ADVERTISEMENT

ವಿಧಾನಸಭೆ ಚುನಾವಣೆ: ಮತದಾನ ಹೆಚ್ಚಳಕ್ಕೆ ‘ರಾಯಭಾರಿ’ಗಳ ಮೊರೆ

ಕ್ರಿಕೆಟಿಗ ಜಾವಗಲ್ ಶ್ರೀನಾಥ್‌ಗೆ ಆಯೋಗ ಅಸ್ತು

ಎಂ.ಮಹೇಶ
Published 28 ಮಾರ್ಚ್ 2023, 6:28 IST
Last Updated 28 ಮಾರ್ಚ್ 2023, 6:28 IST
ಜಾವಗಲ್ ಶ್ರೀನಾಥ್
ಜಾವಗಲ್ ಶ್ರೀನಾಥ್   

ಮೈಸೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಸ್ವೀಪ್‌ (ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ) ಸಮಿತಿಯು ವಿವಿಧ ವರ್ಗದ ಮತದಾರರನ್ನು ಆಕರ್ಷಿಸಲು ರಾಯಭಾರಿಗಳನ್ನು ನೇಮಿಸಿಕೊಳ್ಳಲು ಚಾಲನೆ ನೀಡಿದೆ.

ವಿವಿಧ ವರ್ಗದ ಮತದಾರರನ್ನು ಮತಗಟ್ಟೆಗಳತ್ತ ಸೆಳೆಯುವ ಉದ್ದೇಶದಿಂದ, ಖ್ಯಾತನಾಮರನ್ನು ಬಳಸಿಕೊಳ್ಳಲು ಮತ್ತು ಈ ಮೂಲಕ ಜನರಿಗೆ ಪ್ರೇರಣೆ ನೀಡುವ ಉದ್ದೇಶವಿದೆ. ಜಿಲ್ಲಾಡಳಿತದಿಂದ ನೇಮಕಗೊಳ್ಳಲಿರುವ ‘ಸ್ವೀಪ್‌ ಐಕಾನ್‌’ಗಳು ಮತದಾನ ಜಾಗೃತಿಗೆ ಕೈಜೋಡಿಸಲಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಯುವ ಹಾಗೂ ನವ ಮತದಾರರನ್ನು ಪ್ರೇರೇಪಿಸಲು, ಅಂಗವಿಕಲರು ಹಾಗೂ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಲು, ಲಿಂಗತ್ವ ಅಲ್ಪಸಂಖ್ಯಾತರು, ತೃತೀಯ ಲಿಂಗಿಗಳು ಮತ್ತು ಮಹಿಳೆಯರನ್ನು ಮತಗಟ್ಟೆಗಳತ್ತ ಸೆಳೆಯುವುದಕ್ಕಾಗಿ, ಆದಿವಾಸಿಗಳು ಹಕ್ಕು ಚಲಾಯಿಸುವಂತೆ ಮಾಡುವುದಕ್ಕಾಗಿ ಆ ವರ್ಗದವರಲ್ಲೇ ಹೆಸರು ಮಾಡಿದವರನ್ನು ನಿಯೋಜಿಸಲಾಗುತ್ತದೆ. ಮತದಾನದ ಮಹತ್ವದ ಕುರಿತು ಅವರಿಂದ ಆಡಿಯೊ, ವಿಡಿಯೊಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮಾಧ್ಯಮದಲ್ಲಿ ಬಳಸಿಕೊಳ್ಳಲು ಯೋಜಿಸಲಾಗಿದೆ.

ADVERTISEMENT

ಆಯಾ ವರ್ಗದವರಿಗಾಗಿ ಆಯೋಜಿಸುವ ಜಾಗೃತಿ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುವರು. ಮತದಾನದ ಮಹತ್ವವನ್ನು ತಿಳಿಸಿಕೊಡುವರು. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸುವಂತೆಯೂ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಲಿದ್ದಾರೆ.

ತೃತೀಯ ಲಿಂಗಿಗಳು ಸೇರಿದಂತೆ ವಿವಿಧ ವರ್ಗದವರಿಗೆ ರಾಯಭಾರಿಗಳನ್ನಾಗಿ ಮಾಡಿಕೊಳ್ಳಲು ಕೆಲವು ಹೆಸರುಗಳನ್ನು ಆಯೋಗಕ್ಕೆ ಕಳುಹಿಸಲು ಸ್ವೀಪ್‌ ಸಮಿತಿಯಿಂದ ಪ್ರಸ್ತಾಪಿಸಲಾಗಿತ್ತು. ಆದರೆ, ಅವರ ಹಿನ್ನೆಲೆ ಗಮನಿಸಿದಾಗ ರಾಜಕೀಯ ಪಕ್ಷದೊಂದಿಗೆ ಒಡನಾಟ ಇರುವುದು ಕಂಡುಬಂದಿದ್ದರಿಂದ ಈ ವಿಷಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

‘ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ಅವರನ್ನು ಸ್ವೀಪ್ ಐಕಾನ್ ಮಾಡಿಕೊಳ್ಳಲು ಸಲ್ಲಿಸಿದ್ದ ಪ್ರಸ್ತಾವಕ್ಕೆ ಚುನಾವಣಾ ಆಯೋಗದಿಂದ ಅನುಮೋದನೆ ದೊರೆತಿದೆ. ಮತ್ತಷ್ಟು ಮಂದಿಯನ್ನು ರಾಯಭಾರಿಗಳನ್ನಾಗಿ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಯಾವುದೇ ರಾಜಕೀಯ ಪಕ್ಷದೊಂದಿಗೆ ಒಡನಾಟ ಇಲ್ಲದವರನ್ನು ಆಯ್ಕೆ ಮಾಡಲು ಉದ್ದೇಶಿಸಲಾಗಿದೆ. ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕ ಚುನಾವಣೆ ನಡೆಸುವುದು ನಮ್ಮ ಉದ್ದೇಶವಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕಾಲೇಜುಗಳಲ್ಲೂ ಸಾಧಕರು ಹಾಗೂ ಪ್ರತಿಭಾನ್ವಿತರನ್ನು ‘ಕ್ಯಾಂಪಸ್‌ ಐಕಾನ್’ಗಳೆಂದು ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಕೊಲಾಜ್ ಮೊದಲಾದ ಸ್ಪರ್ಧೆಗಳನ್ನು ಅಯೋಜಿಸಿ ಮತದಾನದ ಬಗ್ಗೆ ತಿಳಿಸಿಕೊಡಲಾಗುವುದು. ಇವಿಎಂ ಹಾಗೂ ವಿವಿಪ್ಯಾಟ್‌ ಯಂತ್ರಗಳ ಬಳಕೆ ಕುರಿತು ಪ್ರಾತ್ಯಕ್ಷಿಕೆ ನೀಡಲು ಯೋಜಿಸಲಾಗಿದೆ. ‘ನೈತಿಕ ಮತದಾನ’ದ ಮಹತ್ವವನ್ನು ಅವರಿಗೆ ತಿಳಿಸಿಕೊಡಲಾಗುವುದು. ಅಲ್ಲದೆ, ನಾಗರಿಕರ ಸಂಘ, ರಹವಾಸಿಗಳ ಸಂಘಗಳನ್ನೂ ಒಳಗೊಳಿಸಿಕೊಳ್ಳಲು ಯೋಜಿಸಲಾಗಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.