ADVERTISEMENT

ಮೈಸೂರು: ‘ಲಾನ್ಸ್‌ಡೌನ್‌’ ಕುಸಿತಕ್ಕೆ ಕಾಯುತ್ತಿರುವ ಪಾಲಿಕೆ

ಮೋಹನ್‌ ಕುಮಾರ್‌ ಸಿ.
Published 15 ಮೇ 2025, 6:21 IST
Last Updated 15 ಮೇ 2025, 6:21 IST
ಅವಸಾನದ ಅಂಚಿಗೆ ತಲುಪಿರುವ ಮೈಸೂರಿನ ‘ಲ್ಯಾನ್ಸ್‌ಡೌನ್‌’ ಕಟ್ಟಡ
ಅವಸಾನದ ಅಂಚಿಗೆ ತಲುಪಿರುವ ಮೈಸೂರಿನ ‘ಲ್ಯಾನ್ಸ್‌ಡೌನ್‌’ ಕಟ್ಟಡ   

ಮೈಸೂರು: ಪಾರಂಪರಿಕ ನಗರಿಯ ಹೆಮ್ಮೆಯ ‘ಲ್ಯಾನ್ಸ್‌ಡೌನ್‌’ ಕಟ್ಟಡ ಶಿಥಿಲಗೊಂಡು ಅವಸಾನದ ಅಂಚಿಗೆ ತಲುಪಿದ್ದು, ಸ್ವಾಭಾವಿಕವಾಗಿ ಕುಸಿಯಬೇಕು ಎಂದು ಪಾಲಿಕೆಯೂ ಕಾಯುತ್ತಿದೆ ಎಂಬ ಆರೋಪ ವ್ಯಾಪಾರಿಗಳು, ಇತಿಹಾಸ ತಜ್ಞರಿಂದ ಕೇಳಿಬಂದಿದೆ.

ದಶಕದ ಹಿಂದೆ ₹ 8 ಕೋಟಿ ವೆಚ್ಚದಲ್ಲಿ ಪುನರ್‌ನವೀಕರಣ ಕಾಮಗಾರಿ ಆರಂಭಗೊಂಡಿತ್ತು. 2016ರಲ್ಲಿ ದೇವರಾಜ ಮಾರುಕಟ್ಟೆಯ ಉತ್ತರದ್ವಾರ ಗೋಪುರ ಬಿದ್ದದ್ದನ್ನೇ ನೆಪಮಾಡಿಕೊಂಡ ಪಾಲಿಕೆಯು ‘ಲ್ಯಾನ್ಸ್‌ಡೌನ್‌’ ಕಾಮಗಾರಿಯನ್ನು ನಿಲ್ಲಿಸಿತು. ಅಲ್ಲಿಂದ ಯಾವುದೇ ಕ್ರಮವನ್ನೂ ವಹಿಸಿಲ್ಲ.

‘ಅರ್ಧಕ್ಕೆ ನಿಂತ ಕಾಮಗಾರಿಯ ನಾಲ್ಕು ಮಳಿಗೆಗಳ ಗೋಡೆಗಳು ಮತ್ತಷ್ಟು ಶಿಥಿಲಗೊಂಡಿದ್ದು, ಕುಸಿಯುವ ಹಂತ ತಲುಪಿವೆ. ಕಟ್ಟಡದ ಮಧ್ಯಭಾಗ ಯಾವುದೇ ಕ್ಷಣದಲ್ಲೂ ಬೀಳಬಹುದು. ದಶಕದಿಂದಲೂ ಕಟ್ಟಡ ಮುಂದೆಯೇ ಮಳಿಗೆ ನಿರ್ಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದೇವೆ. ಪಾಲಿಕೆಯವರು ಬಾಡಿಗೆ ಕೇಳಲು ಮಾತ್ರ ಬರುತ್ತಾರಷ್ಟೇ’ ಎಂದು ‘ಲ್ಯಾನ್ಸ್‌ಡೌನ್‌’ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಎಂ.ಆರ್.ವಿಜಯಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಪಾಲಿಕೆಯವರು ಪುನರುಜ್ಜೀವಗೊಳಿಸುವ, ಇಲ್ಲವೇ ಪಾರಂಪರಿಕ ಶೈಲಿಯಲ್ಲಿ ಕಟ್ಟಡ ನಿರ್ಮಿಸುವ ಕೆಲಸವನ್ನು ಮಾಡುತ್ತಿಲ್ಲ’ ಎಂದು ದೂರಿದರು. 

