ADVERTISEMENT

ತಂಬಾಕು ಗುಣಮಟ್ಟ ಅಭಿವೃದ್ಧಿಪಡಿಸಲು ಕೃಷಿ ವಿಜ್ಞಾನಿಗಳು ಪ್ರಯತ್ನಿಸಬೇಕು: ಶರ್ಮ

13ನೇ ರಾಷ್ಟ್ರೀಯ ತಂಬಾಕು ವಿಚಾರ ಸಂಕೀರ್ಣ: ಡಾ.ಟಿ.ಆರ್. ಶರ್ಮ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 14:33 IST
Last Updated 29 ಆಗಸ್ಟ್ 2024, 14:33 IST
<div class="paragraphs"><p>ಹುಣಸೂರು ನಗರದ ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರದಲ್ಲಿ ಗುರುವಾರ ನಡೆದ 13ನೇ ರಾಷ್ಟ್ರೀಯ ತಂಬಾಕು ವಿಚಾರ ಸಂಕಿರಣ ಎರಡು ದಿನದ ಕಾರ್ಯಗಾರ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಕೃಷಿ ಸಂಶೋಧನಾ ಪರಿಷತ್‌ನ (ಐಸಿಎಆರ್) ಉಪ ಪ್ರಧಾನ ಮಹಾನಿರ್ದೇಶಕ ಡಾ.ಟಿ.ಆರ್. ಶರ್ಮ,&nbsp;ಕೃಷಿ ವಿ.ವಿ ಉಪಕುಲಪತಿ ಡಾ.ಆರ್.ಸಿ. ಜಗದೀಶ್  ಭಾಗವಹಿಸಿದ್ದರು</p></div>

ಹುಣಸೂರು ನಗರದ ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರದಲ್ಲಿ ಗುರುವಾರ ನಡೆದ 13ನೇ ರಾಷ್ಟ್ರೀಯ ತಂಬಾಕು ವಿಚಾರ ಸಂಕಿರಣ ಎರಡು ದಿನದ ಕಾರ್ಯಗಾರ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಕೃಷಿ ಸಂಶೋಧನಾ ಪರಿಷತ್‌ನ (ಐಸಿಎಆರ್) ಉಪ ಪ್ರಧಾನ ಮಹಾನಿರ್ದೇಶಕ ಡಾ.ಟಿ.ಆರ್. ಶರ್ಮ, ಕೃಷಿ ವಿ.ವಿ ಉಪಕುಲಪತಿ ಡಾ.ಆರ್.ಸಿ. ಜಗದೀಶ್ ಭಾಗವಹಿಸಿದ್ದರು

   

ಹುಣಸೂರು: ತಂಬಾಕು ದಕ್ಷಿಣ ಭಾರತದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, 4.5 ಕೋಟಿ ರೈತರು ವಾರ್ಷಿಕ ₹45 ಸಾವಿರ ಕೋಟಿ ವಹಿವಾಟು ನಡೆಸುತ್ತಾರೆ. ತಂಬಾಕು ಗುಣಮಟ್ಟ ಅಭಿವೃದ್ಧಿಪಡಿಸಲು ಕೃಷಿ ವಿಜ್ಞಾನಿಗಳು ಪ್ರಯತ್ನಿಸಬೇಕು ಎಂದು  ಭಾರತೀಯ ಕೃಷಿ ಸಂಶೋಧನಾ ಪರಿಷತ್‌ನ (ಐಸಿಎಆರ್) ಉಪ ಪ್ರಧಾನ ಮಹಾನಿರ್ದೇಶಕ ಡಾ.ಟಿ.ಆರ್. ಶರ್ಮ ಕರೆ ನೀಡಿದರು.

