ADVERTISEMENT

ಸಾಲಬಾಧೆಯಿಂದ ಆತ್ಮಹತ್ಯೆ, ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ; ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2025, 14:08 IST
Last Updated 29 ಜನವರಿ 2025, 14:08 IST
<div class="paragraphs"><p>ಕುಮಾರಸ್ವಾಮಿ</p></div>

ಕುಮಾರಸ್ವಾಮಿ

   

ಮೈಸೂರು: ‘ಮೈಕ್ರೊ ಫೈನಾನ್ಸ್ ಪ್ರಕರಣಗಳು ಹಾಗು ಅದರಿಂದ ಸಂಭವಿಸುತ್ತಿರುವ ಸಾವುಗಳು ಸರ್ಕಾರಿ ಕಾರ್ಯಕ್ರಮಗಳ ವೈಫಲ್ಯಕ್ಕೆ ಸಾಕ್ಷಿಯಾಗಿವೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಬುಧವಾರ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಕೃಷಿ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ‘ ರಾಜ್ಯದಲ್ಲಿ ಮೈಕ್ರೊ ಫೈನಾನ್ಸ್ ಪ್ರಕರಣಗಳು ಸೃಷ್ಟಿಸುತ್ತಿರುವ ತಲ್ಲಣಗಳು ಒಂದೆರಡಲ್ಲ. ಅನೇಕ ಸಾವು ನೋವುಗಳು ಆಗುತ್ತಿವೆ. ಸರ್ಕಾರಗಳ ಕಾರ್ಯಕ್ರಮಗಳು ಜನರಿಗೆ ಯಾಕೆ ತಲುಪುತ್ತಿಲ್ಲ ಎನ್ನುವ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇದಕ್ಕೆ ಪರಿಹಾರ ಏನು? ಎಂಬ ಬಗ್ಗೆ ಆಲೋಚನೆ ಮಾಡಬೇಕಿದೆ’ ಎಂದರು.

ADVERTISEMENT

‘ ದೇಶದಲ್ಲಿ ಹಣವಿದೆ. ಅದನ್ನು ಹೇಗೆ ಬಳಕೆ ಮಾಡುತ್ತಿದ್ದೇವೆ ಎನ್ನುವುದು ಮುಖ್ಯ. ನಮ್ಮ ಕಾರ್ಯಕ್ರಮಗಳು ಎಲ್ಲಿ ವಿಫಲವಾಗುತ್ತಿವೆ. ಜನಪ್ರತಿನಿಧಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬ ಬಗ್ಗೆ ಓರೆಗೆ ಹಚ್ಚಬೇಕಿದೆ. ಆನ್‌ಲೈನ್ ಲಾಟರಿ, ಗೇಮ್ ಗಳು ಯುವಕರನ್ನು ದಾರಿ ತಪ್ಪಿಸುತ್ತಿವೆ. ಕುಟುಂಬಗಳು ನಾಶವಾಗುತ್ತಿವೆ. ಇಂತಹ ಪಿಡುಗುಗಳಿಗೆ ಕಡಿವಾಣ ಹಾಕದೇ ಇದ್ದರೆ ಇದೇ ಅತಿದೊಡ್ಡ ಸಮಸ್ಯೆಯಾಗಿ ಮುಂದೆ ಸಮಾಜವನ್ನು ಕಾಡಲಿದೆ’ ಎಂದು ಎಚ್ಚರಿಸಿದರು.

‘ನನ್ನ ಪ್ರಕಾರ ರೈತನ ಪ್ರಗತಿಯೇ ದೇಶದ ಪ್ರಗತಿ. ಯಾವುದೇ ಕ್ಷೇತ್ರದಲ್ಲಿ ಎಷ್ಟೋ ಪ್ರಗತಿ ಹೊಂದಿದ್ದೇವೆ ಎನ್ನುವುದಕ್ಕಿಂತ ರೈತನ ಬದುಕು ಎಷ್ಟರ ಮಟ್ಟಿಗೆ ಅಭಿವೃದ್ಧಿಯಾಗಿದೆ ಎನ್ನುವುದು ಮುಖ್ಯ. ರೈತನ ಬದುಕು ಸರಿ ಮಾಡದೆ ಇದ್ದರೆ ನಾವು ಯಾವುದೇ ಕ್ಷೇತ್ರದಲ್ಲಿ ಎಷ್ಟೇ ಬೆಳೆದು ಎಷ್ಟೇ ಪೈಪೋಟಿ ಕೊಟ್ಟರೂ ಉಪಯೋಗವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.