ಕೆ.ಆರ್.ನಗರ: ‘ಸಂಘದ ಧ್ವನಿಯಾಗಿರುವ ಕಾರ್ಯದರ್ಶಿಯನ್ನು ಅಮಾನತು ಮಾಡುವುದಾದರೆ ನಮ್ಮೆಲ್ಲರನ್ನು ಅಮಾನತು ಮಾಡಬೇಕು’ ಎಂದು ಗ್ರಾಮ ಆಡಳಿತ ಅಧಿಕಾರಿಗಳ ಸಂಘ ತಾಲ್ಲೂಕು ಘಟಕದ ಅಧ್ಯಕ್ಷೆ ಐಶ್ವರ್ಯಾ ಒತ್ತಾಯಿಸಿದರು.
ಇಲ್ಲಿನ ತಾಲ್ಲೂಕು ಆಡಳಿತಸೌಧ ಆವರಣದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ 10 ದಿನಗಳಿಂದ 2ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶನಿವಾರ ಮನವಿ ಸಲ್ಲಿಸಿ ಅವರು ಮಾತನಾಡಿದರು.
‘ಪೌತಿ ಖಾತೆಗಳು ಈ ಹಿಂದೆ ಮಾಡಿದಂತೆ ಈಗಲೂ ಮಾಡಿಕೊಂಡು ಬರಲು ಸಿದ್ಧರಿದ್ದೇವೆ. ಆದರೆ, ಸೂಕ್ತ ಸೌಲಭ್ಯ ಒದಗಿಸುವವರೆಗೂ ಆಂದೋಲನ ಮತ್ತು ರಿಪಬ್ಲಿಕೇಶನ್ ಮಾದರಿಯಲ್ಲಿ ಇ-ಪೌತಿ ಖಾತಾ ಮಾಡುವುದಿಲ್ಲ ಎನ್ನುವುದು ನಮ್ಮ ಬೇಡಿಕೆ’ ಎಂದು ಹೇಳಿದರು.
‘ರಾಜ್ಯದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಗ್ರಾಮ ಆಡಳಿತ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದೇವೆ. ಅಮಾನತು ಮಾಡುವುದಾದರೆ ರಾಜ್ಯದಲ್ಲಿ ಇರುವ ಎಲ್ಲ ವಿ.ಎ ಗಳನ್ನು ಸಾಮೂಹಿಕವಾಗಿ ಅಮಾನತು ಮಾಡುವಂತೆ ಲಿಖಿತ ರೂಪದಲ್ಲಿ ಈ ಹಿಂದೆ ಮನವಿ ಸಲ್ಲಿಸಿದ್ದೇವೆ. ಸರ್ಕಾರದ ಒತ್ತಡಕ್ಕೆ ಮಣಿಯದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ನಾಯಕ ಅವರನ್ನು ಶುಕ್ರವಾರ ಅಮಾನತು ಮಾಡಿದೆ. ಅವರು ನಮ್ಮೆಲ್ಲರ ಧ್ವನಿಯಾಗಿ ಮಾತನಾಡಿದ್ದಾರೆ. ಸಂಘ ಇದನ್ನು ಕಟುವಾಗಿ ಖಂಡಿಸಿದೆ. ಅವರು ಮಾತನಾಡಿದ್ದಾರೆ ಎಂದು ಅವರನ್ನು ಏಕಾಏಕೀ ಅಮಾನತು ಮಾಡುವುದಾದರೆ ನಮ್ಮೆಲ್ಲರನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.
ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಕೆ.ವಿ.ರಮೇಶ್, ಉಮೇಶ್, ಕಾರ್ಯದರ್ಶಿ ಮಹೇಶ್, ಎಸ್.ಎನ್.ಮಂಜು, ಡಿ.ಮಂಜು, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಗೌರವ ಅಧ್ಯಕ್ಷ ಕೆ.ಎಂ.ರಜಿತ್, ಖಜಾಂಚಿ ಜ್ಯೋತಿ ಪಾಟೀಲ್, ನಿರ್ದೇಶಕರಾದ ಜೆ.ಭಾರತಿ, ಎಂ.ಆಕಾಶ್, ಲಕ್ಷ್ಮೀ ಪೂಜಾರಿ, ಎಂ.ನವೀನ್ ಕುಮಾರ್, ಬಿ.ಕೆ.ನವೀನ, ಜಿ.ಎಂ.ದೀಪಶ್ರೀ, ಹೀನಾ ಕೌಸರ್, ಉಮೇಶ್, ರಶ್ಮಿ, ಮಂಜುನಾಥ್, ಎಸ್.ಪ್ರಿಯಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.