ನಗರದ ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರದಲ್ಲಿ 13ನೇ ವರ್ಷದ ಆಲ್ ಇಂಡಿಯಾ ನೆಟ್‌ವರ್ಕ್ ಪ್ರಾಜೆಕ್ಟ್ ಆನ್ ಟೊಬ್ಯಾಕೋ ಅಂಗವಾಗಿ ಗುರುವಾರ ಎರಡು ದಿನಗಳ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು. ತಂಬಾಕು ಬೆಳೆಯಲ್ಲಿ 70 ವರ್ಷದಲ್ಲಿ ನೂರಕ್ಕೂ ಹೆಚ್ಚು ತಳಿಗಳನ್ನು ರೈತರಿಗೆ ಪರಿಚಯಿಸಿದ್ದು, ಇದು ತಂಬಾಕು ಸಂಶೋಧನ ಕೇಂದ್ರದ ಸಾಧನೆಯಾಗಿದೆ. ಹಲವು ಕಾರಣಗಳಿಂದಾಗಿ ಕೇಂದ್ರೀಯ ಆಹಾರ ಪಟ್ಟಿಯಲ್ಲಿ ತಂಬಾಕನ್ನು ಸೇರಿಸಿಲ್ಲ. ಈ ಸಾಲಿನಲ್ಲಿ ತಂಬಾಕು ಬೆಳೆಯನ್ನು ಪಟ್ಟಿಗೆ ಸೇರಿಸುವ ಪ್ರಯತ್ನ ನಡೆದಿದ್ದು, ಸಿಹಿ ಸುದ್ದಿ ಅತಿ ಶೀಘ್ರದಲ್ಲಿ ಸಿಗುವ ನಿರೀಕ್ಷೆ ಹೊಂದಿದ್ದೇವೆ ಎಂದರು.

ADVERTISEMENT

ಯಾವುದೇ ಅಭಿವೃದ್ಧಿ ಕ್ಷೇತ್ರದಲ್ಲಿ ಮೂಲ ಬೆಳೆಯ ವಂಶವಾಹಿಗಳನ್ನು ಸಂರಕ್ಷಿಸಿ ಆ ಮೂಲಕ ಹಲವು ತಳಿಗಳನ್ನು ಅಭಿವೃದ್ಧಿಪಡಿಸುವ ಕೆಲಸ ಪ್ರತಿಯೊಂದು ಬೆಳೆಗಳಲ್ಲಿ ನಡೆಯಲಿದೆ. ಅದೇ ರೀತಿ ತಂಬಾಕಿನ ವಂಶವಾಹಿನಿಯನ್ನು ಬಳಸಿಕೊಂಡು ಗುಣಮಟ್ಟ ಹಾಗೂ ಹೆಚ್ಚಿನ ಇಳುವರಿ ಬರುವ ತಳಿ ಅಭಿವೃದ್ಧಿಪಡಿಸಿ ರೈತರಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಉತ್ಪಾದಿಸಲು ಸಹಕಾರಿ ಆಗಲಿದೆ ಎಂದರು.

ಇದಲ್ಲದೆ ತಂಬಾಕು ಅವಲಂಭಿಸಿದ ಕೈಗಾರಿಕೆಗಳಿದ್ದು, ಈ ಕೈಗಾರಿಕೆಗಳ ಬೇಡಿಕೆಗೆ ಅನುಗುಣವಾದ ತಳಿಯನ್ನು ಅಭಿವೃದ್ಧಿಪಡಿಸಿ ಉತ್ಪಾದಿಸಿದಲ್ಲಿ ಆರ್ಥಿಕ ಚಟುವಟಿಕೆ ಮತ್ತಷ್ಟು ವೃದ್ಧಿಯಾಗಿ ರೈತ ಆರ್ಥಿಕವಾಗಿ ಸ್ವಾವಲಂಬಿ ಆಗಬಹುದು ಎಂದರು.

ತಂತ್ರಜ್ಞಾನ: ತಂಬಾಕು ಬೆಳೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳುವ ರೀತಿಯಲ್ಲಿ ವಿಜ್ಞಾನಿಗಳು ಸಂಶೋಧನೆ ನಡೆಸಿ ರೈತರಿಗೆ ನೀಡಬೇಕಾಗಿದೆ. ದಶಕಗಳಿಂದ ತಂಬಾಕು ಬೆಳೆಯುತ್ತಿದ್ದರೂ ಈಗಲೂ ಹಳೆ ಮಾದರಿಯಲ್ಲಿ ಉತ್ಪತ್ತಿ ಮಾಡುವ ತಂತ್ರಜ್ಞಾನ ಹೊಂದಿದ್ದೇವೆ. ಈ ದಿಕ್ಕಿನಲ್ಲಿ ಹೆಚ್ಚಿನ ಸಂಶೋಧನೆ ನಡೆಸಬೇಕಾಗಿದೆ. ಇದಲ್ಲದೆ ತಂಬಾಕು ಕಡಿಮೆ ವಿಸ್ತೀರ್ಣದಲ್ಲಿ ಹೆಚ್ಚು ಇಳುವರಿ ಪಡೆಯುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದಲ್ಲಿ ರೈತರು ತಂಬಾಕಿನೊಂದಿಗೆ ಇತರೆ ವಾಣಿಜ್ಯ ಬೆಳೆಯನ್ನು ಬೆಳೆಯಲು ಸಹಕಾರಿ ಆಗಲಿದೆ ಎಂದರು.

