ADVERTISEMENT

ಮೈಸೂರು: ಬಳಕೆಯಾಗದ ಸ್ವಚ್ಛ ಸಂಕೀರ್ಣ; ಘಟಕವಿದ್ದರೂ ಇಲ್ಲ ತ್ಯಾಜ್ಯ ನಿರ್ವಹಣೆ!

ಎಂ.ಮಹೇಶ
Published 9 ಸೆಪ್ಟೆಂಬರ್ 2022, 19:30 IST
Last Updated 9 ಸೆಪ್ಟೆಂಬರ್ 2022, 19:30 IST
ಮೈಸೂರು ತಾಲ್ಲೂಕಿನ ಸಿದ್ದಲಿಂಗಪುರ ಗ್ರಾಮ ಪಂಚಾಯತಿಯಿಂದ ನಿರ್ಮಿಸಿರುವ ಘನ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕ ಬಳಕೆಯಾಗುತ್ತಿಲ್ಲ/ ಪ್ರಜಾವಾಣಿ ಚಿತ್ರ: ಅನೂಪ್‌ ರಾಘ್‌.ಟಿ.
ಮೈಸೂರು ತಾಲ್ಲೂಕಿನ ಸಿದ್ದಲಿಂಗಪುರ ಗ್ರಾಮ ಪಂಚಾಯತಿಯಿಂದ ನಿರ್ಮಿಸಿರುವ ಘನ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕ ಬಳಕೆಯಾಗುತ್ತಿಲ್ಲ/ ಪ್ರಜಾವಾಣಿ ಚಿತ್ರ: ಅನೂಪ್‌ ರಾಘ್‌.ಟಿ.   

ಮೈಸೂರು: ನಿರ್ಮಾಣ ಹಂತದಲ್ಲಿರುವ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಗೆ ಹೊಂದಿಕೊಂಡಂತೆ, ತಾಲ್ಲೂಕಿನ ಸಿದ್ದಲಿಂಗಪುರ ಗ್ರಾಮದ ಹೊರವಲಯದಲ್ಲಿ ನಿರ್ಮಾಣವಾಗಿರುವ ಘನ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕ ‘ಸ್ವಚ್ಛ ಸಂಕೀರ್ಣ’ ಬಳಕೆಗೆ ಗ್ರಾಮ ಪಂಚಾಯಿತಿಯು ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಘಟಕವಿದ್ದರೂ ಪ್ರಯೋಜನ ಆಗದಂತಾಗಿದೆ.

ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಮೂಲಕ ಅದನ್ನು ಗೊಬ್ಬರ ಇತ್ಯಾದಿಯಾಗಿನ್ನಾಗಿಸಿ ಸಂಪನ್ಮೂಲವನ್ನಾಗಿ ಬಳಸಿಕೊಳ್ಳಬೇಕು ಎನ್ನುವುದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಉದ್ದೇಶ. ಇದಕ್ಕಾಗಿ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ನಿರ್ವಹಣಾ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಯೋಜನೆಯ ಭಾಗವಾಗಿ ಸಿದ್ದಲಿಂಗಪುರದಲ್ಲೂ ಹಲವು ತಿಂಗಳುಗಳ ಹಿಂದೆಯೇ ಘಟಕ ಕಟ್ಟಲಾಗಿದೆ. ಈ ಭಾಗದಲ್ಲಿ ಭಾರಿ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದರೂ ನಿರ್ವಹಿಸುವ ಉದ್ದೇಶದ ಘಟಕವನ್ನು ಕಾರ್ಯಾರಂಭಿಸುವ ಗೋಜಿಗೆ ಈವರೆಗೂ ಹೋಗಿಲ್ಲ.

ದುರ್ವಾಸನೆಯ ಸ್ವಾಗತ:ಘಟಕಕ್ಕೆ ಬೀಗ ಹಾಕಲಾಗಿದೆ. ಪರಿಣಾಮ, ಪಂಚಾಯಿತಿಯಿಂದ ಸಂಗ್ರಹಿಸುವ ತ್ಯಾಜ್ಯವನ್ನು ಘಟಕದ ಸುತ್ತಮುತ್ತ ಸುರಿಯಲಾಗುತ್ತಿದೆ. ಎಲ್ಲವನ್ನೂ ಒಂದೇ ಕಡೆ ಹಾಕಲಾಗುತ್ತಿದೆ. ಇದರಿಂದಾಗಿ ಕಸವನ್ನು ಮೂಲದಲ್ಲೆ ಬೇರ್ಪಡಿಸಿ ನಿರ್ವಹಿಸುವ ಕಾರ್ಯಕ್ಕೆ ಹಿನ್ನಡೆಯಾಗಿದೆ. ಅಲ್ಲದೇ, ತ್ಯಾಜ್ಯವೆಲ್ಲವೂ ಕೊಳೆಯುತ್ತಿರುವ ಪರಿಣಾಮ, ಹೆದ್ದಾರಿಯಲ್ಲಿ ಬೆಂಗಳೂರು ಕಡೆಯಿಂದ ಮೈಸೂರಿಗೆ ಸಂಚರಿಸುವವರಿಗೆ ದುರ್ವಾಸನೆಯ ‘ಸ್ವಾಗತ’ ದೊರೆಯುವಂತಾಗಿದೆ. ಕಸವು ರಸ್ತೆಗೂ ಹಾರಿ ಬರುವುದೂ ಉಂಟು. ಘಟಕದ ಪಕ್ಕದಲ್ಲೇ ದೇವಸ್ಥಾನವೂ ಇದೆ.

