ADVERTISEMENT

ಸಮೀಕ್ಷೆ; ಹಳ್ಳಿ, ಸ್ಲಂ ಜನರೇ ಮೇಲು

ಸಮೀಕ್ಷೆದಾರರನ್ನು ಗೇಟಿನ ಹೊರಗೆ ನಿಲ್ಲಿಸುವ ನಗರ, ಪಟ್ಟಣದ ಜನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 22:12 IST
Last Updated 2 ಅಕ್ಟೋಬರ್ 2025, 22:12 IST
ಆಯುಧಪೂಜೆಯ ದಿನ ಸಮೀಕ್ಷೆಗೆ ಬಳಸುವ ಸಾಮಗ್ರಿಗಳಿಗೆ ಪೂಜೆ ಸಲ್ಲಿಸಿ ಶುಭಾಶಯ ಹಾರೈಸಿದ್ದ ಸಮೀಕ್ಷೆದಾರರು
ಆಯುಧಪೂಜೆಯ ದಿನ ಸಮೀಕ್ಷೆಗೆ ಬಳಸುವ ಸಾಮಗ್ರಿಗಳಿಗೆ ಪೂಜೆ ಸಲ್ಲಿಸಿ ಶುಭಾಶಯ ಹಾರೈಸಿದ್ದ ಸಮೀಕ್ಷೆದಾರರು   

ಮೈಸೂರು: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಕೈಗೆತ್ತಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡುವಲ್ಲಿ, ‘ನಗರ ಮತ್ತು ಪಟ್ಟಣ ಪ್ರದೇಶಗಳ ನಿವಾಸಿಗಳಿಗಿಂತ, ಹಳ್ಳಿ ಮತ್ತು ಸ್ಲಂ ಜನರೇ ಮೇಲು’ ಎಂಬ ಅಭಿಪ್ರಾಯ ಸಮೀಕ್ಷೆದಾರರಲ್ಲಿ ಮೂಡಿದೆ.

ಪರಿಣಾಮವಾಗಿ, ‘ನಗರ ಪ್ರದೇಶ ಬೇಡ, ಗ್ರಾಮೀಣ ಪ್ರದೇಶಗಳಿಗೇ ನಿಯೋಜಿಸಿ’ ಎಂಬ ಬೇಡಿಕೆಯನ್ನೂ ಸಮೀಕ್ಷೆದಾರರು ಮುಂದಿಡುತ್ತಿದ್ದಾರೆ.

ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಮಾಹಿತಿ ನೀಡಲು ಏಕಾಏಕಿ ನಿರಾಕರಿಸುವ ಘಟನೆಗಳು ಹೆಚ್ಚಿವೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಸಮೀಕ್ಷೆಯ ಉದ್ದೇಶವನ್ನು ವಿವರಿಸಿದ ಬಳಿಕ ಜನ ಸ್ವಯಂ ಸ್ಫೂರ್ತಿಯಿಂದ ಮನೆಯೊಳಕ್ಕೆ ಕರೆದು, ಉಪಚರಿಸಿ ಮಾಹಿತಿ ನೀಡುತ್ತಿದ್ದಾರೆ.

ADVERTISEMENT

‘ಹಳ್ಳಿಗಳಲ್ಲಿ, ಸ್ಲಂಗಳಲ್ಲಿರುವವರೇ ಮೇಲು. ಮಾಹಿತಿ ಜೊತೆಗೆ ಒಂದು ಲೋಟ ನೀರಾದರೂ ಕೊಡ್ತಾರೆ. ಪ್ರೀತಿಯಿಂದ ಮಾತಾಡುತ್ತಾರೆ. ನಗರ ಪ್ರದೇಶದಲ್ಲಿ, ಶ್ರೀಮಂತರು ಹೆಚ್ಚಿರುವ ಬಡಾವಣೆಗಳಲ್ಲಿ ಕೊಡುವ ಪ್ರತಿಕ್ರಿಯೆಯಲ್ಲಿ ಅವಮಾನ ಮತ್ತು ಅನುಮಾನವೇ ಜಾಸ್ತಿ’ ಎಂದು ಸಮೀಕ್ಷೆದಾರರೊಬ್ಬರು ’ಪ್ರಜಾವಾಣಿ’ಗೆ ತಿಳಿಸಿದರು.

‘ಅಪಾರ್ಟ್‌ಮೆಂಟ್‌ಗಳು ಹಾಗೂ ಬಂಗಲೆಗಳ ಒಳಗೆ ಹೋಗಲು ಅವಕಾಶವೇ ದೊರಕುತ್ತಿಲ್ಲ. ಕಾಂಪೌಂಡ್‌ನಲ್ಲಿ ನಾಯಿ ಇರುತ್ತದೆ, ಹೊರಗೆ ವಾಚ್‌ಮನ್‌ ಇರುತ್ತಾರೆ. ಒಳಗೆ ಹೋದರೂ ಅಲ್ಲಿನ ನಿವಾಸಿಗಳಿಗೆ ಸಮೀಕ್ಷೆ ಬಗ್ಗೆ ಆಸಕ್ತಿಯೂ ಇಲ್ಲ, ನಂಬಿಕೆಯೂ ಇಲ್ಲ. ನಗರದಲ್ಲಿದ್ದರೂ ಅನಾಗರೀಕರಂತೆ ವರ್ತಿಸುತ್ತಾರೆ’ ಎಂಬುದು ಮತ್ತೊಬ್ಬ ಸಮೀಕ್ಷೆದಾರರ ಅನುಭವ.

