ಹುಣಸೂರು: ‘ದೊಂಬಿದಾಸ ಸಮುದಾಯದ ಯುವಪೀಳಿಗೆ ಸುಶಿಕ್ಷಿತರಾಗಿ ಸಮಾಜಮುಖಿಯಾಗಲು ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ರಾಜ್ಯ ಅಲೆಮಾರಿಗಳ ಒಕ್ಕೂಟದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಹೇಳಿದರು.
ತಾಲ್ಲೂಕಿನ ಬನ್ನಿಕುಪ್ಪೆ ಹೋಬಳಿ ಕುಪ್ಪೆ ಕೊಳಗಟ್ಟ ಗ್ರಾಮದಲ್ಲಿ ರಾಜ್ಯ ಅಲೆಮಾರಿಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ‘ಅಲೆಮಾರಿ ಸಮುದಾಯಕ್ಕೆ ಸೇರಿದ ಸೂಕ್ಷ್ಮ ಸಮುದಾಯಗಳಿಗೆ ಜೀವನ ಭದ್ರತೆ ಮರೀಚಿಕೆಯಾಗಿದೆ. ಸಂವಿಧಾನಬದ್ಧವಾಗಿ ಸಿಗಬೇಕಿರುವ ಸ್ಥಾನಗಳು ಸಿಗುತ್ತಿಲ್ಲ’ ಎಂದರು.
‘ದೊಂಬಿದಾಸ ಸಮುದಾಯದಲ್ಲಿ ಓದು ಬರಹ ಕಲಿತವರು ತೀರ ವಿರಳವಾಗಿದ್ದು, ಗ್ರಾಮದ ದೊಂಬಿದಾಸರ 32 ಮನೆಯಲ್ಲಿ ಬೆರಳೆಣಿಕೆಯಷ್ಟು ಯುವಕರು ವಿದ್ಯಾಭ್ಯಾಸ ಪಡೆದಿದ್ದಾರೆ. ಉಳಿದಂತೆ ಸಾಂಪ್ರದಾಯಿಕ ಕಸುಬಾದ ಹಳ್ಳಿಗಳ ಮೇಲೆ ತೆರಳಿ ಹಾಡು ಹಾಡುವಲ್ಲೇ ಜೀವನ ಸವೆಸಿದ್ದಾರೆ. ಸರ್ಕಾರದ ಎಲ್ಲ ಸವಲತ್ತುಗಳನ್ನು ಸಮರ್ಪಕವಾಗಿ ವಿತರಿಸುವ ಮೂಲಕ ಸಮಾಜಮುಖಿಯನ್ನಾಗಿಸಬೇಕು. ಇದಕ್ಕೆ ಪೂರಕವಾಗಿ ಜನಪ್ರತಿನಿಧಿಗಳು ಸಹಕರಿಸಬೇಕು’ ಎಂದರು.
ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ಮಾತನಾಡಿ, ‘ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದ ದೊಂಬಿದಾಸ ಸಮುದಾಯದ ಯುವಕರಿಗೆ ತರಬೇತಿ ನೀಡಿ ಉದ್ಯಮಿಗಳನ್ನಾಗಿಸಿ ಸಮಾಜಮುಖಿಯನ್ನಾಗಿಸಬೇಕು’ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹೊಂಗಯ್ಯ ಮಾತನಾಡಿ, ‘ದೊಂಬಿದಾಸ ಕಾಲೋನಿಗೆ ಮೂಲಸೌಲಭ್ಯ ಕಲ್ಪಿಸುವ ಪ್ರಯತ್ನ ನಡೆಸಲಾಗುವುದು. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಆದ್ಯತೆ ಮೇಲೆ ಸಮಾಜಕ್ಕೆ ನೀಡುವ ಬಗ್ಗೆ ಸ್ಥಳೀಯ ಜನಪ್ರತಿನಿಧಿ ಮತ್ತು ಪಿಡಿಒ ಗಮನ ಸೆಳೆಯುವುದಾಗಿ’ ತಿಳಿಸಿದರು.
ರಾಜ್ಯ ಅಲೆಮಾರಿ ಸಂಘಟನೆಯ ಯುವ ಘಟಕದ ಅಧ್ಯಕ್ಷ ಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದನಾಯಕ, ಸದಸ್ಯ ನಿಂಗೇಗೌಡ, ಪಿಡಿಒ ರಾಘವೇಂದ್ರ, ಅಲೆಮಾರಿ ಒಕ್ಕೂಟದ ವಿವಿಧ ಜಿಲ್ಲೆಯ ಅಧ್ಯಕ್ಷರಾದ ಶಿವು, ರಾಮಕೃಷ್ಣ ಹಳವೆ, ಸುರೇಶ್, ಮಂಜುನಾಥ್, ಅಣ್ಣಯ್ಯ, ಕುಪ್ಪೆ ಗ್ರಾಮದ ಮುಖಂಡರಾದ ಸಂಜೀವ, ಗಿರೀಶ್, ಪುಟ್ಟರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.