
ಮೈಸೂರು: ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿರುವ ದೇವಸ್ಥಾನಗಳ ಅಭಿವೃದ್ಧಿ ಮತ್ತು ದುರಸ್ತಿಗಾಗಿ 2023ರಿಂದ ಈವರೆಗೆ ಒಟ್ಟು ₹ 50.99 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಒದಗಿಸಿದೆ.
ಮುಜರಾಯಿ ಇಲಾಖೆಯ ‘ಸಾಮಾನ್ಯ ಯೋಜನೆ’ಯಡಿ ದೇವಸ್ಥಾನಗಳಿಗೆ ಆರ್ಥಿಕ ನೆರವನ್ನು ಕೊಡಲಾಗಿದೆ. ಇದರೊಂದಿಗೆ ಆ ಧಾರ್ಮಿಕ ಕೇಂದ್ರಗಳಿಗೆ ಬರುವ ‘ಭಕ್ತರಿಗೆ’ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಕ್ರಮ ವಹಿಸಲಾಗಿದೆ. ಒಟ್ಟು 865 ಸಂಸ್ಥೆಗಳಿಗೆ ಅನುದಾನ ಮಂಜೂರು ಮಾಡಲಾಗಿದೆ.
ವಿಧಾನಪರಿಷತ್ ಸದಸ್ಯ ಜೆಡಿಎಸ್‌ನ ಕೆ.ವಿವೇಕಾನಂದ ಅವರು ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಕೇಳಿದ್ದ ಪ್ರಶ್ನೆಗೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಉತ್ತರಿಸಿದ್ದು, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಪಡೆದ ಜಿಲ್ಲಾವಾರು ಮಾಹಿತಿಯನ್ನು ಒದಗಿಸಿದ್ದಾರೆ.
ಪ್ರಸ್ತಾವದಂತೆ ಕ್ರಮ:
ಶಿಥಿಲಾವಸ್ಥೆಯಲ್ಲಿರುವ ದೇವಾಲಯಗಳು, ಮಠಗಳು, ಸಂಸ್ಥೆಗಳ ಜೀರ್ಣೋದ್ಧಾರಕ್ಕಾಗಿ ಶಾಸಕರು, ಸಚಿವರು ಮತ್ತು ಆಯಾ ಜಿಲ್ಲಾಧಿಕಾರಿಗಳಿಂದ ಸ್ವೀಕೃತವಾಗುತ್ತಿರುವ ಪ್ರಸ್ತಾವಗಳ ಅನ್ವಯ ಪರಿಶೀಲಿಸಿ ಬಜೆಟ್‌ನಲ್ಲಿ ಅನುದಾನ ಲಭ್ಯತೆಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ವಿವಿಧ ಕಾಮಗಾರಿಗಳಿಗೆ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ವಿವರ ನೀಡಿದ್ದಾರೆ.
ಈ ಪೈಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಾದ ಮೈಸೂರು ಜಿಲ್ಲೆಗೆ ಅತಿ ಹೆಚ್ಚು ಅಂದರೆ ₹ 27.91 ಕೋಟಿ ಅನುದಾನ ದೊರೆತಿದೆ. ಇದರಲ್ಲಿ 2024–25ನೇ ಸಾಲೊಂದರಲ್ಲೇ ₹ 19.67 ಕೋಟಿ ನೀಡಲಾಗಿದೆ.
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ‘ಶಕ್ತಿ’ ಯೋಜನೆಯ ಅನುಷ್ಠಾನದ ಕಾರಣದಿಂದಾಗಿ ದೇವಾಲಯಗಳಿಗೆ ಮಹಿಳೆಯರ ಭೇಟಿ ಪ್ರಮಾಣ ಹೆಚ್ಚಾಗುತ್ತಿದೆ. ಇದಕ್ಕೆ ತಕ್ಕಂತೆ, ಸೌಕರ್ಯಗಳ ವೃದ್ಧಿಗೆ ಮುಜರಾಯಿ ಇಲಾಖೆಯಿಂದ ಆದ್ಯತೆ ನೀಡಲಾಗಿದೆ ಎನ್ನುತ್ತದೆ ಇಲಾಖೆಯ ಮೂಲಗಳು.
ನಂಜನಗೂಡು ತಾಲ್ಲೂಕಿಗೆ ಹೆಚ್ಚು...
ಈ ಮೂರು ಸಾಲುಗಳಲ್ಲಿ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ನ ದರ್ಶನ್ ಧ್ರುವನಾರಾಯಣ ಪ್ರತಿನಿಧಿಸುವ ನಂಜನಗೂಡು ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ (ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ಕ್ಷೇತ್ರವೂ ಈ ತಾಲ್ಲೂಕು ವ್ಯಾಪ್ತಿ ಒಳಗೊಂಡಿದೆ) ಒಟ್ಟು 158 ಸಂಸ್ಥೆಗಳಿಗೆ (ದೇವಾಲಯಗಳಿಗೆ) ಒಟ್ಟು ₹ 8.87 ಕೋಟಿ ಒದಗಿಸಲಾಗಿದೆ. ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಪ್ರತಿನಿಧಿಸುವ ತಿ.ನರಸೀಪುರ ತಾಲ್ಲೂಕಿನ 52 ಸಂಸ್ಥೆಗಳಿಗೆ ಅನುದಾನ ಮಂಜೂರಾಗಿದ್ದು ₹ 8.48 ಕೋಟಿ ದೊರೆತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ಕ್ಷೇತ್ರದ ವ್ಯಾಪ್ತಿಯನ್ನೂ ಒಳಗೊಂಡಿರುವ ಮೈಸೂರು ತಾಲ್ಲೂಕಿನ 104 ಸಂಸ್ಥೆಗಳಿಗೆ ಒಟ್ಟು ₹ 5.05 ಕೋಟಿ ಅನುದಾನ ಮಂಜೂರಾಗಿದೆ.