ADVERTISEMENT

ಸುತ್ತೂರಿನಲ್ಲಿ ರಾಜಠೀವಿಯ ರಥೋತ್ಸವ

ಅಪಾರ ಜನಸ್ತೋಮ ಭಾಗಿ, ಎಲ್ಲೆಡೆ ಹರ್ಷೋದ್ಗಾರ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 13:58 IST
Last Updated 24 ಜನವರಿ 2020, 13:58 IST
ಮೈಸೂರು ಜಿಲ್ಲೆಯ ನಂಜನಗೂಡಿನ ತಾಲ್ಲೂಕಿನ ಸುತ್ತೂರಿನಲ್ಲಿ ಗುರುವಾರ ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವವು ಶ್ರದ್ಧಾ ಭಕ್ತಿಯಿಂದ ನೆರವೇರಿತು
ಮೈಸೂರು ಜಿಲ್ಲೆಯ ನಂಜನಗೂಡಿನ ತಾಲ್ಲೂಕಿನ ಸುತ್ತೂರಿನಲ್ಲಿ ಗುರುವಾರ ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವವು ಶ್ರದ್ಧಾ ಭಕ್ತಿಯಿಂದ ನೆರವೇರಿತು   

ಮೈಸೂರು: ಜನಪದಗೀತೆಯೊಂದರಲ್ಲಿ ಬರುವ ‘ರುದ್ರನ ತೇರು ಎಳೆದಾಂಗ’ ಎಂಬ ಮಾತು ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಗುರುವಾರ ನೆರವೇರಿದ ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವದಲ್ಲಿ ಭಾಗಿಯಾದ ಭಕ್ತ ವೃಂದಕ್ಕೆ ಅಕ್ಷರಶಃ ಅನುಭವಕ್ಕೆ ಬಂದಿತು.

ನೂರಾರು ಮಂದಿ ಹೆಬ್ಬಾವಿನ ಗಾತ್ರದ ಹಗ್ಗಗಳನ್ನು ಎರಡೂ ಕಡೆ ಹಿಡಿದು ಬೃಹತ್ ರಥವನ್ನು ಎಳೆಯುತ್ತಿದ್ದರೆ ರಾಜಠೀವಿಯಿಂದ ರಥವು ಕ್ರಮಿಸಿತು. ಭಕ್ತಜನ ಹಣ್ಣು ಜವನ ಎಸೆದು ಜಾತ್ರೆಯ ಮೆರವಣಿಗೆಯ ಸೊಬಗನ್ನು ಇಮ್ಮಡಿಸಿದರು.

ವಿವಿಧ ಮಠಾಧೀಶರು ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಕಿವಿಗಡಚಿಕ್ಕಿಸುವ ಸದ್ದಿನೊಂದಿಗೆ ಸಿಡಿಮದ್ದುಗಳು ಆರ್ಭಟಿಸಿದವು. ಇವುಗಳ ಶಬ್ದಕ್ಕೆ ಮರಗಳಲ್ಲಿ ಕುಳಿತ್ತಿದ್ದ ಪಕ್ಷಿಗಳು ಹಾರಾಡಿದವು. ಸಿಡಿಮದ್ದುಗಳ ಸಿಡಿತವು ರಥೋತ್ಸವ ಆರಂಭವಾಯಿತು ಎಂಬ ಸೂಚನೆ ನೀಡಿತು.

ADVERTISEMENT

ಇದರ ಮುಂದೆ ಸಾಗುತ್ತಿದ್ದ ಚಿಕ್ಕತೇರಿಗೂ ಭಕ್ತವೃಂದ ತಲೆಬಾಗಿ ನಮಸ್ಕರಿಸಿತು. ಹೂ ಪ್ರಸಾದ ಸ್ವೀಕರಿಸಿ ಕೈಮುಗಿಯಿತು.

ನಂದಿಧ್ವಜ ಕುಣಿತ ಮೆರವಣಿಗೆಯ ಮೊದಲ ಸ್ಥಾನದಲ್ಲಿತ್ತು. ನಂತರ, ಹಲವು ಲಿಂಗಧೀರರು ಹೆಜ್ಜೆ ಹಾಕುವ ಮೂಲಕ ಮೆರವಣಿಗೆಯ ಚೆಲುವನ್ನು ಹೆಚ್ಚಿಸಿದರು. ನಾಗಮಂಗಲದ ಮಹದೇವಪ್ಪ, ಕಿರಾಳು ಮಹೇಶ್, ಆಲ್ದೂರಿನ ಆನಂದ್, ದೇಬೂರಿನ ನಟರಾಜು, ಸುತ್ತೂರಿನ ಹೇಮಂತಕುಮಾರ್ ಇದರಲ್ಲಿ ಭಾಗಿಯಾದರು.

ನಾದಸ್ವರದಲ್ಲಿ 6 ಮಂದಿ ಕಲಾವಿದರು ಭಾಗಿಯಾದರು. 6 ಮಂದಿಯಿಂದ ಹೊರಹೊಮ್ಮುತ್ತಿದ್ದ ಸ್ಯಾಕ್ಸೋಪೋನ್‌ ವಾದನ ಭಕ್ತರನ್ನು ಸೆಳೆಯಿತು.

ಸುತ್ತೂರು ಉಚಿತ ಶಾಲೆಯ ಮಕ್ಕಳು ಪ್ರದರ್ಶಿಸಿದ ವೀರಗಾಸೆ, ಯಡಹಳ್ಳಿಯ ಪ್ರಕಾಶ್, ಬೀಡನಹಳ್ಳಿಯ ಶಿವು, ಮೈಸೂರಿನ ಮೋಹನ್‌ ಅವರ ಪೂಜಾಕುಣಿತ, ನಂಜನಗೂಡಿನ ಮಹೇಶ್ ಅವರ ಗಾರುಡಿ ಗೊಂಬೆಗಳು ಸೂಜಿಗಲ್ಲಿನಂತೆ ಸೆಳೆದವು.

‌ತಮಟೆ, ನಗಾರಿ ವಾದ್ಯಗಳು, ಡೊಳ್ಳುಕುಣಿತ, ಶಿವಮೊಗ್ಗದ ಯುವರಾಜ್ ಅವರ ಜಾಂಜ್ ಮೇಳವು ವಿಶೇಷ ಎನಿಸಿತ್ತು. ತಾಯೂರಿನ ಸಿದ್ದರಾಜು ಅವರ ಮರಗಾಲು ದಸರಾ ಮೆರವಣಿಗೆಯನ್ನು ನೆನಪಿಸಿತು. ಕೆ.ಆರ್.ನಗರದಿಂದ ಬಂದಿದ್ದ ಕಲಾವಿದರು ಪ್ರದರ್ಶಿಸಿ ಹುಲಿವೇಷ, ವೀರಮಕ್ಕಳಕುಣಿತ, ದೊಣ್ಣೆವರಸೆಗಳು ಮಕ್ಕಳನ್ನು ಬಹುವಾಗಿ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.