
ತಿ.ನರಸೀಪುರ: ‘ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡರೆ ವೈಚಾರಿಕತೆ ಹಾಗೂ ಜ್ಞಾನ ಹೆಚ್ಚುತ್ತದೆ. ಇದು ಸಾಧನೆಗೆ ಹಾದಿ ತೋರುತ್ತದೆ’ ಎಂದು ಜೆಡಿಎಸ್ ರಾಜ್ಯ ಮಾಧ್ಯಮ ವಕ್ತಾರ ತಾಯೂರು ಪ್ರಕಾಶ್ ಹೇಳಿದರು.
ಪಟ್ಟಣ ಸಮೀಪದ ತಾಯೂರಿನಲ್ಲಿನ ಟಿ.ಎಸ್. ಸುಬ್ಬಣ್ಣ ಪ್ರೌಢಶಾಲೆಯಲ್ಲಿ ಮೈಸೂರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ನಡೆದ ಮೂರು ದಿನಗಳ ವಿಜ್ಞಾನ ಬೋಧನಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದರು.
‘ಶಿಕ್ಷಣ ಎಲ್ಲರಿಗೂ ಅಗತ್ಯ, ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಿ. ವಿದ್ಯೆಯ ಜೊತೆಗೆ ವಿವೇಕ ಕಲಿತು ಶಿಕ್ಷಕರ ಶ್ರಮಕ್ಕೆ ನಿಮ್ಮ ಸಾಧನೆಯು ಕೃತಜ್ಞತೆಯಾಗಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಹಾಯಕ ಪ್ರಾಧ್ಯಾಪಕಿ ಡಾ.ಪ್ರೀತಿ ಎನ್ ತಲ್ಲೂರು ಮಾತನಾಡಿ, ‘ಶಾಲೆಯ ಮಕ್ಕಳಲ್ಲಿ ಶಿಸ್ತು, ವಿನಯ ಕಾಣುತ್ತಿದೆ’ ಎಂದರು.
ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಡಿ.ಕೆ. ರವಿಶಂಕರ್, ಹನುಮಂತಪ್ಪ ಮಕರಿ, ಮಾನಸ ಹಾಗೂ ಮಮತಾ ಕಲಿಕಾ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.
ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಹೇಶ್ ಮಾತನಾಡಿದರು. ಟಿ.ಎಸ್.ಎಸ್.ಎಸ್ ವಿದ್ಯಾಸಂಸ್ಥೆ ಆಡಳಿತ ಅಧಿಕಾರಿ ಲೋಲ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ನಾಗಸುಂದರ್, ನಾಗೇಂದ್ರ ಪ್ರಸಾದ್ ಖಜಾಂಚಿ, ಶಾಲೆಯ ಶಿಕ್ಷಕರಾದ ಬಿ. ನಾಗರಾಜು, ಎಸ್. ಜಯಶಂಕರ್ ಇದ್ದರು.