ADVERTISEMENT

Suttur Jatre: ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೆಗೆ ಅದ್ದೂರಿ ಚಾಲನೆ

ಕಪಿಲಾ ತಟದಲ್ಲಿ ಭಕ್ತಿಯ ಸಂಗಮ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 14:27 IST
Last Updated 15 ಜನವರಿ 2026, 14:27 IST
   

ಸುತ್ತೂರು (ಮೈಸೂರು ಜಿಲ್ಲೆ): ಕಪಿಲಾ ನದಿ ತಟದಲ್ಲಿರುವ ಸುತ್ತೂರಿನಲ್ಲಿ ಸಂಕ್ರಾಂತಿಯ ದಿನವಾದ ಗುರುವಾರ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ ದೊರೆಯಿತು. ಮೊದಲ ದಿನವೇ ಸಾವಿರಾರು ಭಕ್ತರು ಜಾತ್ರೆಗೆ ಬಂದರು.

ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿರುವ ‘ವೀರಸಿಂಹಾಸನ ಮಹಾಸಂಸ್ಥಾನ’ದ ಜೊತೆಗೆ ಇಡೀ ಊರೇ ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದು, ಜಾತ್ರೆಯ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು.

ಮಠದ ಆವರಣದಿಂದ ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವ ಮೂರ್ತಿಯನ್ನು ಜಾನಪದ ಕಲಾತಂಡಗಳೊಂದಿಗೆ ಕರ್ತೃ ಗದ್ದುಗೆಗೆ ಕರೆತರುವ ಮೂಲಕ ಸಂಜೆ ಜಾತ್ರಾ ಮಹೋತ್ಸವ ಆರಂಭವಾಯಿತು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಂಸದರಾದ ಜಗದೀಶ ಶೆಟ್ಟರ್‌ ಹಾಗೂ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ನಗಾರಿ ಬಾರಿಸಿ ಚಾಲನೆ ನೀಡಿದರು.

ADVERTISEMENT

ಸುತ್ತೂರು ಜಾತ್ರೆಯು ಅರಿವಿನ ಉತ್ಸವವೂ ಆಗಿದ್ದು, ಮೊದಲ ದಿನ ಕೃಷಿ ಮೇಳ ಹಾಗೂ ವಸ್ತುಪ್ರದರ್ಶನಗಳು ಜನರ ಜ್ಞಾನ ಹೆಚ್ಚಿಸಿದವು. 15 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ವಿವಿಧ ತಾಕುಗಳ ಪ್ರಾತ್ಯಕ್ಷಿಕೆ, ಹೊಸ ತಳಿಗಳ ಪ್ರಯೋಗಗಳು ರೈತರನ್ನು ಆಕರ್ಷಿಸಿದವು. 320ಕ್ಕೂ ಹೆಚ್ಚು ಮಳಿಗೆಗಳಲ್ಲಿನ ವೈವಿಧ್ಯಮಯ ಪ್ರದರ್ಶನ ಜನರನ್ನು ಸೆಳೆಯಿತು. ಜೊತೆಗೆ ಸಾಂಸ್ಕೃತಿಕ ಮೇಳ, ಆರೋಗ್ಯ ತಪಾಸಣಾ ಶಿಬಿರ ಹಾಗೂ ಕಪಿಲಾ ನದಿಯಲ್ಲಿ ದೋಣಿ ವಿಹಾರಕ್ಕೂ ಚಾಲನೆ ದೊರೆಯಿತು.

ಜಾತ್ರೆಯು ದೇಸಿ ಸಂಸ್ಕೃತಿಯ ಪ್ರತಿಬಿಂಬವೂ ಆಗಿದೆ. ಶನಿವಾರದಿಂದ ಮೂರು ದಿನಗಳು ಜಾನುವಾರು ಜಾತ್ರೆಯೂ ಇರಲಿದೆ. ಜೊತೆಗೆ ಭಜನಾ ಮೇಳ, ರಂಗೋಲಿ ಸ್ಪರ್ಧೆಯಂತಹ ದೇಸಿ ಆಟಗಳು, ನಿತ್ಯ ನಾಲ್ಕಾರು ವೇದಿಕೆಗಳಲ್ಲಿ ಪೌರಾಣಿಕ ನಾಟಕ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಜಿಸಲಿವೆ.

ನಿತ್ಯ ದಾಸೋಹ:

ಜಾತ್ರೆ ನಿಮಿತ್ತ ತ್ರಿಕಾಲ ದಾಸೋಹವೂ ಗುರುವಾರ ಆರಂಭಗೊಂಡಿತು. ಜ. 20 ರವರೆಗೆ ಆರು ದಿನಳು ಜಾತ್ರೆ ನಡೆಯಲಿದ್ದು, ಹೊರ ಜಿಲ್ಲೆ–ರಾಜ್ಯಗಳಿಂದಲೂ ಭಕ್ತರು ಬರಲಿದ್ದಾರೆ. ಈ ಬಾರಿ 25 ಲಕ್ಷ ಮಂದಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. 5 ಸಾವಿರಕ್ಕೂ ಹೆಚ್ಚು ಬಾಣಸಿಗರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಮಠದ ಭಕ್ತರು ದಾಸೋಹಕ್ಕೆ ಉದಾರ ಕಾಣಿಕೆ ನೀಡಿದ್ದಾರೆ.

ಶುಕ್ರವಾರ ಸಾಮೂಹಿಕ ವಿವಾಹ:

ಜಾತ್ರೆಯ ಆಕರ್ಷಣೆಗಳಲ್ಲಿ ಒಂದಾದ ಸಾಮೂಹಿಕ ವಿವಾಹ ಕಾರ್ಯಕ್ರಮವು ಶುಕ್ರವಾರ (ಜ. 16) ಬೆಳಿಗ್ಗೆ 10ಕ್ಕೆ ನಡೆಯಲಿದೆ. ಜಾತಿ–ಧರ್ಮಗಳ ಹಂಗಿಲ್ಲದೆ ನೂರಾರು ಜೋಡಿ ವೈವಾಹಿಕ ಬದುಕಿಗೆ ಕಾಲಿಡುತ್ತಿವೆ.

ಬಿಷಪ್‌ಗಳ ಸಾನ್ನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದು, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಶನಿವಾರ (ಜ.17) ಬೆಳಿಗ್ಗೆ 11ಕ್ಕೆ ರಥೋತ್ಸವ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.