ADVERTISEMENT

ಕ್ಷಯ ರೋಗ ಇರಲಿ ಎಚ್ಚರ

ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳ, ಕಡಿಮೆಯಾಗುತ್ತಿರುವ ಮರಣ ದರ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 12:18 IST
Last Updated 24 ಮಾರ್ಚ್ 2020, 12:18 IST

ಮೈಸೂರು: ಇಂದು ವಿಶ್ವ ಕ್ಷಯ ರೋಗ ದಿನಾಚರಣೆ. ಇಲ್ಲಿನ ಮಹಾರಾಣಿ ಕೃಷ್ಣರಾಜಮ್ಮಣ್ಣಿ ಅವರ ಕ್ಷಯ ರೋಗ (ಪಿಕೆಟಿಬಿ) ಆಸ್ಪತ್ರೆಯಲ್ಲಿ 2018ಕ್ಕೆ ಹೋಲಿಸಿದರೆ 2019ರಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. 2020ರ ಮೊದಲ ಮೂರು ತಿಂಗಳ‌ಲ್ಲೇ 524 ಮಂದಿ ಕ್ಷಯ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಕ್ಷಯ ರೋಗ ಕಡಿಮೆಯಾಗುತ್ತಿಲ್ಲ ಎಂಬುದನ್ನು ಈ ಅಂಕಿಸಂಖ್ಯೆಗಳು ಹೇಳುತ್ತವೆ.

2016– 2,903

2017– 3,060

ADVERTISEMENT

2018– 3,787

2019– 4,254‌

2020– 524

ಲಕ್ಷಣಗಳು

ಎರಡು ವಾರಕ್ಕಿಂತ ಹೆಚ್ಚು ಕೆಮ್ಮು ಸಂಜೆ ವೇಳೆ ಜ್ವರ, ಎದೆನೋವು, ತೂಕ ಕಡಿಮೆಯಾಗುವುದು, ಹಸಿವು ಆಗದೆ ಇರುವುದು, ಕೆಲವೊಮ್ಮೆ ಕಫದಲ್ಲಿ ರಕ್ತ ಬೀಳುವುದು, ಈ ಲಕ್ಷಣಗಳು ಯಾವುದೇ ವ್ಯಕ್ತಿಯಲ್ಲಿ ಕಂಡುಬಂದರೆ ನಿಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ಬಾರಿ ಕಫ ಪರೀಕ್ಷೆ ಮಾಡಿಸುವುದು ಮತ್ತು ಮಕ್ಕಳಲ್ಲಿ, ಎಚ್‌ಐವಿ ಸೋಂಕಿತರಲ್ಲಿ, ಮಧುಮೇಹ ರೋಗವಿರುವವರಲ್ಲಿ, ಶ್ವಾಸಕೋಶೇತರ ಕ್ಷಯ ಇರುವವರಿಗೆ ಬೇಗ ಕ್ಷಯರೋಗ ಪತ್ತೆಹಚ್ಚಲು ಸಿಬಿ–ಎನ್‌ಎಎಟಿ ಪರೀಕ್ಷೆಗೆ ಒಳಪಡಬೇಕು.

***

ಇತರೆ ಅಂಶಗಳು

* ಕರವಸ್ತ್ರವನ್ನು ಮುಚ್ಚಿಕೊಂಡು ಕೆಮ್ಮಬೇಕು.
* ಕ್ಷಯರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು.
* ಚಿಕಿತ್ಸೆಯ ಜೊತೆಗೆ ಪೌಷ್ಠಿಕ ಆಹಾರವನ್ನು ತಪ್ಪದೇ ಸೇವಿಸಬೇಕು

