ADVERTISEMENT

ಪರಿಹಾರ ಸಿಗದಿದ್ದರೇ ಆತ್ಮಹತ್ಯೆಯೊಂದೇ ದಾರಿ: ತಂಬಾಕು ಬೆಳೆಗಾರರ ಅಳಲು

ಪಿರಿಯಾಪಟ್ಟಣ ತಾಲ್ಲೂಕು ಬೆಟ್ಟದಪುರ ಹೋಬಳಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 9:23 IST
Last Updated 30 ಜೂನ್ 2020, 9:23 IST
   

ಮೈಸೂರು: ‘45 ವರ್ಷದಿಂದಲೂ ತಂಬಾಕು ಬೆಳೆಯುತ್ತಿದ್ದೇವೆ. ಪ್ರತಿ ಬಾರಿಯಂತೆ ಈ ಬಾರಿಯೂ ಮಂಡಳಿಯೇ ಕೊಟ್ಟ ರಸಗೊಬ್ಬರ ಬಳಸಿದ್ದು, ಬೆಳೆ ಹಾನಿಯಾಗಿದೆ. ಸೂಕ್ತ ಪರಿಹಾರ ಕೊಡದಿದ್ದರೇ, ಆತ್ಮಹತ್ಯೆಯೇ ನಮಗುಳಿಯುವ ಏಕೈಕ ಮಾರ್ಗವಾಗಲಿದೆ’ ಎಂದು ಪಿರಿಯಾಪಟ್ಟಣ ತಾಲ್ಲೂಕಿನ ಜೋಗನಹಳ್ಳಿಯ ತಂಬಾಕು ಬೆಳೆಗಾರ ಆರ್.ದೇವರಾಜು ಅಳಲು ತೋಡಿಕೊಂಡರು.

‘ತಂಬಾಕು ಮಂಡಳಿ ಸರಬರಾಜು ಮಾಡಿದ ಒಂದು ಬ್ಯಾಚ್‌ನಲ್ಲಿನ ಎಸ್‌ಒಪಿ (ಸಲ್ಪರ್‌ ಆಫ್ ಪೋಟ್ಯಾಶ್‌) ರಸಗೊಬ್ಬರದಿಂದಲೇ ಬೆಳೆ ಹಾನಿಯಾಗಿದೆ. ಬ್ಯಾಂಕ್‌ನಲ್ಲಿ ಸಾಲವಿದೆ. ದಿಕ್ಕು ತೋಚದಂತಹ ಸ್ಥಿತಿ ನಮ್ಮದಾಗಿದೆ’ ಎಂದು ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಾನಿಯಾದ ತಂಬಾಕು ಗಿಡ ಪ್ರದರ್ಶಿಸಿ ಗದ್ಗದಿತರಾದರು.

‘ತಂಬಾಕು ಮಂಡಳಿಯ ಅಧಿಕಾರಿಗಳು ಸೂಚಿಸಿದ ಎಲ್ಲ ಕ್ರಮ ಕೈಗೊಂಡರೂ, ಫಸಲು ಹಾನಿಯಾಗುವುದು ತಪ್ಪಿಲ್ಲ. ತಂಬಾಕು ಗಿಡದಲ್ಲಿನ ಎಲೆಗಳು ಸೊಟ್ಟಗಾಗಿದ್ದು, ಬೆಳೆ ಸಂಪೂರ್ಣ ಹಾನಿಯಾದಂತೆ. ರಸಗೊಬ್ಬರದ ದೋಷದಿಂದ ಉಂಟಾಗಿರುವ ಹಾನಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಅವರು ಆಗ್ರಹಿಸಿದರು.

ADVERTISEMENT

‘ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಹೋಬಳಿಯ ಭುವನಹಳ್ಳಿ, ಜೋಗನಹಳ್ಳಿ, ಸಾಲುಕೊಪ್ಪಲು, ಕೊಣಸೂರು ಸೇರಿದಂತೆ ಇನ್ನಿತರೆ ಗ್ರಾಮಗಳಲ್ಲಿ ಇದೇ ಬ್ಯಾಚ್‌ನ ರಸಗೊಬ್ಬರವನ್ನು ರೈತರು ಬಳಸಿದ್ದು, ಈ ಎಲ್ಲರ ಬೆಳೆ ಹಾನಿಗೊಳಗಾಗಿದೆ. ಇದಕ್ಕೆ ಪರಿಹಾರ ನೀಡುವಂತೆ ಕೋರಿ ತಂಬಾಕು ಮಂಡಳಿ, ತಹಶೀಲ್ದಾರ್ ಕಚೇರಿ, ಕೃಷಿ ಇಲಾಖೆಗೆ ಎಡ ತಾಕಿದರೂ ಅಧಿಕಾರಿಗಳು ಅಲ್ಲಿಗೋಗಿ, ಇಲ್ಲಿಗೋಗಿ ಎಂದು ಸತಾಯಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾವೆಲ್ಲಿಗೆ ಹೋಗಬೇಕು ?’ ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌)ಯ ರೈತ ಘಟಕದ ಅಧ್ಯಕ್ಷ ಜೋಗನಹಳ್ಳಿ ಗುರುಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.

‘ತಂಬಾಕು ಮಂಡಳಿ ಅಧಿಕಾರಿಗಳು ಸ್ಪಂದಿಸದಾಗಿದ್ದಾರೆ. ಹಿಂದಿನ ವರ್ಷದ ಶೇ 15ರಷ್ಟು ತಂಬಾಕು ಇಂದಿಗೂ ಮಾರಾಟವಾಗಿಲ್ಲ. ಸಂಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ಸರ್ಕಾರ ಧಾವಿಸದಾಗಿವೆ. ಚುನಾಯಿತ ಜನಪ್ರತಿನಿಧಿಗಳು ನಮ್ಮ ಸಮಸ್ಯೆ ಆಲಿಸದಾಗಿದ್ದಾರೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಯುವ ಘಟಕದ ರಾಜ್ಯ ಕಾರ್ಯದರ್ಶಿ ಜಿ.ಮೋಹನ್ ದೂರಿದರು.

ಜಗದೀಶ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.