
ಮೈಸೂರು: ನಗರದ ಪ್ರಮುಖ ರಸ್ತೆಗಳಲ್ಲಿ ಶನಿವಾರ ಸೈಕಲ್ ಸವಾರರು ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಿದರು. ಪರಿಸರ ಸಂರಕ್ಷಣೆಗಾಗಿ ಎಚ್ಚೆತ್ತುಕೊಳ್ಳುವಂತೆ ಮನವಿ ಮಾಡಿದರು.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ‘ಸ್ವಚ್ಛ ಸರ್ವೇಕ್ಷಣ್-2025’ ಹಾಗೂ ‘ಸ್ವಚ್ಛತೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ’ ಅಭಿಯಾನದ ಭಾಗವಾಗಿ ‘ಸ್ವಚ್ಛತಾ ಸೈಕಲ್ ಜಾಥಾ’ ಆಯೋಜಿಸಲಾಗಿತ್ತು.
ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಜಾಥಾಗೆ ಚಾಲನೆ ನೀಡಿದರು.
‘ನಾಳಿನ ಉತ್ತಮ ಪರಿಸರಕ್ಕಾಗಿ ಇಂದೇ ಏರೋಣ ಸೈಕಲ್ ಸವಾರಿ’ ಎಂಬ ಘೋಷವಾಕ್ಯದೊಂದಿಗೆ 350ಕ್ಕೂ ಹೆಚ್ಚು ನಾಗರಿಕರು, ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಂಡರು.
ಜಾಥಾ ಕೆ.ಆರ್ ವೃತ್ತ, ದೇವರಾಜು ಅರಸು ರಸ್ತೆ, ಬಾಬು ಜಗಜೀವನ್ ರಾಂ ವೃತ್ತ, ಆಯುರ್ವೇದಿಕ್ ವೃತ್ತ, ಹೈವೇ ವೃತ್ತ, ಎಲ್ಐಸಿ ವೃತ್ತ ಮತ್ತು ಜೆಎಸ್ಎಸ್ ಮೆಡಿಕಲ್ ಕಾಲೇಜು ಹಾಗೂ ಸಯ್ಯಾಜಿ ರಾವ್ ರಸ್ತೆಯಲ್ಲಿ ಸಾಗಿ ದೇವಸ್ಥಾನ ಆವರಣದಲ್ಲಿ ಸಮಾರೋಪಗೊಂಡಿತು.
ರಾಯಲ್ ರೈಡರ್ಸ್ ಮೈಸೂರು, ಸೈಕ್ಲೋಪೀಡಿಯಾ, ಮೈಸೂರು ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್, ಮೈಸೂರು ಅಥ್ಲೆಟ್ಸ್ ಕ್ಲಬ್, ಮೈಸೂರು ಸೈಕ್ಲಿಂಗ್ ತಂಡದ ಸದಸ್ಯರು, ಪ್ಯಾರಾಮೌಂಟ್, ಮೈ ಬೈಕ್, ಅರ್ನಾಲ್ಡ್ ಫಿಟ್ನೆಸ್ ಮತ್ತು ಕಾಂಗರೂ ಕೇರ್ ಸಂಸ್ಥೆಗಳ ಪ್ರತಿನಿಧಿಗಳು ಜಾಥಾಕ್ಕೆ ಸಹಕಾರ ನೀಡಿದರು.
ಪಾಲಿಕೆಯ ಉಪ ಆಯುಕ್ತರಾದ ಮಂಜು ಸಿ.ಎಸ್ (ಅಭಿವೃದ್ಧಿ), ಸೋಮಶೇಖರ್ ಜಿ.ಎಸ್.(ಕಂದಾಯ), ಕಾರ್ಯಪಾಲಕ ಎಂಜಿನಿಯರ್ ದೀಪಕ್, ಆರೋಗ್ಯಾಧಿಕಾರಿ ಮೃತ್ಯುಂಜಯ ಕೆ.ಎಸ್., ವಲಯ ಆಯುಕ್ತರಾದ ಪ್ರತಿಭಾ, ರಮೇಶ್, ಮಂಜುನಾಥ್ ರೆಡ್ಡಿ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚೇತನ ಮತ್ತು ಮಧುಕರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.