, ದರ್ಶನ, ಸಂಗೀತ, ಆಚರಣೆ ಹಾಗೂ ವಾಸ್ತುಶಿಲ್ಪಗಳ ಮೂಲಕ ಭಾರತದ
ಭಕ್ತಿಪಂಥಗಳಿಗೆ ಜೋಡಿಸಿರುವ ವಿಶಿಷ್ಟ ಆಯಾಮ ಸೂಫಿಯದ್ದು’ ಎಂದರು.

ಶಾಸ್ತ್ರೀಯ ಕನ್ನಡ ಅತ್ಯುನತ ಅಧ್ಯಯನ ಕೇಂದ್ರದ ಹಿರಿಯ ಫೆಲೋ ಡಾ. ರಾಜಶೇಖರ ಜಮದಂಡಿ ಇದ್ದರು.

ಪ್ರಭುತ್ವದ ವಿರುದ್ಧ ಬಂಡುಕೋರತನ: ‘ಭಕ್ತಿ ಕವಿಗಳಂತೆಯೇ ಸೂಫಿಗಳೂ ಜನಪರವಾಗಿದ್ದರಿಂದ ಪ್ರಭುತ್ವದ ವಿರೋಧವನ್ನು ಕಟ್ಟಿಕೊಂಡಿದ್ದರು. ಬಹುತೇಕರು ರಾಜ ಪ್ರಭುತ್ವವನ್ನು ತಮ್ಮ ಆಶ್ರಮಕ್ಕೆ ಬಿಟ್ಟುಕೊಳ್ಳಲಿಲ್ಲ. ಆಶ್ರಯವನ್ನೂ ನಿರಾಕರಿಸಿದರು. ಕಾವ್ಯ – ಸಂಗೀತದ ಮೂಲಕ ಜನರೊಂದಿಗೆ ಬೆರೆತು ಸಮಾಜವನ್ನು ತಿದ್ದಿ, ನೋವುಗಳಿಗೆ ತತ್ವಪದಗಳ ಸಾಂತ್ವನ ನೀಡಿದರು. ವಿರಕ್ತಿ, ಸರಳತೆ, ಸ್ಥಳೀಕರಣ ಅವರ ವಿಶೇಷ’ ಎಂದು ರಹಮತ್‌ ತರೀಕೆರೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.