ಹುಣಸೂರು: ಸುಸ್ಥಿರ ಮತ್ತು ಪರಿಣಾಮಕಾರಿಯಾದ ಶುಚಿತ್ವ, ಘನತ್ಯಾಜ್ಯ ನಿರ್ವಹಣೆ ಅನುಸರಿಸುವುದರಿಂದ ಗ್ರಾಮದಲ್ಲಿ ನೈರ್ಮಲ್ಯತೆ ಕಾಯ್ದುಕೊಂಡು ಶುಚಿತ್ವ ಗ್ರಾಮ ನಿರ್ಮಾಣ ಮಾಡಲು ಕೇಂದ್ರ ಸರ್ಕಾರದ ಲೈಟ್ ಹೌಸ್ ಇನಿಷಿಯೇಟಿವ್ ಭಾಗ 2 ಅನ್ನು ಜಾರಿ ತರಲಾಗಿದೆ ಎಂದು ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೃಷ್ಣರಾಜ್ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಜಿಲ್ಲಾಪಂಚಾಯಿತಿ ಮತ್ತು ಐಟಿಸಿ, ಔಟ್ ರಿಚ್ ಮತ್ತು ಮೈಕ್ಯಾಪ್ಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛ ಶಕ್ತಿ ಸಮ್ಮಾನ್ ಮತ್ತು ಲೈಟ್ ಹೌಸ್ ಇನಿಷಿಯೇಟಿವ್ ಭಾಗ 2 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 2014ರಲ್ಲಿ ದೇಶದಾದ್ಯಂತ ಸ್ವಚ್ಛ ಭಾರತ್ ಅಭಿಯಾನ ಜಾರಿಗೊಂಡು ಬಯಲು ಶೌಚಾಲಯ ತಡೆಗಟ್ಟುವಲ್ಲಿ ಸಫಲಗೊಂಡಿತ್ತು. ನಂತರದಲ್ಲಿ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಜಾಗೃತಿ ಮತ್ತು ನಿರ್ವಹಣೆಗೆ ಒತ್ತು ನೀಡಲಾಗಿದೆ. ಈ ಮಧ್ಯೆ ಬಯಲು ಶೌಚಾಲಯಕ್ಕೆ ಅಂತ್ಯ ಹಾಡಿದ್ದರೂ ಇಂದಿಗೂ ಗ್ರಾಮಗಳಲ್ಲಿ ಹಳೆ ಪದ್ಧತಿಯನ್ನು ಬಿಡದೆ ಇಂದಿಗೂ ಮುಂದುವರಿಸಿರುವುದು ಶೋಚನೀಯ ಸಂಗತಿ ಎಂದರು.
ಕೇಂದ್ರ ಸರ್ಕಾರ ಸುಸ್ಥಿರ ನೈರ್ಮಲ್ಯದೊಂದಿಗೆ ನೈರ್ಮಲ್ಯಕ್ಕೆ ಪೂರಕವಾದ ಘನ, ದ್ರವ, ಮತ್ತು ಮಲನೀರು ತ್ಯಾಜ್ಯಗಳ ಸಂಪರ್ಕ ನಿರ್ವಹಣೆಯ ಮೂಲಕ ಮಾದರಿ ಗ್ರಾಮ ಪಂಚಾಯಿತಿ ಸ್ಥಾಪಿಸಬೇಕಾಗಿದೆ ಎಂದರು.
ಎಲ್‌ಎಚ್‌ಐ ಭಾಗ 1ರಲ್ಲಿ ದೇಶದ 15 ರಾಜ್ಯಗಳಲ್ಲಿ 75 ಗ್ರಾಮ ಪಂಚಾಯಿತಿಗಳಲ್ಲಿ ಪ್ರಾಯೋಗಿಕ ಯೋಜನೆ ಜಾರಿಗೊಳಿಸಿ ಯಶಸ್ವಿ ಫಲಿತಾಂಶ ಬಂದ ಬಳಿಕ ಈ ಯೋಜನೆಯನ್ನು ಭಾಗ 2 ರಲ್ಲಿ ವಿಸ್ತರಿಸಿ ಗ್ರಾಮಗಳ ಆಯ್ಕೆ ನಡೆದಿದೆ. ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸ್ವಯಂ ಸೇವಾ ಸಂಘಗಳೊಂದಿಗೆ ಐಟಿಸಿ ಕಂಪನಿ ಕೈ ಜೋಡಿಸಿ ಗ್ರಾಮಗಳ ನೈರ್ಮಲ್ಯತೆ ವೃದ್ಧಿಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದರು.
ಯೋಜನೆಗೆ ಐಟಿಸಿ ಬೆಂಬಲ
ಐಟಿಸಿ ಕಂಪನಿಯ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಹರೀಶ್ ಬಾಬು ಮಾತನಾಡಿ ಈ ಯೋಜನೆ ಯಶಸ್ವಿಗೊಳಿಸುವ ಉದ್ದೇಶದಿಂದ ದೇಶದಾದ್ಯಂತ ಹಲವು ಕಾರ್ಪೋರೆಟ್ ಕಂಪನಿಗಳು ಮುಂದಾಗಿದ್ದು ರಾಜ್ಯದಲ್ಲಿ ಐಟಿಸಿ ಈ ಹಿಂದಿನಿಂದಲೂ ಗ್ರಾಮೀಣ ಪ್ರದೇಶದ ಶಾಲೆಗಳ ಅಭಿವೃದ್ಧಿ ಹಾಗೂ ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಿತ್ತು. ಅದರ ಮುಂದುವರೆದ ಭಾಗವಾಗಿ ಸರ್ಕಾರದೊಂದಿಗೆ ಈ ಯೋಜನೆ ಯಶಸ್ಸಿಗೆ ಕೈ ಜೋಡಿಸಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.