ಲಾಭದ ಕಣ್ಣು: ‘ಶತಮಾನದ ತೇಗದ ತೀರುಗಳು, ಬೆಲೆಬಾಳುವ ಮರ ಮಟ್ಟುಗಳು, ಉಕ್ಕು ಸೇರಿದಂತೆ ಕೋಟ್ಯಂತರ ಬೆಲೆ ಬಾಳುವ ‍ಪರಿಕರಗಳು ಕಟ್ಟಡದಲ್ಲಿ ಅಡಕವಾಗಿವೆ. ಅದು ಬಿದ್ದರೆ ಅವುಗಳನ್ನು ಮಾರುವುದರೊಂದಿಗೆ, ಹೊಸ ಕಟ್ಟಡ ನಿರ್ಮಾಣ ಕಾಮಗಾರಿಯೂ ನಡೆಯುವುದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಲಾಭದ ಕಣ್ಣಿಟ್ಟಿದ್ದಾರೆ’ ಎನ್ನುತ್ತಾರೆ ಇತಿಹಾಸ ತಜ್ಞ ಪ್ರೊ.ಎನ್‌.ಎಸ್.ರಂಗರಾಜು.

‘2011ರಲ್ಲಿ ಕಟ್ಟಡದಲ್ಲಿ ವ್ಯಾಪಾರ ಚಟುವಟಿಕೆ ನಡೆಯುವಾಗಲೇ ‘ಪಾರಂಪರಿಕ ಸಮಿತಿ’ಯ ನಾನು, ಮೇಜರ್ ಜನರಲ್ ಸುಧೀರ್ ಒಂಭತ್ಕೆರೆ, ಈಚನೂರು ಕುಮಾರ್, ರವಿ ಗುಂಡೂರಾವ್, ಎನ್.ಆರ್.ಅಶೋಕ್ ಸೇರಿ ಕಟ್ಟಡ ಪರಿಶೀಲಿಸಿದ್ದೆವು. ಪಾಲಿಕೆಯವರು ಅವೈಜ್ಞಾನಿಕವಾಗಿ ಅಳವಡಿಸಿದ್ದ ಟ್ಯಾಂಕ್‌ನಿಂದ ನೀರು ಸೋರಿಕೆಯಾಗಿ ಶಿಥಿಲವಾಗುತ್ತಿತ್ತು. ತೆರವು ಮಾಡುವಂತೆ ಹೇಳಿದ್ದೆವು. ಕುಸಿಯುವ ಎಚ್ಚರಿಕೆ ನೀಡಿದ್ದೆವು’ ಎಂದು ಸ್ಮರಿಸಿದರು.

‘ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯೂ ಟ್ಯಾಂಕ್ ತೆರವು ಮಾಡಲು ಪಾಲಿಕೆಗೆ ₹ 75 ಸಾವಿರ ನೀಡಿತ್ತು. ಪಾಲಿಕೆಯವರು ದುರಸ್ತಿ ಮಾಡಲಿಲ್ಲ. 2012ರಲ್ಲಿ ಕುಸಿದು ನಾಲ್ವರು ಮೃತಪಟ್ಟರು’ ಎಂದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಬಂದಾಗ ಕಟ್ಟಡ ಪುನರ್‌ನವೀಕರಣಕ್ಕೆ ₹ 8 ಕೋಟಿ ಬಿಡುಗಡೆ ಮಾಡಿದ್ದರು. ₹ 4 ಕೋಟಿ ಸಂರಕ್ಷಣೆಗೆ, ₹ 2 ಕೋಟಿ ವಿದ್ಯುತ್‌ ಮತ್ತು ಚರಂಡಿ ದುರಸ್ತಿಗೆ ಹಾಗೂ ₹ 2 ಕೋಟಿ ಕಟ್ಟಡದ ಎರಡೂ ಬದಿ ರಸ್ತೆ ನಿರ್ಮಾಣಕ್ಕೆ ಕೊಟ್ಟಿದ್ದರು. ಶೇ 40ರಷ್ಟು ಕಾಮಗಾರಿಯೂ ಪೂರ್ಣಗೊಂಡಿದ್ದಾಗ, ದೇವರಾಜ ಮಾರುಕಟ್ಟೆಯ ಉತ್ತರದ್ವಾರ ಬೀಳಿಸಿ, ಇಲ್ಲಿನ ಕಾಮಗಾರಿಯನ್ನೂ ಸ್ಥಗಿತಗೊಳಿಸಿದರು’ ಎಂದು ದೂರಿದರು.

‘ಅಲ್ಲಿಂದಲೂ ಕಾಮಗಾರಿ ನಡೆದೇ ಇಲ್ಲ. ಕಿಟಕಿ, ಬಾಗಿಲುಗಳನ್ನು ಕದಿಯಲಾಗಿದೆ. ತೊಲೆಗಳನ್ನೂ ಬಿಟ್ಟಿಲ್ಲ. ಕದಿಯುವ ಅವಕಾಶವನ್ನೂ ಪಾಲಿಕೆಯವರೇ ನೀಡಿದ್ದಾರೆ. ಯಾರಿಗೇ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಈಗಲೂ ಪ್ರಯತ್ನಿಸಿದರೆ ಕಟ್ಟಡ ಉಳಿಸಿಕೊಳ್ಳಬಹುದು’ ಎಂದರು.

