ADVERTISEMENT

ಸೇಡು ಬಿಡಿ; ನೊಂದವರಿಗೆ ನೆರವಾಗಿ

ಬಿಜೆಪಿ ವಿರುದ್ಧ ಹರಿಹಾಯ್ದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್‌

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 12:06 IST
Last Updated 5 ಸೆಪ್ಟೆಂಬರ್ 2019, 12:06 IST

ಮೈಸೂರು: ‘ಕೇಂದ್ರ–ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳು ವಿರೋಧ ಪಕ್ಷಗಳ ಮುಖಂಡರ ಮೇಲೆ ಸೇಡಿನ ರಾಜಕಾರಣ ನಡೆಸುವುದನ್ನು ಬಿಟ್ಟು, ನೆರೆಯಿಂದ ನೊಂದವರಿಗೆ ನೆರವಾಗಲು ಮುಂದಾಗಬೇಕು’ ಎಂದು ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಆಗ್ರಹಿಸಿದರು.

‘ಪ್ರತಿಯೊಬ್ಬರು ಕಾನೂನಿಗೆ ತಲೆಬಾಗಬೇಕು. ಆದರೆ ದೇಶದಲ್ಲಿ ವಿರೋಧ ಪಕ್ಷದ ಮುಖಂಡರನ್ನು ಮಾನಸಿಕವಾಗಿ ಕುಗ್ಗಿಸುವ ಕೆಲಸ ನಡೆಸುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದು ಬುಧವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

‘ಬಿಜೆಪಿ ವಿರೋಧ ಪಕ್ಷಗಳನ್ನು ದಮನಗೊಳಿಸಲು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂಬುದಕ್ಕೆ ಸ್ವಾಗತ. ಎಲ್ಲವೂ ಸ್ವಚ್ಛವಾಗಬೇಕು ಎಂದರೇ ಈ ಹಿಂದಿನ ಸಮ್ಮಿಶ್ರ ಸರ್ಕಾರದ ಪತನಕ್ಕಾಗಿ ನಡೆದ ಅಪಾರ ಪ್ರಮಾಣದ ಹಣದ ವಹಿವಾಟಿನ ಕುರಿತಂತೆಯೂ ತನಿಖೆ ನಡೆಸಲಿ’ ಎಂದು ಸವಾಲು ಹಾಕಿದರು.

ADVERTISEMENT

‘ಆ ಸಂದರ್ಭದಲ್ಲಿ ಇಡಿ, ಐಟಿ ಅಧಿಕಾರಿಗಳು ಎಲ್ಲಿದ್ದರು ? ಮೂರ್ನಾಲ್ಕು ತಿಂಗಳ ಅವಧಿ ಅಪಾರ ಪ್ರಮಾಣದ ಹಣ ಕೈಯಿಂದ ಕೈಗೆ ಹರಿದಾಡಿದರೂ ಯಾವೊಂದು ಕ್ರಮವನ್ನು ಏಕೆ ಜರುಗಿಸಲಿಲ್ಲ. ಈ ಬಗ್ಗೆಯೂ ತನಿಖೆ ನಡೆಯಲಿ. ಆಪರೇಷನ್‌ ಕಮಲಕ್ಕೆ ಹಣ ಹೂಡಿದವರಿಗೆ ಯಾವ ರೀತಿ ಪ್ರತಿಫಲ ಕೊಟ್ಟಿರಿ? ಎಂಬುದನ್ನು ಕೇಂದ್ರದ ಬಿಜೆಪಿ ನಾಯಕರು ಬಹಿರಂಗಪಡಿಸಬೇಕು. ನಿಮ್ಮದು ಯಾವ ಸಿದ್ಧಾಂತ ?’ ಎಂದು ಸಾ.ರಾ. ಕಿಡಿಕಾರಿದರು.

‘ನೆರೆ ಸಂತ್ರಸ್ತರಿಗೆ ಸಂಬಂಧಿಸಿದಂತೆ ಚರ್ಚಿಸಲು ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಿರಿ. ಇದೂವರೆಗೂ ಕೇಂದ್ರದಿಂದ ಚಿಕ್ಕಾಸಿನ ಪರಿಹಾರ ಬಿಡುಗಡೆಯಾಗಿಲ್ಲ. ಬಿಜೆಪಿಯ 25 ಸಂಸದರು ಏನು ಮಾಡುತ್ತಿದ್ದೀರಿ ? ಲೋಕಸಭಾ ಚುನಾವಣೆ ಸಮಯವೂ ವಿರೋಧ ಪಕ್ಷಗಳ ಮುಖಂಡರನ್ನು ಬೆದರಿಸಿದ್ದೀರಿ. ಇದೀಗ 17 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಾಗಿ ವಿರೋಧ ಪಕ್ಷಗಳನ್ನು ದಮನಗೊಳಿಸಲು ಡಿ.ಕೆ.ಶಿವಕುಮಾರ್ ಬಂಧಿಸಿದ್ದೀರಿ’ ಎಂದು ಮಹೇಶ್‌ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.