ADVERTISEMENT

ಹಂಪಾಪುರ | ಶಾಲೆ ಅಂಗಳದಲ್ಲಿ ಸುಗ್ಗಿ ಸಂಭ್ರಮ

ಜಿ.ಜಿ.ಕಾಲೊನಿಯ ಸರ್ಕಾರಿ ಶಾಲೆ: ಮಕ್ಕಳಿಗೆ ಸಂಕ್ರಾಂತಿ ಸುಗ್ಗಿ ಪರಿಚಯ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 5:11 IST
Last Updated 16 ಜನವರಿ 2026, 5:11 IST
ಜಿಜಿ ಕಾಲೊನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಕ್ರಾಂತಿ ಹಿನ್ನೆಲೆ ಸುಗ್ಗಿ ಅಂಗವಾಗಿ ಎತ್ತಿನಗಾಡಿ ಮೆರವಣಿಗೆ ಮಾಡಲಾಯಿತು
ಜಿಜಿ ಕಾಲೊನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಕ್ರಾಂತಿ ಹಿನ್ನೆಲೆ ಸುಗ್ಗಿ ಅಂಗವಾಗಿ ಎತ್ತಿನಗಾಡಿ ಮೆರವಣಿಗೆ ಮಾಡಲಾಯಿತು   

ಹಂಪಾಪುರ: ಮಕ್ಕಳಿಂದ‌ ಧಾನ್ಯಗಳಿಗೆ ಪೂಜೆ ಸಲ್ಲಿಸಲಾಯಿತು. ರಾಗಿ ತೂರುವುದು, ಮೊರದಲ್ಲಿ ಧಾನ್ಯಗಳನ್ನು ವನೆಯುವ ಕ್ರಿಯೆಯನ್ನು ತಿಳಿಸಸಲಾಯಿತು. ಯಂತ್ರಗಳ ಸಹಾಯವಿಲ್ಲದೇ ದ್ವಿದಳ ಧಾನ್ಯಗಳ ಒಕ್ಕಣೆ ಮಾಡುವುದು, ಏಕದಳ ಧಾನ್ಯಗಳ ಬಳಸುವ ವಿಧಾನ ತೋರಿಸಲಾಯಿತು.

–ಹೌದು ಎಚ್.ಡಿ.ಕೋಟೆ ತಾಲ್ಲೂಕಿನ ಜಿ.ಜಿ.ಕಾಲೊನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುಗ್ಗಿ ಹಬ್ಬ ಸಂಕ್ರಾಂತಿ ಹಿನ್ನೆಲೆಯಲ್ಲಿ ಮಕ್ಕಳಿಗೆ ವಿಶೇಷ ಚಟುವಟಿಕೆಯ ಮೂಲಕ ಸಂಕ್ರಾಂತಿಯ ಮಹತ್ ಪರಿಚಯಿಸಲಾಯಿತು.

ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಿಸುವ ಈ ಶುಭ ದಿನದಂದು ಸೂರ್ಯ ಪಥ ಬದಲಾವಣೆಯ ಮಹತ್ವದ ಅರಿವು ಮೂಡಿಸಲಾಯಿತು.

ADVERTISEMENT

ಇಲ್ಲಿ ಮಕ್ಕಳೇ ಶಾಲೆಯನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ಶೃಂಗರಿಸಿದ್ದರು. ಗ್ರಾಮದವರ ಸಹಕಾರದೊಂದಿಗೆ ಎತ್ತಿನಗಾಡಿಯನ್ನು ಈ ವೇಳೆ ಬಳಸಿಕೊಳ್ಳಲಾಗಿತ್ತು.

ಎತ್ತಿನಗಾಡಿ ಒಕ್ಕಣೆಯ ಸಮಯದಲ್ಲಿ ಎಷ್ಟರಮಟ್ಟಿಗೆ ಪಾತ್ರ ನಿರ್ವಹಿಸುತ್ತಿತ್ತು, ಅಲ್ಲದೆ ಅದರ ಪ್ರಯೋಜನಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಲಾಯಿತು.

ಇತ್ತೀಚ್ಚಿನ ದಿನಗಳಲ್ಲಿ ಯಂತ್ರಗಳು ಬಂದು ಒಕ್ಕಣೆಯಿಂದ, ಧಾನ್ಯಗಳನ್ನು ಶುಚಿಗೊಳಿಸುವವರೆಗೂ ಸಹ ಬಳಕೆಯಾಗುತ್ತಿದೆ. ಇದರಿಂದ ಮನುಷ್ಯನ ಮೇಲೆ ಆಗುತ್ತಿರುವ ದುಷ್ಪರಿಣಾಮಗಳು ಹಾಗೂ ಇವುಗಳ ಬಳಕೆಯಿಂದ ಮನುಷ್ಯನ ಕೆಲಸ ಕಿತ್ತುಕೊಳ್ಳುವುದರ ಬಗ್ಗೆ ಮಕ್ಕಳಿಗೆ ವಿವರಿಸಲಾಯಿತು.

