ADVERTISEMENT

ತನ್ವೀರ್‌ ಸೇಠ್‌ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ

ಬಂಧಿತರ ಸಂಖ್ಯೆ 6ಕ್ಕೆ ಏರಿಕೆ, ಮತ್ತಷ್ಟು ಜನರ ಹುಡುಕಾಟದಲ್ಲಿ ಪೊಲೀಸರು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 20:00 IST
Last Updated 19 ನವೆಂಬರ್ 2019, 20:00 IST
ತನ್ವೀರ್ ಸೇಠ್
ತನ್ವೀರ್ ಸೇಠ್   

ಮೈಸೂರು: ಹಲ್ಲೆಗೀಡಾಗಿ, ಇಲ್ಲಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ತನ್ವೀರ್‌ ಸೇಠ್‌ ಅವರ ಆರೋಗ್ಯದಲ್ಲಿ ಮಂಗಳವಾರ ಮತ್ತಷ್ಟು ಚೇತರಿಕೆ ಕಂಡುಬಂದಿದೆ.

‘ಶಾಸಕರು ಇಂದು ಕೆಲ ಹೊತ್ತು ಕುರ್ಚಿಯಲ್ಲಿ ಕುಳಿತಿದ್ದರು. ಊಟ ಮಾಡಿದ್ದಾರೆ, ಸಹಜವಾಗಿ ಮಾತನಾಡುತ್ತಿದ್ದಾರೆ’ ಎಂದು ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ.ಉಪೇಂದ್ರ ಶೆಣೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಇನ್ನೂ ಎರಡು ದಿನಗಳ ಕಾಲ ಅವರು ತೀವ್ರ ನಿಗಾ ಘಟಕದಲ್ಲೇ ಇರಲಿದ್ದು, ನಂತರ ವಾರ್ಡ್‌ಗೆ ಸ್ಥಳಾಂತರಿಸಲಾಗುವುದು. ಇನ್ನೂ ಕನಿಷ್ಠ ಐದು ದಿನ ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ’ ಎಂದು ಹೇಳಿದರು.

ADVERTISEMENT

ಕುತ್ತಿಗೆ ಸಮೀಪ ಸುಮಾರು 2 ಇಂಚಿನಷ್ಟು ಆಳವಾದ ಗಾಯವಾಗಿತ್ತು. 8ರಿಂದ 10 ಇಂಚಿನಷ್ಟು ಉದ್ದದ ಹೊಲಿಗೆ ಹಾಕಲಾಗಿದೆ. ಅರ್ಧಕ್ಕೆ ತುಂಡಾಗಿದ್ದ ಅವರ ಕಿವಿಯ ಕೆಳಭಾಗವನ್ನು ಮರುಜೋಡಣೆ ಮಾಡಲಾಗಿದೆ. ಕೂದಲೆಳೆಯ ಅಂತರದಲ್ಲಿ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ತನ್ವೀರ್‌ ಸೇಠ್‌ ಲವಲವಿಕೆಯಿಂದ ಇದ್ದು, ಅತ್ಯಂತ ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದಾರೆ. ಇದು ಕೂಡ ಅವರ ಚೇತರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಅವರು ವಿವರಿಸಿದರು.

ಬಂಧಿತರ ಸಂಖ್ಯೆ 6ಕ್ಕೆ ಏರಿಕೆ:ಪ್ರಕರಣಕ್ಕೆ ಸಂಬಂಧಿಸಿದಂತೆ, ಡಿಸಿಪಿ ಮುತ್ತುರಾಜ್ ನೇತೃತ್ವದ ವಿಶೇಷ ತನಿಖಾ ತಂಡವು ಮಂಗಳವಾರ ಐವರನ್ನು ಬಂಧಿಸಿದೆ. ಬಂಧಿತರನ್ನು ಅಕ್ರಂ, ಅಬೀದ್‌ ಪಾಷಾ, ನೂರ್‌ಖಾನ್, ಮುಜೀಬ್ ಹಾಗೂ ಮುಜಾಮಿಲ್ ಎಂದು ಗುರುತಿಸಲಾಗಿದ್ದು, 30ರಿಂದ 35 ವರ್ಷ ವಯಸ್ಸಿನವರು. ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ಹಲ್ಲೆ ನಡೆಸಿದ ಫರ್ಹಾನ್‌ ಪಾಷಾನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಶಾಸಕರ ಗನ್‌ಮ್ಯಾನ್‌ ಫೈರೋಜ್‌ ಖಾನ್‌ ಅವರನ್ನು ಅಮಾನತು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.