ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು: 'ಈಚೆಗೆ ಊಹಾಪೋಹದ ಸುದ್ದಿ ಜಾಸ್ತಿ ಆಗಿದೆ. ಇದು ಪತ್ರಿಕೋದ್ಯಮದ ಧ್ಯೇಯ ಅಲ್ಲ. ಪತ್ರಕರ್ತರು ಯಾವಾಗಲೂ ಸತ್ಯ ಹೇಳುವ ಪ್ರಯತ್ನ ಮಾಡಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದರು.
ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ಮೈಸೂರು ಜಿಲ್ಲಾ ಪತ್ರಿಕಾ ಛಾಯಾಗ್ರಾಹಕರ ಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ , ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ ವಿಜೇತರಿಗೆ ' ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ' ವಿತರಿಸಿ ಅವರು ಮಾತನಾಡಿದರು.
' ಪತ್ರಕರ್ತರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೇ ಆಧಾರ ಸ್ತಂಭ. ಸತ್ಯವಾದ ಮಾಹಿತಿ ಅಲ್ಲದೆ ಅಸತ್ಯ ಹೇಳಬಾರದು. ಜನ ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಕಷ್ಟ ಬಂದಾಗ ನಿಮ್ಮ ಕಡೆ ನೋಡುತ್ತಾರೆ. ಹೀಗಾಗಿ ಸತ್ಯವನ್ನೇ ಜನರ ಮುಂದೆ ಇಡಿ' ಎಂದು ಕಿವಿಮಾತು ಹೇಳಿದರು.
' ಜಾತಿ ವ್ಯವಸ್ಥೆ ಕಾರಣಕ್ಕೆ ಶೂದ್ರರು ಅಕ್ಷರ ಸಂಸ್ಕೃತಿಯಿಂದ ವಂಚಿತ ಆಗಿದ್ದರು. ನಾವೆಲ್ಲ ಓದಿದ್ದು ಈಚೆಗೆ. ನಮ್ಮ ಪೋಷಕರು ಹೆಬ್ಬೆಟ್ಟು. ಸಮಾಜದಲ್ಲಿನ ಅಸಮಾನತೆಗಳ ವಿರುದ್ಧವೂ ಪತ್ರಕರ್ತರು ಧ್ವನಿ ಎತ್ತಬೇಕು' ಎಂದರು.
' ಮೌಢ್ಯಗಳಿಗೆ ಉತ್ತೇಜನ ನೀಡದಿರಿ. ಸೆನ್ಸೆಷನಲ್ ಸುದ್ದಿ ಸಮಾಜಕ್ಕೆ ಅನುಕೂಲ ಆಗುವಂತೆ ಮಾತ್ರ ಮಾಡಿ. ಒಂದು ಛಾಯಾಚಿತ್ರ ಸಾವಿರ ಪದಗಳಿಗೆ ಸಮ ಎಂಬ ನಾಣ್ಣುಡಿಯೇ ಇದೆ. ಆದರೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಂದ ಮೇಲೆ ಯಾರ್ಯಾರ ಚಿತ್ರಗಳನ್ನು ಮತ್ಯಾರಿಗೋ ಜೋಡಿಸುವ ತಂತ್ರ ನಡೆದಿದೆ. ಅಂತಹವುಗಳಿಂದ ದೂರ ಇರಿ. ಮೈಸೂರು ಪತ್ರಕರ್ತರು ಇತರರಿಗೆ ಮಾದರಿ ಆಗಿರಿ' ಎಂದು ಸಲಹೆ ನೀಡಿದರು.
ವಿಜೇತರು: ಛಾಯಾಚಿತ್ರ ಸ್ಪರ್ಧೆಯಲ್ಲಿ ಬೆಂಗಳೂರಿನ ನ್ಯೂಸ್ ಟ್ರಯಲ್ ಪತ್ರಿಕೆಯ ಬಿ. ಸತೀಶ್ ಪ್ರಥಮ, ಪ್ರಜಾವಾಣಿಯ ಬೆಂಗಳೂರು ಛಾಯಾಗ್ರಾಹಕರಾದ ಎಂ.ಎಸ್. ಮಂಜುನಾಥ್ ದ್ವಿತೀಯ, ಪಿ. ರಂಜು ತೃತೀಯ ಬಹುಮಾನ ಪಡೆದರು.
ಪ್ರಜಾವಾಣಿ ಮಂಗಳೂರು ಬ್ಯುರೊ ಛಾಯಾಗ್ರಾಹಕ ಎಚ್. ಫಕ್ರುದ್ದೀನ್ ಹಾಗೂ ಸುದ್ದಿ ಸಂಜೆ ಪತ್ರಿಕೆಯ ಎಸ್. ಚರಣ್, ಬಾಗಲಕೋಟೆಯ ಹಳ್ಳಿ ಸಂದೇಶ ಪತ್ರಿಕೆಯ ಇಂದ್ರಕುಮಾರ್ ದಸ್ತೆನವರ್ ಸಮಾಧಾನಕರ ಬಹುಮಾನ ಪಡೆದರು.
ವಿಜಯ ಕರ್ನಾಟಕದ ವಿಜಯಪುರ ಛಾಯಾಗ್ರಾಹಕ ಸುಧೀಂದ್ರ ಕುಲಕರ್ಣಿ ಅವರು ನೇತ್ರರಾಜು ಸ್ಮರಣಾರ್ಥ ನೀಡಿದ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಶಾಸಕ ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಡಿ. ತಿಮ್ಮಯ್ಯ, ಶಿವಕುಮಾರ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಸಂಘದ ಅಧ್ಯಕ್ಷ ಪ್ರಗತಿ ಗೋಪಾಲಕೃಷ್ಣ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.