ಈ ಕುರಿತು ಪ್ರತಿಕ್ರಿಯೆಗೆ ಪಾಲಿಕೆ ಆಯುಕ್ತರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.

ಗೋಡೆ ಕಂಬಗಳು ಶಿಥಿಲಗೊಂಡಿದ್ದು ಕುಸಿಯುವ ಭೀತಿ ಮೂಡಿದೆ –ಪ್ರಜಾವಾಣಿ ಚಿತ್ರಗಳು/ ಹಂಪಾ ನಾಗರಾಜ

1892ರಲ್ಲಿ ನಿರ್ಮಾಣ

ಲಾರ್ಡ್‌ ಲ್ಯಾನ್ಸ್‌ಡೌನ್‌ ಮೈಸೂರಿಗೆ ಬಂದ ನೆನಪಿನಾರ್ಥ 10ನೇ ಚಾಮರಾಜ ಒಡೆಯರ್ ಅವರು ಲ್ಯಾನ್ಸ್‌ಡೌನ್‌ ಕಟ್ಟಡ ನಿರ್ಮಿಸಿದರು.   ದೇವರಾಜ ಮಾರುಕಟ್ಟೆಯ ಜೊತೆಗೆ ಇದೂ ಆರಂಭವಾಯಿತು. ಪಾರಂಪರಿಕ ನಗರಿಗೆ ಸುಂದರ ಕಟ್ಟಡಗಳಲ್ಲಿ ಒಂದಾಗಿತ್ತು. ಈಗಲೂ ಕಟ್ಟಡ ಗಟ್ಟಿಯಾಗಿದ್ದು ಕಳೆದ ದಸರಾ ವೇಳೆ ಜಂಬೂಸವಾರಿ ನೋಡಲು ಸಾವಿರಕ್ಕೂ ಹೆಚ್ಚು ಜನರು ಕಟ್ಟಡವೇರಿದ್ದರೂ ಕುಸಿದಿರಲಿಲ್ಲ.   ಕಟ್ಟಡವು ಸ್ತಂಭಗಳಿಂದ ನಿಂತಿದ್ದು ಮಳಿಗೆಯನ್ನು ಪ್ರತ್ಯೇಕಿಸಲು ಬಂಬೂ ಮತ್ತು ಮಣ್ಣು ಬಳಸಿ ಕಿರುಗೋಡೆಗಳನ್ನು ಕಟ್ಟಲಾಗಿದೆ.   

ಪ್ರೊ.ಎನ್‌.ಎಸ್‌.ರಂಗರಾಜು

ಪಾರಂಪರಿಕ ಸಮಿತಿಯೇ ಇಲ್ಲ

‘ಪಾಲಿಕೆಯಲ್ಲಿ ಪಾರಂಪರಿಕ ಸಮಿತಿ ಎಂಬುದೇ ಇಲ್ಲ. ರಾಯ್ಕರ್ ಬೆಟ್‌ಸೂರಮಠ ಅವರು ಆಯುಕ್ತರಾಗಿದ್ದಾಗ ಸಮಿತಿಯಿತ್ತು. ಅದೀಗ ಇಲ್ಲ. ಯಾರೂ ಹೇಳುವವರಿಲ್ಲ ಕೇಳುವವರಿಲ್ಲ. ಮಹಾರಾಜರು ‍ಪ್ರೀತಿಯಿಂದ ಜನರಿಗಾಗಿ ಕಟ್ಟಿದ ಕಟ್ಟಡಗಳು ನಾಮಾವಶೇಷವಾಗುತ್ತಿದ್ದರೂ ಉಳಿಸಿಕೊಳ್ಳುವ ಇಚ್ಛಾಶಕ್ತಿ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಇಲ್ಲ’ ಎಂದು ರಂಗರಾಜು ಬೇಸರ ವ್ಯಕ್ತಪಡಿಸಿದರು.  ‘ಮುಂಬೈ ಅಹಮದಾಬಾದ್‌ ಜೈಪುರ್ ಜೋಧ್‌‍ಪುರ ಇಂದೋರ್‌ಗಳ ಪಾಲಿಕೆಯವರು ಪಾರಂಪರಿಕ ಕಟ್ಟಡ ಸಂರಕ್ಷಿಸಿಕೊಂಡು ನಗರದ ಅಸ್ತಿತ್ವ ಉಳಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ಮಾತ್ರ ಆಗುತ್ತಿಲ್ಲ. ಎಲ್ಲ ಕಟ್ಟಡಗಳನ್ನು ಒಡೆದು ಬೆಂಗಳೂರಿನಂತೆ ಕಾಂಕ್ರೀಟ್‌ ಜಂಗಲ್ ಮಾಡಲು ಹೊರಟಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.