ADVERTISEMENT

ಸಿದ್ದಲಿಂಗಪುರ, ಬೆಲವತ್ತ, ಕಾಮನಕೆರೆ ಹುಂಡಿ, ಕೆ.ಆರ್.ಮಿಲ್ ಕಾಲೊನಿ, ಕೆಸರೆ ಹಾಗೂ ಮೇಟಗಳ್ಳಿ ಕೈಗಾರಿಕಾ ಪ್ರದೇಶ (ಭಾಗಶಃ)ವನ್ನು ಸಿದ್ದಲಿಂಗಪುರ ಗ್ರಾಮ ‍ಪಂಚಾಯಿತಿಯು ಒಳಗೊಂಡಿದೆ. ಈ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅದನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಸ್ಥಳೀಯ ಸಂಸ್ಥೆಯು ನಿರ್ಲಕ್ಷ್ಯ ವಹಿಸಿರುವುದಕ್ಕೆ ಸ್ವಚ್ಛ ಸಂಕೀರ್ಣವನ್ನು ಬಳಸದಿರುವುದು ಕನ್ನಡಿ ಹಿಡಿದಿದೆ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಘಟಕದ ಸುತ್ತಮುತ್ತಲಿನ ಪ್ರದೇಶವು ಅನೈತಿಕ ಚಟುವಟಿಕೆಗಳ ತಾಣವೂ ಆಗಿದೆ. ಅಲ್ಲಿರುವ ದೇವಸ್ಥಾನವನ್ನು ಪುಂಡ–ಪೋಕರಿಗಳು ಮದ್ಯಪಾನ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎನ್ನುವುದು ನಾಗರಿಕರ ಒತ್ತಾಯವಾಗಿದೆ.

ಜಮೀನುಗಳಿಗೆ ತ್ಯಾಜ್ಯ:‘ಘಟಕವನ್ನು ಕಟ್ಟಿ ತಿಂಗಳುಗಳೇ ಕಳೆದಿವೆ. ಆದರೆ, ಪಂಚಾಯಿತಿಯವರು ಬಳಕೆ ಆರಂಭಿಸಿಲ್ಲ. ಇದರಿಂದಾಗಿ, ಕೆಟ್ಟ ವಾಸನೆ ಬರುತ್ತದೆ. ಅಲ್ಲದೇ, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯವು ಪಕ್ಕದಲ್ಲಿರುವ ಭತ್ತದ ಗದ್ದೆಗಳಿಗೆ ಸೇರುತ್ತಿದೆ. ಜನಪ್ರತಿನಿಧಿಗಳು ಸಮಯ ಕೊಟ್ಟಿಲ್ಲವೆಂದು ಉದ್ಘಾಟನೆ ವಿಳಂಬ ಮಾಡಲಾಗುತ್ತಿದೆ ಎಂದು ಪಂಚಾಯಿತಿಯವರು ಹೇಳುತ್ತಿದ್ದಾರೆ’ ಎಂದು ಘಟಕದ ಸಮೀಪದಲ್ಲಿ ಜಮೀನು ಹೊಂದಿರುವ ನಾಗನಹಳ್ಳಿಯ ರೈತ ಚಂದ್ರುಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನು ಈ ಪಂಚಾಯಿತಿಗೆ ಬಂದು ಐದು ದಿನಗಳಷ್ಟೆ ಆಗಿದೆ. ಘನ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕ ಬಳಕೆ ಆಗುತ್ತಿಲ್ಲದಿರುವುದು ಗಮನಕ್ಕೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಮೂಲದಲ್ಲೇ ತ್ಯಾಜ್ಯ ವಿಂಗಡಣೆಗೆ ಮತ್ತು ಘಟಕ ಬಳಕೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.