ADVERTISEMENT

15 ದಿನದಲ್ಲಿ ಹೆಚ್ಚುವರಿ ಹಣ ಪಾವತಿ: ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 2:45 IST
Last Updated 4 ಫೆಬ್ರುವರಿ 2026, 2:45 IST
ಕಬ್ಬು ಬೆಳೆಗಾರರೊಂದಿಗಿನ ಸಭೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿದರು
ಕಬ್ಬು ಬೆಳೆಗಾರರೊಂದಿಗಿನ ಸಭೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿದರು   

ಮೈಸೂರು: ‘ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳೆರಡು ಸೇರಿ ಪ್ರತಿ ಟನ್‌ ಕಬ್ಬಿಗೆ ಬಾಕಿ ನೀಡಬೇಕಾಗಿರುವ ₹100 ಹೆಚ್ಚುವರಿ ಹಣವು ಇನ್ನು ಹದಿನೈದು ದಿನದಲ್ಲಿ ರೈತರ ಖಾತೆಗೆ ಸಂದಾಯವಾಗಲಿದೆ’ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿಯ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಮಂಗಳವಾರ ಕಬ್ಬು ಬೆಳೆಗಾರರು ಹಾಗೂ ಬನ್ನಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಜೊತೆಗಿನ ಸಭೆಯಲ್ಲಿ ಅವರು ಮಾತನಾಡಿದರು. ‘ಪ್ರತಿ ಟನ್‌ ಕಬ್ಬಿಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ₹50 ಹಾಗೂ ಸಕ್ಕರೆ ಕಾರ್ಖಾನೆಯವರು ₹50 ನೀಡಬೇಕು. ಸರ್ಕಾರದ ಹಂತದಲ್ಲಿ ಈಗಾಗಲೇ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ. ಕಾರ್ಖಾನೆಯವರೂ ಯಾವುದೇ ಸಬೂಬು ಹೇಳದೇ ರೈತರಿಗೆ ಹಣ ಸಂದಾಯ ಮಾಡಬೇಕು’ ಎಂದರು.

‘ಈ ಕುರಿತು ಕಾರ್ಖಾನೆ ಆಡಳಿತ ಮಂಡಳಿಯು ನ್ಯಾಯಾಲಯದ ಮೊರೆ ಹೋಗಿದ್ದು, ಪ್ರಕರಣ ವಿಚಾರಣೆ ಹಂತದಲ್ಲಿದೆ’ ಎಂದು ಬನ್ನಾರಿ ಅಮ್ಮನ್‌ ಕಾರ್ಖಾನೆಯ ಉಪಾಧ್ಯಕ್ಷ ವೇಲುಸ್ವಾಮಿ ಹೇಳಿದರು. ಇದಕ್ಕೆ ಒಪ್ಪದ ಜಿಲ್ಲಾಧಿಕಾರಿ, ‘ನ್ಯಾಯಾಲಯವು ತಡೆಯಾಜ್ಞೆ ನೀಡಿಲ್ಲ. ಹೀಗಾಗಿ ಹಣ ಪಾವತಿ ಮಾಡಿ. ಇಲ್ಲವಾದಲ್ಲಿ ಜಿಲ್ಲಾಡಳಿತ ಕ್ರಮ ಜರುಗಿಸಲಿದೆ’ ಎಂದು ಎಚ್ಚರಿಸಿದರು.

ADVERTISEMENT

ಇಳುವರಿ ತಪಾಸಣೆ: ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬಿನ ಇಳುವರಿ ಅಂಶದಲ್ಲಿ ವಂಚನೆ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಖುದ್ದು ತಮ್ಮ ನೇತೃತ್ವದಲ್ಲಿ ತಂಡ ಕರೆದೊಯ್ದು ಪರೀಕ್ಷೆ ನಡೆಸುವುದಾಗಿ ಜಿಲ್ಲಾಧಿಕಾರಿ ಹೇಳಿದರು.

