ಅಮಾನತು
ಮೈಸೂರು: ‘ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ಕಾರ್ಯಕ್ಕೆ ಹಾಜರಾಗದೇ, ಅಧಿಕಾರಿಗಳ ಕರೆ ಸ್ವೀಕರಿಸದೆ ನಿರ್ಲಕ್ಷ್ಯ ತೋರಿದ 8 ಸಹಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ’ ಎಂದು ಡಿಡಿಪಿಐ ಎಸ್.ಟಿ.ಜವರೇಗೌಡ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್‌ಕುಮಾರ್ ಆದೇಶದ ಮೇರೆಗೆ ಕ್ರಮ ವಹಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೊಪ್ಪಳ ವರದಿ: ಸಮೀಕ್ಷೆಗೆ ಬರದೇ ಕರ್ತವ್ಯಲೋಪ ಎಸಗಿದ್ದ ತಾಲ್ಲೂಕಿನ ಜೂಲಕುಂಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕ ರಾಮಪ್ಪ ತಳವಾರ ಅವರನ್ನು ಅಮಾನತು ಪಡಿಸಲಾಗಿದೆ.
ರಾಮಪ್ಪ ತಳವಾರ ಸಮೀಕ್ಷೆ ಕೆಲಸ ಆರಂಭಿಸಿಲ್ಲ ಎಂಬುದು ಸೇರಿ ಕುಷ್ಟಗಿ ಸಿಆರ್‌ಪಿ ವರದಿ ಆಧರಿಸಿ ಕ್ರಮ ಜರುಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಸಮೀಕ್ಷೆಗೆ ಗೈರು: 57 ಸಿಬ್ಬಂದಿಗೆ ನೋಟಿಸ್
ಲಿಂಗಸುಗೂರು (ರಾಯಚೂರು ಜಿಲ್ಲೆ): ಸಮೀಕ್ಷೆಗೆ ನಿರಂತರವಾಗಿ ಗೈರಾದ 57 ಸಿಬ್ಬಂದಿಗೆ ತಾಲ್ಲೂಕು ಮಟ್ಟದ ಸಮನ್ವಯ ಸಮಿತಿ ಅಧ್ಯಕ್ಷ, ಉಪ ವಿಭಾಗಾಧಿಕಾರಿ ಬಸವಣೆಪ್ಪ ಕಲಶೆಟ್ಟಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
‘ತಾಲ್ಲೂಕಿನಲ್ಲಿ ಸಮೀಕ್ಷೆಗೆ ನಿಯೋಜನೆಗೊಂಡ ಸಿಬ್ಬಂದಿ ಪೈಕಿ 57 ಮಂದಿ ಸತತವಾಗಿ ಗೈರಾಗಿದ್ದಾರೆ. ಹಾಜರಾಗಲು ಸೂಚಿಸಿದರೂ ಬಂದಿಲ್ಲ. ನಿರ್ಲಕ್ಷ್ಯದಿಂದಾಗಿ ಸಮೀಕ್ಷಾ ಕಾರ್ಯ ಕುಂಠಿತವಾಗಿದೆ. 24 ಗಂಟೆಯೊಳಗೆ ಸಮಜಾಯಿಷಿ ನೀಡಿ’ ಎಂದು ಸೂಚಿಸಿದ್ದಾರೆ.
ಕಾರ್ಯಕರ್ತೆಯರ ವಜಾ
ರಾಯಚೂರು ವರದಿ: ಸಮೀಕ್ಷೆಗೆ ನಿಯೋಜಿಸಿದ್ದ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಆರು ಅಂಗನವಾಡಿ ಕಾರ್ಯಕರ್ತೆಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಅಂಜಳ–2 ಕೇಂದ್ರದ ಗುಂಡಮ್ಮ, ನಗರಗುಂಡ–2ರ ರಂಗಮ್ಮ, ಅಶೋಕ–ನೇತಾಜಿ ಓಣಿಯ ಮುತ್ತಮ್ಮ, ಮಟ್ಟೇರ್‌ದೊಡ್ಡಿಯ ಚಾಂದಬಿ, ದೇವದುರ್ಗದ ನೇತಾಜಿ ಓಣಿಯ ವಿಜಯಲಕ್ಷ್ಮಿ ಹಾಗೂ ಬಾಪೂಜಿ ಓಣಿಯ ರೇಣುಕಾ ಅವರನ್ನು ಅಮಾನತುಗೊಳಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನವೀನ್ ಕುಮಾರ್ ಯು. ಆದೇಶ ಹೊರಡಿದ್ದಾರೆ.
‘ನಾಲ್ಕು ದಿನವಾದರೂ ಸಮೀಕ್ಷೆಯಲ್ಲಿ ಪ್ರಗತಿ ಕಾಣಿಸಿಲ್ಲ. ಗಣತಿ ಕಾರ್ಯಕ್ಕೆ ಹೋಗದಂತೆ ಬೇರೆ ಕಾರ್ಯಕರ್ತೆಯರಿಗೂ ಪ್ರಚೋದಿಸಿದ್ದಾರೆ. ಗಣತಿ ಕಾರ್ಯಕ್ಕೂ ಹಾಜರಾಗಿಲ್ಲ’ ಎಂದು ಎಂದು ಆದೇಶದಲ್ಲಿ ಕಾರಣ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.