ತಿ.ನರಸೀಪುರ: ತಾಲ್ಲೂಕಿನ ಯಾಚೇನಹಳ್ಳಿ ಗ್ರಾಮದಲ್ಲಿ ₹4.82 ಕೋಟಿ ರೂಪಾಯಿ ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಸಂಸದ ಸುನಿಲ್ ಬೋಸ್ ಅವರು ಭಾನುವಾರ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಯಾಚೇನಹಳ್ಳಿಯ ರಸ್ತೆ ಹಾಳಾಗಿದ್ದರಿಂದ ಬನ್ನೂರು ಮುಖ್ಯ ರಸ್ತೆಯಿಂದ ನವೀಕರಣಗೊಳಿಸಲು ₹6 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿತ್ತು, ಆದರೆ ₹4.82 ಕೋಟಿ ರೂಪಾಯಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಮುಖ್ಯ ರಸ್ತೆಗಳನ್ನು ಸಂಪರ್ಕಿಸುವ ಹಳ್ಳಿಗಾಡಿನ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಿದೆ ಎಂದು ತಿಳಿಸಿದರು.
ದಸರಾ ಮುಗಿದ ಬಳಿಕ ಬನ್ನೂರು ಭಾಗದಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಹಂತ ಹಂತವಾಗಿ ಶಾಶ್ವತ ಯೋಜನೆಗಳಿಗೆ ಅನುದಾನವನ್ನು ಮಂಜೂರು ಮಾಡುವುದಾಗಿ ಹೇಳಿದರು.
ವಿವಿಧ ಗ್ರಾಮಗಳ ಬಳಿ ಕಾರ್ಯಕರ್ತರು ಹಾಗೂ ಮುಖಂಡರು ಗ್ರಾಮಗಳ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದು ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸಲು ಕೋರಿದರು.
ಶ್ರೀ ರಾಮಕೃಷ್ಣ ಸೇವಾ ಆಶ್ರಮದ ನಾದನಂದನಾಥ ಸ್ವಾಮೀಜಿ, ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್.ಶಂಕರೇಗೌಡ, ಉಪಾಧ್ಯಕ್ಷ ವೈ.ಎಂ.ಚಂದ್ರು, ನಾಡಗೌಡರಾದ ವೈ.ಎಚ್. ಹನುಮಂತೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ವೈ.ಸಿ.ಶಿವಕುಮಾರ, ಉಪಾಧ್ಯಕ್ಷೆ ಪಿ.ಶ್ವೇತ, ರಾಷ್ಟ್ರೀಯ ಹೆದ್ದಾರಿ ಕಿರಿಯ ಎಂಜಿನಿಯರ್ ಬಿ.ಎ.ಮಹೇಶ್, ಜಿ.ಪಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ಶಿವರಾಜು, ಲೋಕೋಪಯೋಗಿ ಎಇಇ ಸತೀಶ್ ಚಂದ್ರನ್, ಪೋಲಿಸ್ ಇನ್‌ಸ್ಪೆಕ್ಟರ್ ಮನೋಜ್ ಕುಮಾರ್, ಗ್ರಾ.ಪಂ ಸದಸ್ಯರು, ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.