***

* ಆರೋಗ್ಯ ಸಹಾಯವಾಣಿ 104

* ರೋಗವನ್ನು ದೂರವಿಡಿ, ರೋಗಿಯನ್ನಲ್ಲ

* ಕ್ಷಯರೋಗಿಯನ್ನು ಮುಟ್ಟುವುದರಿಂದ, ಕೈಕುಲುಕುವುದರಿಂದ ರೋಗ ಬರುವುದಿಲ್ಲ

ಮೈಸೂರು: ಜಿಲ್ಲೆಯಲ್ಲಿ ಕ್ಷಯ ರೋಗಪೀಡಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 2016ರಲ್ಲಿ 2,903 ಪ್ರಕರಣಗಳಷ್ಟೇ ಇದ್ದದ್ದು 2019ರ ವೇಳೆಗೆ 4,254 ಪ್ರಕರಣಗಳಷ್ಟಾಗಿದೆ. ಈ ವರ್ಷ ಕೇವಲ ಮೂರೇ ತಿಂಗಳ ಅವಧಿಯಲ್ಲಿ 524 ಪ್ರಕರಣಗಳು ಪತ್ತೆಯಾಗಿವೆ. ಕ್ಷಯ ರೋಗ ನಿರ್ಮೂಲನೆಯ ದಿಕ್ಕಿನಲ್ಲಿ ಇನ್ನಷ್ಟು ಹೆಜ್ಜೆಗಳನ್ನು ಇಡಬೇಕಾದ ಪರಿಸ್ಥಿತಿ ಇದೆ ಎಂಬುದನ್ನು ಈ ಅಂಕಿಅಂಶಗಳು ಹೇಳುತ್ತವೆ.

ಸಮಾಧಾನದ ವಿಷಯ ಎಂದರೆ ಇದರಿಂದ ಮೃತಪಡುವವರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. 2018ರಲ್ಲಿ 33 ಮಂದಿ ಮೃತಪಟ್ಟಿದ್ದರೆ 2019ರಲ್ಲಿ 28, ಈ ವರ್ಷ ಇಲ್ಲಿಯವರೆಗೆ ಇದರಿಂದ ಯಾವ ರೋಗಿಯೂ ಮೃತಪಟ್ಟಿಲ್ಲ. ಇದು ಕ್ಷಯ ರೋಗದ ಚಿಕಿತ್ಸೆಯಲ್ಲಿ ಭರವಸೆ ಮೂಡಿಸಿದೆ.

‘ಇಲ್ಲಿನ ಮಹಾರಾಣಿ ಕೃಷ್ಣರಾಜಮ್ಮಣ್ಣಿ ಅವರ ಕ್ಷಯ ರೋಗ (ಪಿಕೆಟಿಬಿ) ಆಸ್ಪತ್ರೆಯಲ್ಲಿ ಕ್ಷಯ ರೋಗಿಗಳಿಗೆ ಸಂಪೂರ್ಣವಾದ ಉಚಿತ ಚಿಕಿತ್ಸೆ ಲಭ್ಯ ಇದೆ. ಜತೆಗೆ, ₹ 500 ಮಾಸಿಕ ಧನವನ್ನೂ 6 ತಿಂಗಳವರಗೆ ಪೌಷ್ಠಿಕ ಆಹಾರಕ್ಕಾಗಿ ನೀಡಲಾಗುತ್ತದೆ. ಅವಶ್ಯಕತೆ ಉಳ್ಳ ರೋಗಿಗಳು ಉದಾಸೀನತೆ ತೋರದೇ ಚಿಕಿತ್ಸೆ ಪಡೆಯಬೇಕು’ ಎಂದು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ರವಿ ತಿಳಿಸುತ್ತಾರೆ.

ಪರಿಪೂರ್ಣವಾದ ಲಸಿಕೆ ಲಭ್ಯ ಇದ್ದರೂ ಪ್ರತಿ ವರ್ಷ ಕ್ಷಯದಿಂದ 5 ಲಕ್ಷ ಜನ ಸಾಯುತ್ತಿದ್ದಾರೆ ಎಂದು ಅಧ್ಯಯನವೊಂದರ ಅಂಕಿಅಂಶಗಳು ಹೇಳುತ್ತವೆ. ರೋಗದ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದೇ ಇರುವುದರಿಂದ ಚಿಕಿತ್ಸೆ ಪಡೆಯದೇ, ಅಗತ್ಯ ಮುನ್ನಚ್ಚರಿಕೆ ಪಾಲಿಸದೇ ರೋಗವನ್ನು ಮತ್ತೊಬ್ಬರಿಗೆ ಹರಡುತ್ತಿರುವುದು ರೋಗ ನಿರ್ಮೂಲನೆಗೆ ದೊಡ್ಡ ತೊಡಕಾಗಿದೆ.

ರೋಗದ ಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರ ಸಲಹೆ ಪಡೆದು ಅದರಂತೆ ನಡೆದುಕೊಂಡರೆ ಗುಣಪಡಿಸುವುದು ಸಾಧ್ಯ. ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಕೇವಲ ರೋಗಿ ಮಾತ್ರ ಸಾಯದೇ ತನ್ನ ಕಾಯಿಲೆಯನ್ನು ಇನ್ನಷ್ಟು ಜನರಿಗೆ ಹಬ್ಬಿಸಿರುತ್ತಾರೆ ಎಂದು ವೈದ್ಯರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.