ADVERTISEMENT

ನವೆಂಬರ್‌ನಲ್ಲಿ ‘ಟೆಕ್‌ ಸಮ್ಮೇಳನ’

ಮೈಸೂರಿನಲ್ಲಿ ₹ 4 ಸಾವಿರ ಕೋಟಿ ಬಂಡವಾಳ ಹೂಡಿಕೆ– ಜಾರ್ಜ್‌

​ಪ್ರಜಾವಾಣಿ ವಾರ್ತೆ
Published 24 ಜುಲೈ 2018, 13:40 IST
Last Updated 24 ಜುಲೈ 2018, 13:40 IST

ಮೈಸೂರು: ಜಾಗತಿಕ ಹೂಡಿಕೆದಾರರ ಸಮ್ಮೇಳನಕ್ಕೆ ಬದಲಾಗಿ ಈ ಬಾರಿಯೂ ಬೆಂಗಳೂರಿನಲ್ಲಿ ‘ಟೆಕ್‌ ಸಮ್ಮೇಳನ’ ಆಯೋಜಿಸಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್‌ ಇಲ್ಲಿ ಮಂಗಳವಾರ ತಿಳಿಸಿದರು.

‘ನವೆಂಬರ್‌ನಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಹಲವು ದೇಶಗಳ ಹೂಡಿಕೆದಾರರು ಪಾಲ್ಗೊಳ್ಳಲಿದ್ದಾರೆ. ತಂತ್ರಜ್ಞಾನದ ಹೊಸ ಆವಿಷ್ಕಾರಗಳನ್ನು ಹಂಚಿಕೊಳ್ಳಲಿದ್ದಾರೆ. ಇದು ಕೇವಲ ಬೆಂಗಳೂರಿಗೆ ಸಂಬಂಧಿಸಿದ ಸಮ್ಮೇಳನ ಅಲ್ಲ. ಮೈಸೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಗೆ ಹೂಡಿಕೆದಾರರನ್ನು ಸೆಳೆಯುವ ಕಾರ್ಯಕ್ರಮ ಕೂಡ ಆಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಮೈಸೂರಿನಲ್ಲಿ ಸದ್ಯದಲ್ಲೇ 10 ಬೃಹತ್‌ ಕೈಗಾರಿಕೆಗಳು ಸ್ಥಾಪನೆಯಾಗಲಿದ್ದು, ₹ 4 ಸಾವಿರ ಕೋಟಿ ಬಂಡವಾಳ ಹೂಡಿಕೆಯಾಗಲಿದೆ. ಸುಮಾರು 35 ಸಾವಿರ ಉದ್ಯೋಗಾವಕಾಶಗಳು ದೊರೆಯಲಿವೆ. ಉದ್ಯೋಗದಲ್ಲಿ ಸ್ಥಳೀಯರಿಗೆ ಅವಕಾಶ ನೀಡಲು ಸೂಚನೆ ನೀಡಿದ್ದೇನೆ’ ಎಂದರು.

ADVERTISEMENT

ಪ್ರಮುಖವಾಗಿ ಏಷ್ಯನ್ ಪೇಂಟ್ಸ್‌, ಕಾರ್ಲ್ಸ್‌ಬರ್ಗ್‌, ಪೆಪ್ಸಿ ಕೋಲ, ಚೀರಾ ಬ್ರೆವರೀಸ್‌, ಕೆನ್‌ ವುಡ್ಸ್‌, ಕಂಟೇನರ್‌ ಕಾರ್ಪೊರೇಷನ್‌ ಆಫ್ ಇಂಡಿಯಾ, ಪಾರ್ಲೆ ಇಂಡಸ್ಟ್ರೀಸ್‌, ರುಚಾ ಎಂಜಿನಿಯರಿಂಗ್‌, ಮಿಂದಾಸ್‌ ಸಾಯಿ, ಮೆಟಲ್‌ ಮ್ಯಾನ್‌ ಆಟೊ ಕಂಪೆನಿ ತಮ್ಮ ಘಟಕಗಳನ್ನು ಸ್ಥಾಪಿಸಲಿವೆ ಎಂದು ಹೇಳಿದರು.

‘ಜವಳಿ ಪಾರ್ಕ್‌ಗೆ 25 ಎಕರೆ ಜಾಗ ಒದಗಿಸಲು ವ್ಯವಸ್ಥೆ ಮಾಡಲಾಗುವುದು. ಅಲ್ಲದೇ, ಫುಡ್‌ ಪಾರ್ಕ್ ಸ್ಥಾಪನೆಗೂ ಬೇಡಿಕೆ ಬಂದಿದೆ. ಚಾಮರಾಜನಗರ ಜಿಲ್ಲೆ ಬದನಗುಪ್ಪೆ– ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಜವಳಿ ಕಂಪನಿ ಆರಂಭವಾಗುತ್ತಿದೆ’ ಎಂದು ತಿಳಿಸಿದರು.

‘ಮೈಸೂರಿನ ಫಾಲ್ಕನ್‌ ಟೈರ್ಸ್‌ ಕಾರ್ಖಾನೆ ಪುನರ್‌ ಆರಂಭ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕಾರ್ಮಿಕರ ಹಿತ ಕಾಯಲು ಬದ್ಧವಾಗಿದ್ದು, ಕಾರ್ಮಿಕ ಇಲಾಖೆ ಜತೆ ಸಭೆ ನಡೆಸಲಾಗುವುದು’ ಎಂದರು.

ಕಾರ್ಖಾನೆ ಮುಚ್ಚಿರುವುದರಿಂದ ಸುಮಾರು 2,500 ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಕಾರ್ಖಾನೆ ಆರಂಭಿಸಲು ಕ್ರಮ ವಹಿಸಬೇಕು ಎಂದು ಸಚಿವರಿಗೆ ಫಾಲ್ಕನ್‌ ಟೈರ್ಸ್‌ ಎಂಪ್ಲಾಯೀಸ್‌ ಯೂನಿಯನ್‌ ಮನವಿ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.