
ಮೈಸೂರು: ‘ಎಲ್ಲ ಧರ್ಮಗಳಿಗಿಂತ ಮಾನವ ಧರ್ಮ ಮೇಲು. ನಾವೆಲ್ಲರೂ ಮೂಲತಃ ಮನುಷ್ಯರು. ನಂತರವಷ್ಟೇ ನಮ್ಮ ಜಾತಿ–ಧರ್ಮ. ಮನುಷ್ಯರಾಗಿ ಹುಟ್ಟಿ, ಮನುಷ್ಯರಾಗಿಯೇ ಸಾಯೋಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ನಡೆದಿರುವ ಶಿವರಾತ್ರೀಶ್ವರ ಶಿವಯೋಗಿ ಶ್ರೀಗಳ ಜಾತ್ರಾ ಮಹೋತ್ಸವದಲ್ಲಿ ಭಾನುವಾರ ‘ ಕೃಷಿಯಲ್ಲಿ ಮಹಿಳೆ: ಸುಸ್ಥಿರ ಅಭಿವೃದ್ದಿ ಮತ್ತು ಆಹಾರ ಭದ್ರತೆ’ ಕುರಿತ ಕೃಷಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಬಸವಣ್ಣ ಹೇಳುವಂತೆ, ದಯೆಯೇ ಧರ್ಮದ ಮೂಲವಯ್ಯ. ದಯೆ ಇಲ್ಲದ ಧರ್ಮವಿಲ್ಲ. ನಾವೆಲ್ಲರೂ ಬಸವಣ್ಣನ ವಿಚಾರದಲ್ಲಿ ನಂಬಿಕೆ ಇಟ್ಟವರು. ಇದನ್ನು ಅರ್ಥಮಾಡಿಕೊಳ್ಳಬೇಕು. ಯಾವ ಧರ್ಮವೂ ಪರಸ್ಪರ ಪ್ರೀತಿಸಿ ಎಂದು ಹೇಳುತ್ತದೆಯೇ ಹೊರತು ದ್ವೇಷಿಸಿ ಎಂದು ಹೇಳುವುದಿಲ್ಲ. ಇನ್ನೊಬ್ಬರನ್ನು ದ್ವೇಷಿಸುವ ಕೆಲಸ ಮಾಡಬಾರದು. ಇದೇ ಸಮಾಜಕ್ಕೆ ನಾವು ಕೊಡುವ ಕೊಡುಗೆ’ ಎಂದು ಆಶಿಸಿದರು.
‘ಸುತ್ತೂರು ಜಾತ್ರೆಯು ನಾಡಿನ ಪ್ರಮುಖ ಜಾತ್ರೆ. ಸಾವಿರ ವರ್ಷಕ್ಕೂ ಅಧಿಕ ಇತಿಹಾಸ ಹೊಂದಿರುವ ಮಠ ಇದಾಗಿದ್ದು, ಧಾರ್ಮಿಕ ಕಾರ್ಯಗಳ ಜೊತೆಗೆ ಶಿಕ್ಷಣಕ್ಕೂ ಒತ್ತು ನೀಡುತ್ತ ಜ್ಞಾನ ಮತ್ತು ಅನ್ನ ದಾಸೋಹ ಮಾಡುತ್ತ ಬಂದಿದೆ. ಶಿಕ್ಷಣದಿಂದ ಮಾತ್ರ ಸ್ವಾಭಿಮಾನದ ಬದುಕು ಸಾಧ್ಯ. ನಮ್ಮ ವ್ಯಕ್ತಿತ್ವ ರೂಪುಗೊಳ್ಳುವುದು ಅದರಿಂದಲೇ. ಸಮಾಜದಲ್ಲಿ ಶೇ 85ರಷ್ಟು ಜನ ಶಿಕ್ಷಣ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಅದನ್ನು ಮನಗೊಂಡ ಸುತ್ತೂರು ಮಠವು ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದಿದೆ’ ಎಂದು ವಿವರಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ‘ ಕರ್ನಾಟಕದಲ್ಲಿ ಪ್ರಗತಿಪರ ಶರಣ ಪರಂಪರೆ ಬೆಳೆಯಲು ಇಲ್ಲಿನ ಮಠಗಳು ಕಾರಣ. ರೈತರ ಬದುಕು ಸುಧಾರಣೆ ಆದಲ್ಲಿ ಮಾತ್ರ ದೇಶದ ಸುಧಾರಣೆ ಸಾಧ್ಯ’ ಎಂದರು.
ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಪ್ರಗತಿಪರ ರೈತರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನಕಪುರ ದೇಗುಲ ಮಠದ ಚನ್ನಬಸವ ಸ್ವಾಮೀಜಿ ಹಾಗೂ ವಾಟಾಳು ಸೂರ್ಯಸಿಂಹಾಸನ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ವೈದ್ಯಕೀಯ ಸಚಿವ ಶರಣಪ್ರಕಾಶ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕರಾದ ರವಿಶಂಕರ್, ಗಣೇಶಪ್ರಸಾದ್, ಎ.ಆರ್. ಕೃಷ್ಣಮೂರ್ತಿ, ಇಂಡಿ ಶಾಸಕ ಯಶವಂತ ಪಾಟೀಲ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ, ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ವಿಭಾಗೀಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಮುಖಂಡರಾದ ಎಂ.ಕೆ. ಸೋಮಶೇಖರ್, ಅಯೂಬ್ ಖಾನ್ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.