ADVERTISEMENT

ಅಕ್ರಮ ತಡೆಗೆ ಟಾಸ್ಕ್‌ಫೋರ್ಸ್‌

ಮುಡಾ ಆಡಳಿತ ಮಂಡಳಿ ಸಭೆ: ವಿವಿಧ ವಿಷಯ ಚರ್ಚೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 2:03 IST
Last Updated 7 ನವೆಂಬರ್ 2020, 2:03 IST

ಮೈಸೂರು: ಭೂ ಕಬಳಿಕೆ, ಒತ್ತುವರಿ ಸೇರಿದಂತೆ ವಿವಿಧ ಅಕ್ರಮಗಳನ್ನು ತಡೆಗಟ್ಟಲು ಟಾಸ್ಕ್ ಫೋರ್ಸ್‌ ರಚಿಸಲು ಶುಕ್ರವಾರ ನಡೆದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರದ ಹಲವೆಡೆ ಮುಡಾ ಆಸ್ತಿಯ ಒತ್ತುವರಿ ಅಲ್ಲದೆ, ಅಕ್ರಮ ನಿರ್ಮಾಣ ಕಂಡು ಬರುತ್ತಿದೆ. ಇದಲ್ಲದೆ ಕೆಲ ಭೂ ವಂಚನೆ ಪ್ರಕರಣಗಳೂ ನಡೆಯುತ್ತಿರುತ್ತವೆ. ಈ ರೀತಿಯ ಅಕ್ರಮಗಳನ್ನು ತಡೆಗಟ್ಟಲು ಬಿಡಿಎ ಮಾದರಿಯಲ್ಲಿ ಟಾಸ್ಕ್‌ ಫೋರ್ಸ್‌ ರಚನೆ ಮಾಡಬೇಕು ಎಂಬ ವಿಚಾರ ಸಭೆಯಲ್ಲಿ ಚರ್ಚೆಗೆ ಬಂತು. ಸದಸ್ಯರು ಇದಕ್ಕೆ ಸಹಮತ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಮುಡಾಗೆ ಭೂಮಿ ನೀಡಿದ ರೈತರಿಗೆ ಬಾಕಿ ನೀಡುವ ಸಂಬಂಧವೂ ಚರ್ಚೆ ನಡೆಯಿತು. ರೈತರಿಂದ ಭೂಮಿ ಪಡೆದು 50:50 ರ ಅನುಪಾತದಡಿ ಬಡಾವಣೆ ನಿರ್ಮಿಸುವ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಈ ಬಗ್ಗೆ ಸದಸ್ಯರು ಸಲಹೆಗಳನ್ನು ನೀಡಿದರು. ರೈತರಿಗೆ ಅನುಕೂಲವಾಗುವ ಈ ಯೋಜನೆಯ ಅನುಷ್ಠಾನಕ್ಕೆ ಒಪ್ಪಿಗೆ ಸೂಚಿಸಲಾಯಿತು ಎಂದು ಮೂಲಗಳು ಹೇಳಿವೆ.

ADVERTISEMENT

ಮುಡಾಗೆ ಸಂಬಂಧಿಸಿದ 401 ಪ್ರಕರಣಗಳ ಬಗ್ಗೆ ಚರ್ಚೆ ನಡೆದು 104 ನಾನಾ ಯೋಜನೆಗಳಿಗೆ ಅನುಮೋದನೆ ಲಭಿಸಿದೆ.

ಬೆಳಿಗ್ಗೆ 11 ಕ್ಕೆ ಆರಂಭವಾದ ಸಭೆ ಸಂಜೆಯವರೆಗೆ ಮುಂದುವರಿಯಿತು. ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್‌, ಎಲ್‌.ನಾಗೇಂದ್ರ, ಎಸ್‌.ಎ.ರಾಮದಾಸ್ , ಯತೀಂದ್ರ ಸಿದ್ದರಾಮಯ್ಯ, ಹರ್ಷವರ್ಧನ್‌, ವಿಧಾನಪರಿಷತ್‌ ಸದಸ್ಯರಾದ ಆರ್‌.ಧರ್ಮಸೇನ, ಮರಿತಿಬ್ಬೇಗೌಡ, ಮುಡಾ ಆಯುಕ್ತ ನಟೇಶ್‌, ಅಧಿಕಾರಿಗಳು ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.