ಮುಖ್ಯ ಶಿಕ್ಷ ಆನಂದ್ ಮಾತನಾಡಿ, ‘ಇಂದಿನ ಮಕ್ಕಳಿಗೆ ಹಾಲಿನಿಂದ ತುಪ್ಪ ಉತ್ಪಾದನೆಯಾಗುತ್ತದೆ ಎಂದು ತಿಳಿದಿದೆ. ಆದರೆ ಅದು ಹೇಗೆ ಉತ್ಪಾದನೆಯಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದ್ದರಿಂದ ಇಂತಹ ಹಬ್ಬದ ದಿನಗಳಲ್ಲಿ ಮಕ್ಕಳಿಗೆ ಉತ್ಪಾದನೆ ಮತ್ತು ತಯಾರಿ ವಿಧಾನಗಳ ಬಗ್ಗೆ ಪ್ರಾತ್ಯಿಕ್ಷಿಕೆ ನಡೆಸಿದಾಗ ಅವರಿಗೆ ತಿಳಿಯುತ್ತದೆ’ ಎಂದರು.

‘ಮಕ್ಕಳಲ್ಲಿ ಆಹಾರದ ಮಹತ್ವ ಸಾರುವ ಸಲುವಾಗಿ ಮತ್ತು ಆಹಾರದ ಉತ್ಪಾದನೆಯ ಮೂಲ ತಿಳಿಸುವ ಸಲುವಾಗಿ ಜಿ.ಜಿ.ಕಾಲೊನಿ ಶಾಲೆಯಲ್ಲಿ ಸುಗ್ಗಿ ಹಬ್ಬ ಮಾಡಲಾಗಿದೆ. ಇದೇ ರೀತಿ ಎಲ್ಲಾ ಶಾಲೆಗಳಲ್ಲಿಯೂ ವಿಶೇಷ ಪ್ರಯೋಗ ನಡೆದರೆ ಸರ್ಕಾರಿ ಶಾಲೆಯ ಮಹತ್ವ ಪೋಷಕರಿಗೆ ಅರಿವಾಗಲಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಸಹ ಶಿಕ್ಷಕರಾದ ಮನೋಹರ್, ಸುಬ್ರಹ್ಮಣ್ಯ, ಅತಿಥಿ ಶಿಕ್ಷಕರಾದ ಮರಿದೇವಮ್ಮ, ಸಂಗೀತ, ಅಡುಗೆಯವರಾದ ಸೌಮ್ಯ ಮತ್ತು ಗಾಯತ್ರಿ ಇದ್ದರು.

ವಿದ್ಯಾರ್ಥಿನಿ ಒಕ್ಕಣೆಯಾದ ಭತ್ತ ಹದ ಮಾಡುತ್ತಿರುವುದು
ಒಕ್ಕಣೆಯಾದ ಹುಲ್ಲನ್ನು ಒಂದೆಡೆ ಇಡಲು ವಿದ್ಯಾರ್ಥಿ ಸಾಗಿಸುತ್ತಿರುವುದು

ತಂದೆ ತಾಯಿ ಹಿಂದೆ ಒಕ್ಕಣೆ ಮಾಡುತ್ತಿದ್ದುದ್ದನ್ನು ಹೇಳುತ್ತಿದ್ದರು. ಅದು ನಮ್ಮ ಅರಿವಿಗೆ ಬಂದಿರಲಿಲ್ಲ ಇಂದು ಶಾಲೆಯಲ್ಲಿ ಒಕ್ಕಣೆಯ ಕುರಿತು ಪ್ರಾತ್ಯಿಕ್ಷಿಕೆ ತೋರಿದಾಗ ಹೆತ್ತವರ ಶ್ರಮ ಅರಿವಾಯಿತು

- ಕಾರ್ತಿಕ್ 5ನೇ ತರಗತಿ ವಿದ್ಯಾರ್ಥಿ

ರಾಗಿ ಮತ್ತು ಭತ್ತ ಒಕ್ಕಣೆಗೆ ಟ್ರ್ಯಾಕ್ಟರ್ ಬಳಸಲಾಗುತ್ತಿದೆ. ಹಿಂದೆ ದೊಡ್ಡ ಕಲ್ಲು ಕಟ್ಟಿ ಎತ್ತುಗಳ ಸಹಾಯದಿಂದ ಒಕ್ಕಣೆ ಮಾಡುತ್ತಿದ್ದರು ಎಂದು ಸುಗ್ಗಿ ಹಬ್ಬದಲ್ಲಿ ತಿಳಿಯಿತು.

- ಕೀರ್ತಿ 7ನೇ ತರಗತಿ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.