
ನಂಜನಗೂಡು: ‘ಸುತ್ತೂರು ಶ್ರೀಮಠ ರೈತರಿಗೆ ಆಧುನಿಕ ಕೃಷಿ, ಸಸ್ಯ ಸಂರಕ್ಷಣೆ, ಹೈನುಗಾರಿಕೆ ತರಬೇತಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸೇವೆ ನೀಡುವ ಮೂಲಕ ಈ ಭಾಗದ ರೈತರ ಬದುಕಿನ ಭಾಗವಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ತಾಲ್ಲೂಕಿನ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಸೋಮವಾರ ಕೃಷಿ ಮೇಳ ಹಾಗೂ ದನಗಳ ಜಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
‘ದೇಶ ಸ್ವಾತಂತ್ರ್ಯಾನಂತರ ಆಹಾರೋತ್ಪಾದನೆಯಲ್ಲಿ ಸ್ವಾವಲಂಭನೆ ಸಾಧಿಸಿದ್ದರೂ ಬದಲಾದ ಸನ್ನಿವೇಶದಲ್ಲಿ ಆಹಾರೋತ್ಪಾದನೆಯಲ್ಲಿ ಹೊಸ ಸವಾಲುಗಳು ಎದುರಾಗುತ್ತಿವೆ. ಅವುಗಳನ್ನು ಸರ್ಮಥವಾಗಿ ಎದುರಿಸಲು ಕೃಷಿ ಕ್ಷೇತ್ರವನ್ನು ಶಕ್ತಿಯುತಗೊಳಿಸಬೇಕಿದೆ’ ಎಂದರು.
‘ಮಿತಿಮೀರಿದ ರಾಸಾಯನಿಕ ಬಳಕೆಯಿಂದಾಗಿ ಕೃಷಿ ಭೂಮಿ ವಿಷಯುಕ್ತವಾಗುತ್ತಿದೆ. ಹೀಗಾಗಿ ಭವಿಷ್ಯದಲ್ಲಿ ಸಾವಯವ ಕೃಷಿಗೆ ಒತ್ತು ನೀಡಬೇಕು. ಆ ಮೂಲಕ ಸುಸ್ಥಿರ ಕೃಷಿಯೊಂದಿಗೆ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡಬೇಕು’ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಶಾಸಕಿ ಲತಾ ಮಲ್ಲಿಕಾರ್ಜುನ್ ಮಾತನಾಡಿದರು.
ಮಾಜಿ ಶಾಸಕ ನಿರಂಜನ್ ಕುಮಾರ್, ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್, ಮೂಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ವೇಲುಸ್ವಾಮಿ, ಶರವಣನ್, ಉಪಾಧ್ಯಕ್ಷ ಸತೀಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.