ಸಾಲ ನೀವು ತೀರಿಸ್ತೀರಾ?; ‘ಮನೆಯೊಳಗೆ ಕರೆಯದೇ ಗೇಟ್‌ ಹೊರಗೇ ನಿಲ್ಲಿಸುತ್ತಾರೆ. 60 ಪ್ರಶ್ನೆಗಳನ್ನು ನಿಂತುಕೊಂಡೇ ಕೇಳಿ ದಾಖಲಿಸಿಕೊಳ್ಳಬೇಕು. ಆದಾಯ, ಸಾಲದ ಮಾಹಿತಿಯನ್ನು ನೀಡಲು ಬಹುತೇಕರು ನಿರಾಕರಿಸುತ್ತಾರೆ. ಯಾವುದಾದರೂ ಸಾಲ ಇದೆಯೇ ಎಂದು ಕೇಳಿದರೆ, ನಿಮಗೆ ಅದೆಲ್ಲ ಯಾಕೆ ಎನ್ನುತ್ತಾರೆ. ಕೆಲವರು ನೀವು ನಮ್ಮ ಸಾಲ ತೀರಿಸ್ತೀರಾ ಎಂದೂ ಕೇಳುತ್ತಾರೆ. ನಮ್ಮನ್ನು ಸೇಲ್ಸ್‌ಮನ್‌ಗಳಂತೆ ನೋಡುತ್ತಾರೆ’ ಎಂದು ಕುವೆಂಪುನಗರದ ಸಮೀಕ್ಷೆದಾರರೊಬ್ಬರು ವಿಷಾದಿಸಿದರು.

‘ಒಟ್ಟು ಜನಸಂಖ್ಯೆ ಗೊತ್ತಾಗದು’

‘ನನಗೆ 250 ಮನೆಗಳ ಸಮೀಕ್ಷೆ ಹೊಣೆ ನೀಡಲಾಗಿದೆ. ಇದುವರೆಗೆ ಭೇಟಿ ನೀಡಿರುವ ಮನೆಗಳ ಪೈಕಿ ಶೇ 30ರಷ್ಟು ಮಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡಿಲ್ಲ. ಅವರ ಕುಟುಂಬದ ಸದಸ್ಯರ ಸಂಖ್ಯೆಯನ್ನು ನಮೂದಿಸುವ ಅವಕಾಶವಿಲ್ಲ. ಸಮೀಕ್ಷೆಯಲ್ಲಿ ಪಾಲ್ಗೊಂಡವರ ಮಾಹಿತಿ ಅಂಕಿ ಅಂಶವನ್ನಷ್ಟೇ ನಮೂದಾಗುತ್ತಿದೆ. ಪಾಲ್ಗೊಳ್ಳದ ಕುಟುಂಬದ ಸದಸ್ಯರ ಅಂಕಿ ಅಂಶವನ್ನು ದಾಖಲಿಸಲು ಅವಕಾಶವಿದ್ದಿದ್ದರೆ ಒಟ್ಟಾರೆ ಜನಸಂಖ್ಯೆಯ ಸ್ಪಷ್ಟ ಚಿತ್ರಣವಾದರೂ ಸಿಗುತ್ತಿತ್ತು’ ಎಂದು ಶಿಕ್ಷಕಿಯೊಬ್ಬರು ಹೇಳಿದರು.

ಅಲ್ಲಿ‌ ಜಂಬೂ ಸವಾರಿ; ಇಲ್ಲಿ‌‌ ಸಮೀಕ್ಷೆಯ ದಾರಿ ಮೈಸೂರು ಜಿಲ್ಲೆಯ ನಗರ ಮತ್ತು ಗ್ರಾಮೀಣ‌ ಪ್ರದೇಶಗಳ ಬಹಳಷ್ಟು ಜನ ಜಂಬೂಸವಾರಿಯತ್ತ ನಡೆದರೆ ಸಮೀಕ್ಷೆದಾರರು ತಾವು ಸಮೀಕ್ಷೆ ನಡೆಸಬೇಕಾದ ಮನೆಗಳತ್ತ ಹೆಜ್ಜೆ ಹಾಕಿದರು. ಹಲವೆಡೆ ಮನೆಗಳಿಗೆ ಬೀಗ ಹಾಕಲಾಗಿತ್ತು.‌ ಇನ್ನೂ ಕೆಲವಡೆ ಜಂಬೂ ಸವಾರಿ ನೋಡಲು ಹೊರಡುವ ಧಾವಂತದಲ್ಲಿದ್ದ ಜನ ನಾಳೆ ಬನ್ನಿ’ ಎಂದು ಹೇಳಿದರು’ ಎಂದು ಸಮೀಕ್ಷೆದಾರರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.