ಶಾಸಕ ಹರೀಶ್ ಗೌಡ ಮಾತನಾಡಿ, ದೇಶದ 20 ಸಂಶೋಧನ ಕೇಂದ್ರದ ಕೃಷಿ ವಿಜ್ಞಾನಿಗಳು ಭಾಗವಹಿಸಿದ್ದು, ಈ ಕಾರ್ಯಗಾರದಲ್ಲಿ ಸಂಶೋಧನೆಯಲ್ಲಿ ಆಗಿರುವ ಬದಲಾವಣೆ ಕುರಿತು ಚರ್ಚೆ ನಡೆದಿದೆ. ದೇಶದಲ್ಲಿ ಹಲವು ಆಹಾರ ಪದಾರ್ಥಗಳ ಬೆಳೆಗೆ ಸಂಬಂಧಿಸಿದಂತೆ ಸಂಶೋಧನೆ ನಡೆಯುತ್ತಿದ್ದು, ಈ ಸಂಶೋಧನೆ ಫಲವನ್ನು ರೈತರಿಗೆ ನೇರವಾಗಿ ತಲಪಿಸುವ ಕೆಲಸ ಆಗಬೇಕು ಎಂದರು.

ಶಿವಮೊಗ್ಗ ಕೃಷಿ ವಿವಿ ಉಪಕುಲಪತಿ ಡಾ.ಜಗದೀಶ್ ಮಾತನಾಡಿ, ರಾಜ್ಯದ ಮಲೆನಾಡು, ಮೈಸೂರು ಭಾಗದಲ್ಲಿ ಎಫ್.ಸಿ.ವಿ ತಂಬಾಕು ಬೆಳೆಯುವ ರೈತರ ಆರ್ಥಿಕ ಸ್ಥಿತಿಗತಿ ಉತ್ತಮವಿದೆ. ರಾಷ್ಟ್ರೀಯ ಕಾರ್ಯಗಾರದಲ್ಲಿ ರೈತರಿಗೆ ತಾಂತ್ರಿಕವಾಗಿ ಬೇಸಾಯ ಮಾಡುವ ಬಗ್ಗೆ ಗಂಭೀರ ಚರ್ಚೆ ನಡೆದು ಅದರ ಲಾಭ ಬೆಳೆಗಾರನಿಗೆ ತಲಪಿಸುವಂತಾಗಬೇಕು ಎಂದರು.

ವೇದಿಕೆಯಲ್ಲಿ ಐಸಿಎಆರ್ ಎಡಿಜಿ ಡಾ. ಪ‍್ರಶಾಂತ ಕೆ.ದಾಸ್, ತಂಬಾಕು ಮಂಡಳಿ ನಿರ್ದೇಶಕ ಡಾ.ಶೇಷು ಮಾಧವ, ನೋಡಲ್ ಅಧಿಕಾರಿ ಡಾ.ಕೆ.ಸರಳ, ಮಂಡಳಿ ಸದಸ್ಯರಾದ ಬಸವರಾಜ್, ವಿಕ್ರಂರಾಜೇಗೌಡ ಉಪಸ್ಥಿತರಿದ್ದರು.

ಆತಂಕದಲ್ಲಿ ತಂಬಾಕು ಬೆಳೆಗಾರ

ತಂಬಾಕು ನಿಷೇಧಗೊಳ್ಳುವ ಬಗ್ಗೆ ರೈತ ಗೊಂದಲದಲ್ಲಿದ್ದಾನೆ. ಐಸಿಎಆರ್ ವಿಜ್ಞಾನಿಗಳ ತಂಡ ಕೇಂದ್ರ ಸರ್ಕಾರದಲ್ಲಿ ಚರ್ಚಿಸಿ ತಂಬಾಕು ನಿಷೇಧಿಸುವುದಾದಲ್ಲಿ ಪರ್ಯಾಯ ವಾಣಿಜ್ಯ ಬೆಳೆ ಸಂಶೋಧಿಸಿ ಅನ್ನದಾತನಿಗೆ ಆರ್ಥಿಕ ಶಕ್ತಿ ತುಂಬಬೇಕು ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.