ADVERTISEMENT

ಮೈಸೂರು ಪಾಲಿಕೆ: ಗುರಿ ಮೀರಿ ತೆರಿಗೆ ಸಂಗ್ರಹ, ಕಾರಣವಾದ ಕಠಿಣ ನಿರ್ಧಾರಗಳು

ಶಿವಪ್ರಸಾದ್ ರೈ
Published 4 ಏಪ್ರಿಲ್ 2023, 19:30 IST
Last Updated 4 ಏಪ್ರಿಲ್ 2023, 19:30 IST
ಮೈಸೂರು ಮಹಾನಗರಪಾಲಿಕೆ ಕಟ್ಟಡ
ಮೈಸೂರು ಮಹಾನಗರಪಾಲಿಕೆ ಕಟ್ಟಡ   

ಮೈಸೂರು: ಇಲ್ಲಿನ ಪಾಲಿಕೆಯಿಂದ ಕೈಗೊಂಡ ಕೆಲವು ಕಠಿಣ ನಿರ್ಧಾರಗಳ ಫಲವಾಗಿ, 2022–23ನೇ ಆರ್ಥಿಕ ವರ್ಷದಲ್ಲಿ ತೆರಿಗೆ ಸಂಗ್ರಹ ಪ್ರಮಾಣವು ಗುರಿಗಿಂತಲೂ ಹೆಚ್ಚಾಗಿದೆ.

ಈ ಸಾಲಿನಲ್ಲಿ ಪಾಲಿಕೆಯು ₹250 ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಿತ್ತು. ಆದರೆ, ₹310.48 ಕೋಟಿ ಸಂಗ್ರಹಿಸಲಾಗಿದೆ. ಅಂದರೆ ₹60 ಕೋಟಿ ಹೆಚ್ಚುವರಿ ಸಂಗ್ರಹಣೆಯ ಸಾಧನೆಯನ್ನು ಈ ನಗರ ಸ್ಥಳೀಯ ಸಂಸ್ಥೆ ಮಾಡಿದೆ.

ಇಲ್ಲಿ 2016–17ರಲ್ಲಿ ₹175.97 ಕೋಟಿ, 2017– 18ರಲ್ಲಿ ₹194.8 ಕೋಟಿ, 2018–19ರಲ್ಲಿ ₹210.47 ಕೋಟಿ, 2019–20ರಲ್ಲಿ ₹218.15 ಕೋಟಿ, 2020–21ರಲ್ಲಿ ₹204.96 ಕೋಟಿ, 2021–22ರಲ್ಲಿ ₹280.70 ಕೋಟಿ ತೆರಿಗೆ ಸಂಗ್ರಹವಾಗಿತ್ತು. ಐದು ವರ್ಷಗಳಿಗಿಂತ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕ್ರಮಗಳು: ಸಾಮಾನ್ಯವಾಗಿ ಪಾಲಿಕೆಯು ತೆರಿಗೆ ಸಂಗ್ರಹಕ್ಕಾಗಿ ಅರಿವು ಕಾರ್ಯಕ್ರಮ, ರಿಯಾಯಿತಿ ಘೋಷಣೆಯನ್ನು ಮಾಡುತ್ತವೆ. ಆದರೆ, ಈ ಬಾರಿ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಕಂದಾಯ ಅಧಿಕಾರಿ, ನೀರು ಸರಬರಾಜು ಅಧಿಕಾರಿ, ಬಿಲ್ ಸಂಗ್ರಹಗಾರರು ಮನೆಮನೆಗೆ ತೆರಳಿ ಹಲವು ವರ್ಷಗಳಿಂದ ಬಾಕಿ ಇದ್ದ ತೆರಿಗೆಯನ್ನು ಪಾವತಿ ಮಾಡುವಂತೆ ಜನರಲ್ಲಿ ಮನವರಿಕೆ ಮಾಡಿಸಿದ್ದಾರೆ. ಪಾವತಿಸದಿದ್ದರೆ ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು ಎನ್ನುತ್ತಾರೆ ಆಯುಕ್ತರು.

‘ತೆರಿಗೆ ಪಾವತಿಸದವರ ಮನೆಗೆ ಸೇವೆಗಳನ್ನು ಕಡಿತಗೊಳಿಸುವುದು ಹಾಗೂ ಮನೆಯ ಮುಂದೆ ಬ್ಯಾನರ್ ಅಳವಡಿಸುವಂತಹ ಕಠಿಣ ನಿರ್ಧಾರಗಳನ್ನು ಕೈಗೊಂಡಿದ್ದೆವು. ಪ್ರತೀ ವಾರವೂ ಸಂಗ್ರಹದ ಬಗ್ಗೆ ಗಮನಹರಿಸಿ ಫಾಲೋಅಪ್‌ ಮಾಡಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ’ ಎಂದು ಹೇಳಿದರು.

ಪಾಲಿಕೆಯು ಆಸ್ತಿ ತೆರಿಗೆ ಪಾವತಿಸುವವರಿಗೆ ಪ್ರತಿ ವರ್ಷ ಏಪ್ರಿಲ್‌ನಲ್ಲಿ ಶೇ 5ರಷ್ಟು ರಿಯಾಯಿತಿ ಘೋಷಿಸುತ್ತಿದೆ. ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಂಡಿದ್ದಾರೆ. ಈ ಬಾರಿ ಮೇ ಹಾಗೂ ಜೂನ್‌ ತಿಂಗಳಲ್ಲೂ ದಂಡ ರಹಿತ ತೆರಿಗೆ ಪಾವತಿಗೆ ಅವಕಾಶ ನೀಡಿಲಾಗಿತ್ತು. ಇವು ತೆರಿಗೆ ಸಂಗ್ರಹದ ಹೆಚ್ಚಳಕ್ಕೆ ಸಹಕಾರಿಯಾಗಿವೆ. ಈ ವೇಳೆ ತೆರಿಗೆ ಸಂಗ್ರಹಕ್ಕಾಗಿ 9 ವಲಯ ಕಚೇರಿಯಲ್ಲಿ ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯಲಾಗಿತ್ತು.

2022–23ನೇ ಸಾಲಿನಲ್ಲಿ ವಸೂಲಾದ ತೆರಿಗೆ ವಿವರ

ಆಸ್ತಿ ತೆರಿಗೆ;₹169 ಕೋಟಿ

ನಗರ ಮತ್ತು ಪಟ್ಟಣ ಯೋಜನೆ;₹14.4 ಕೋಟಿ

ಮಾರುಕಟ್ಟೆ ಮತ್ತು ವಾಣಿಜ್ಯ ಸಂಕೀರ್ಣಗಳ ಬಾಡಿಗೆ;₹3.52 ಕೋಟಿ

ಉದ್ದಿಮೆ ಪರವಾನಿಗೆ ಶುಲ್ಕ;₹6.68 ಕೋಟಿ

ಜಾಹಿರಾತು ಶುಲ್ಕ;₹64.71 ಲಕ್ಷ

ಇತರೆ ಜಮೆ;₹32.07 ಕೋಟಿ

ನೀರಿನ ಸಂಪರ್ಕ ಶುಲ್ಕ;₹93.09 ಕೋಟಿ

ಒಟ್ಟು;₹310.48 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.