‘ಕಳೆದ ವರ್ಷವೂ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ವತಿಯಿಂದ ಕಬ್ಬಿನ ಇಳುವರಿಯ ಪರೀಕ್ಷೆ ಮಾಡಿಸಲಾಗಿತ್ತು. ಅವರು ಯಾವುದೇ ವ್ಯತ್ಯಾಸ ಇಲ್ಲ ಎಂದು ವರದಿ ಕೊಟ್ಟಿದ್ದರು. ಈ ಸಲ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಹೊತ್ತಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ, ಸ್ಥಳದಲ್ಲೇ ಇಳುವರಿ ಪರೀಕ್ಷೆ ಮಾಡುತ್ತೇವೆ. ನಮ್ಮ ಜೊತೆ ರೈತ ಸಂಘಟನೆಗಳ ಮುಖಂಡರು, ಕಬ್ಬು ಬೆಳೆಗಾರರು ಇರುತ್ತಾರೆ. ಎರಡು-ಮೂರು ಬಾರಿ ಪರೀಕ್ಷೆ ನಡೆಸಿ, ಅಮೇಲೆ ಒಂದು ನಿರ್ಣಯಕ್ಕೆ ಬರಲಾಗುತ್ತದೆ’ ಎಂದು ತಿಳಿಸಿದರು.

ಕಬ್ಬು ಕಟಾವಿಗೆ ದಿನ ನಿಗದಿ: ‘ಕಬ್ಬು ಕಟಾವಿಗೆ ಪ್ರತಿ ರೈತರಿಗೂ ದಿನಾಂಕವನ್ನು ನಿಗದಿ ಮಾಡಲಾಗುತ್ತದೆ. ಇಂತಹ ದಿನ ಇಂತಹ ರೈತರ ಜಮೀನಿನಲ್ಲಿ ಕಬ್ಬನ್ನು ಕಟಾವು ಮಾಡಬೇಕು ಎಂದು ತಹಶೀಲ್ದಾರ್‌ ಕಚೇರಿಯಿಂದ ಅಧಿಕೃತವಾದ ಆದೇಶವನ್ನು ಹೊರಡಿಸಲಾಗುತ್ತದೆ. ಇದರ ಅನ್ವಯವೇ ಕಬ್ಬನ್ನು ಕಟಾವು ಮಾಡಬೇಕು. ಯಾರ ಜಮೀನಿನಲ್ಲಿ ಯಾವ ದಿನಾಂಕದಂದು ಕಬ್ಬು ಕಟಾವು ಆಗುತ್ತದೆ ಎನ್ನುವ ಮಾಹಿತಿಯೂ ಸ್ಥಳೀಯ ರೈತ ಸಂಪರ್ಕ ಕೇಂದ್ರಗಳಲ್ಲಿ, ನಾಡ ಕಚೇರಿಗಳ ಮಾಹಿತಿ ಫಲಕದಲ್ಲಿ ಹಾಕಲಾಗುತ್ತದೆ. ಜೊತೆಗೆ ರೈತ ಸಂಘಟನೆಗಳಿಗೂ ನೀಡಲಾಗುತ್ತದೆ’ ಎಂದರು.

12 ತಿಂಗಳಿಗೆ ಸರಿಯಾಗಿ ಕಬ್ಬನ್ನು ಕಟಾವು ಮಾಡಿಸುವುದಕ್ಕೆ ಅಗತ್ಯ ಕ್ರಮವನ್ನು ವಹಿಸಬೇಕು ಎಂದರು.

ಸಮಯ ನಮೂದಿಸಿ: ‘ರೈತರು ತರುವ ಕಬ್ಬಿಗೆ ಪ್ರವೇಶ ದ್ವಾರದಲ್ಲೇ ದಿನಾಂಕ ಹಾಗೂ ಸಮಯ ನಮೂದಿಸಿ ಚೀಟಿ ನೀಡಬೇಕು. ತೂಕ ಮಾಡುವ ಸಂದರ್ಭವೂ ಸಮಯ ನಮೂದಿಸಬೇಕು. 24 ಗಂಟೆ ಒಳಗೆ ತೂಕ ಮಾಡದೇ ಇದ್ದಲ್ಲಿ, ಅದರಿಂದ ಆಗುವ ನಷ್ಟವನ್ನು ಕಾರ್ಖಾನೆ ಭರಿಸಬೇಕು’ ಎಂದು ಲಕ್ಷ್ಮೀಕಾಂತ ರೆಡ್ಡಿ ಸೂಚಿಸಿದರು.

