ADVERTISEMENT

ಪ್ರತ್ಯೇಕ ಪ್ರಕರಣ; ಮೂವರ ಸಾವು

ಜೆ.ಪಿ.ನಗರದ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 5:20 IST
Last Updated 18 ಆಗಸ್ಟ್ 2021, 5:20 IST

ಮೈಸೂರು: ಜಿಲ್ಲೆಯಲ್ಲಿ ಮಂಗಳವಾರ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮಹಿಳೆಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಅವರ ನಿವಾಸದಲ್ಲಿ ಪತ್ತೆಯಾಗಿದೆ.

ಇಲ್ಲಿನ ಜೆ.ಪಿ.ನಗರದ ಸಿದ್ಧಲಿಂಗೇಶ್ವರ ಬಡಾವಣೆಯ ನಿವಾಸಿ ಭಾರತೀ (63) ಅವರ ಮೃತದೇಹ ಕುಳಿತ ಭಂಗಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಅವರ ನಿವಾಸದಲ್ಲಿ ಪತ್ತೆಯಾಗಿದೆ. ಏಕಾಂಗಿಯಾಗಿ ವಾಸವಿದ್ದ ಇವರು ಕಳೆದ 4 ದಿನಗಳಿಂದಲೂ ಮನೆಯಿಂದ ಹೊರಬಂದಿರಲಿಲ್ಲ. ಮನೆಯಿಂದ ಕೊಳೆತ ವಾಸನೆ ಬರುವುದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಒಳಗಿನಿಂದ ಚಿಲಕ ಹಾಕಿದ್ದ ಬಾಗಿಲನ್ನು ಒಡೆದು ಪ್ರವೇಶಿಸಿದಾಗ ಕುಳಿತ ಭಂಗಿಯಲ್ಲಿ ಭಾರತೀ ಅವರ ಶವ ಪತ್ತೆಯಾಗಿದೆ. ಮೇಲ್ನೋಟಕ್ಕೆ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದೆನಿಸುತ್ತಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರುಣಾ ಸಮೀಪದ ಕುಪ್ಪೇಗಾಲದ ಕಾಲುವೆಯಲ್ಲಿ ಮೈಸೂರು ತಾಲ್ಲೂಕಿನ ಎಂ.ಹುಂಡಿ ಗ್ರಾಮದ ನಿವಾಸಿ ಚಂದ್ರ (35) ಎಂಬುವವರ ಶವ ತೇಲಿಕೊಂಡು ಬಂದಿದೆ. ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ವರುಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಹುಣಸೂರು ನಗರದ ಹೊಸ ಸೇತುವೆಯಿಂದ ಜಿಗಿದು ವಿರಾಜಪೇಟೆ ನಿವಾಸಿ ಇಬ್ರಾಹಿಂ (53) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.