
ತಿ.ನರಸೀಪುರ: ‘ರೈತರು ಇಂದು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದಾರೆ, ಸರ್ಕಾರದ ಉದಾಸೀನದಿಂದ ಸಾಲದ ಹೊರೆ, ಬೆಲೆ ಕುಸಿತ ಮತ್ತು ದಲ್ಲಾಳಿಗಳ ಶೋಷಣೆಗೆ ಸಿಲುಕಿದ್ದಾರೆ’ ಎಂದು ಕೃಷಿಕ ಸಮಾಜದ ಅಧ್ಯಕ್ಷ ಬೆನಕನಹಳ್ಳಿ ಶಿವಮಲ್ಲಪ್ಪ ಬೇಸರ ವ್ಯಕ್ತಪಡಿಸಿದರು.
ಕೃಷಿ ಇಲಾಖೆಯಿಂದ ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ರೈತ ದಿನಾಚರಣೆ ಹಾಗೂ ಕಿಸಾನ್ ಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿದರು.
‘ಸರ್ಕಾರದ ಮಾರುಕಟ್ಟೆ ನೀತಿಗಳು ರೈತಪರವಿಲ್ಲ, ರೈತರು ಸ್ವತಃ ಧಾನ್ಯ ಸಂಗ್ರಹಿಸಿ, ಹಲ್ಲಿಂಗ್ ಮಾಡಿಸಿ, ತಮ್ಮದೇ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಿದರೆ ಮಾತ್ರ ಲಾಭ ಗಳಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು
ಕಾರ್ಯಕ್ರಮಕ್ಕೂ ಮೊದಲು ರೈತ ನಾಯಕ ಚೌಧರಿ ಚರಣ್ ಸಿಂಗ್ ಅವರ ಭಾವಚಿತ್ರಕ್ಕೆ ಸಹಾಯಕ ಕೃಷಿ ನಿರ್ದೇಶಕಿ ರೂಪಾ ಸೇರಿದಂತೆ ಅಧಿಕಾರಿಗಳು ಹಾಗೂ ಗಣ್ಯರು ಪುಷ್ಪನಮನ ಸಲ್ಲಿಸಿದರು. ನಂತರ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿ ಶಾಂತಾ, ಮೀನುಗಾರಿಕೆ ಇಲಾಖೆಯ ಶ್ವೇತಾ, ಕೃಷಿ ಇಲಾಖೆ ಸಿಬ್ಬಂದಿಗಳಾದ ರಾಘವೇಂದ್ರ ಸೇರಿದಂತೆ ರೈತ ಮುಖಂಡರು, ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.