‘ಚುಂಚನಕಟ್ಟೆಯ ಶ್ರೀರಾಮ ಸಕ್ಕರೆ ಕಾರ್ಖಾನೆ ಇನ್ನೂ ಪುನರಾರಂಭ ಆಗಿಲ್ಲ. ಹೀಗಿದ್ದು ಅಲ್ಲಿನ 3 ಸಾವಿರ ಟನ್‌ನಷ್ಟು ಕಾಕಂಬಿ ಸಾಗಿಸಲು ಅಬಕಾರಿ ಅಧಿಕಾರಿಗಳು ಅನುಮತಿ ಕೊಟ್ಟಿದ್ದಾರೆ. ಸಾಗಿಸಿದ್ದು ಯಾರು’ ಎಂದು ರೈತ ಮುಖಂಡರೊಬ್ಬರು ಪ್ರಶ್ನಿಸಿದರು.

‘ಕಾರ್ಖಾನೆ ಮರು ನೋಂದಣಿ ಆದ ಮೇಲೂ ಅದನ್ನು ಆರಂಭಿಸಲು ಸಂಬಂಧಿಸಿದ ಕಂಪನಿ ಮುಂದೆ ಬರುತ್ತಿಲ್ಲ. ಈ ಸಂಬಂಧ ಸರ್ಕಾರಕ್ಕೆ ವರದಿ ನೀಡಿದ್ದು, ಕ್ರಮ ಕೈಗೊಳ್ಳಲಿದೆ’ ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ ‘ಬನ್ನಾರಿ ಕಾರ್ಖಾನೆಯವರು ಕಬ್ಬಿನಿಂದ ಬರುವ ಉಪ ಉತ್ಪನ್ನಗಳನ್ನು ಇವರ ಮಾಲೀಕತ್ವದಲ್ಲಿರುವ ಬೇರೆ ಬೇರೆ ಹೆಸರಿನಲ್ಲಿ ಸ್ಥಾಪಿಸಿರುವ ಕಂಪನಿಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಕಬ್ಬಿನಿಂದ ಬರುವ ಉಪ ಉತ್ಪನ್ನಗಳ ಲಾಭ ಇಲ್ಲ ಎಂದು ಲೆಕ್ಕ ತೋರಿಸುತ್ತಾ ರೈತರಿಗೆ ಮೋಸ ಮಾಡುತ್ತಿದ್ದಾರೆ. ಸಕ್ಕರೆ ಇಳುವರಿಯಲ್ಲಿಯೂ ಕಡಿಮೆ ತೋರಿಸಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಮಾಡಿ ರೈತರಿಗೆ ನ್ಯಾಯ ಕೊಡಿಸಬೇಕು’ ಎಂದು ಆಗ್ರಹಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬನ್ನಾರಿ ಅಮ್ಮನ್ ಕಾರ್ಖಾನೆ ಉಪಾಧ್ಯಕ್ಷ ವೇಲುಸ್ವಾಮಿ, ‘ಕಾರ್ಖಾನೆಯು ವರ್ಷಕ್ಕೆ 15 ಲಕ್ಷ ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದೆ. ಆದರೆ ಕಳೆದ ಸಾಲಿನಲ್ಲಿ 7.5 ಲಕ್ಷ ಟನ್ ಕಬ್ಬು ಮಾತ್ರ ಪೂರೈಕೆ ಆಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎಸ್‌.ಯುಕೇಶ್‌ ಕುಮಾರ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್‌.ರವಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜು, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕೆರೆಹುಂಡಿ ರಾಜಣ್ಣ ವಳಗೇರ ಗಣೇಶ, ದೇವನೂರು ನಾಗೇಂದ್ರ, ಬಡಗಲಪುರ ನಾಗರಾಜು, ಕಿರಗಸೂರು ಶಂಕರ್, ನಂಜುಂಡಸ್ವಾಮಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.