ಮೈಸೂರಿನ ಕ್ರಾಫರ್ಡ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಮೈಸೂರು ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಯಲ್ಲಿ ನಾಲ್ವಡಿ ಭಾವಚಿತ್ರಕ್ಕೆ ಉದ್ಯಮಿ ಹರೀಶ್ ಶಾ, ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಪುಷ್ಪನಮನ ಸಲ್ಲಿಸಿದರು. ಕುಲಸಚಿವೆ ಎಂ.ಕೆ.ಸವಿತಾ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
ಮೈಸೂರು: ‘ಡೆಕ್ಕನ್ (ದಕ್ಷಿಣ ಭಾರತ) ಇತಿಹಾಸವು ದೇಶದಲ್ಲೇ ಅವಜ್ಞೆಗೆ ಒಳಗಾಗಿದೆ. ಇತಿಹಾಸವೆಂದರೆ ದೆಹಲಿ, ಮೊಘಲ್, ಉತ್ತರ ಭಾರತ ಎನ್ನುವಂತಾಗಿದೆ. ಈ ಅಸಮತೋಲಿತ ಪ್ರಜ್ಞೆಯನ್ನು ಕಳಚಬೇಕಿದೆ’ ಎಂದು ಉದ್ಯಮಿ ಹರೀಶ್ ಶಾ ಪ್ರತಿಪಾದಿಸಿದರು.
ಇಲ್ಲಿನ ಕ್ರಾಫರ್ಡ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಮೈಸೂರು ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ‘ದಖ್ಖನ್ ಪ್ರಸ್ಥಭೂಮಿಯನ್ನು ಆಳಿದ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳ, ವಿಜಯನಗರ, ಬಹುಮನಿ ಸಾಮ್ರಾಜ್ಯದ ಬಗ್ಗೆ ಮಕ್ಕಳಿಗೆ ತಿಳಿಸಬೇಕು’ ಎಂದರು.
ಕಟ್ಟಡ ಉಳಿಸಿ: ‘ಪಾರಂಪರಿಕ ಕಟ್ಟಡಗಳು ನಾಡಿನ ಹೆಗ್ಗುರುತಾಗಿದ್ದು, ಅವುಗಳನ್ನು ಉಳಿಸಿಕೊಳ್ಳಬೇಕಿದೆ. ಜಯಲಕ್ಷ್ಮೀವಿಲಾಸ ಅರಮನೆಯು ಡೆಕ್ಕನ್ ಇತಿಹಾಸದ ಒಡವೆಯಂತಿದ್ದು, ಅದನ್ನು ಸಂರಕ್ಷಿಸುವುದು ತುರ್ತಾಗಿತ್ತು’ ಎಂದು ಶಾ ಹೇಳಿದರು.
‘ವರ್ಷದಲ್ಲಿ ಭಾರತಕ್ಕೆ ಬರುವ ಪ್ರವಾಸಿಗರಷ್ಟೇ ಸಂಖ್ಯೆಯಲ್ಲಿ ಪ್ಯಾರಿಸ್‌ನ ಒಂದು ವಸ್ತುಸಂಗ್ರಹಾಲಯವು ಸಂದರ್ಶಕರನ್ನು ಹೊಂದಿದೆ. ಇದು ನಮ್ಮ ಪ್ರವಾಸೋದ್ಯಮ ಎಷ್ಟು ಹಿಂದೆ ಉಳಿದಿದೆ ಎಂಬ ವಾಸ್ತವವು ನಮ್ಮ ಕಣ್ಣ ಮುಂದಿರುವುದನ್ನು ತೋರಿಸುತ್ತದೆ’ ಎಂದರು.
‘ಮೈಸೂರಿನಲ್ಲಿ ದಸರಾ ಪ್ರವಾಸೋದ್ಯಮವು ಇತಿಹಾಸದ ಅರಿವು ಕೊಡುತ್ತದೆ. ಇಲ್ಲಿನ ಕಟ್ಟಡಗಳನ್ನು ಉಳಿಸಿಕೊಳ್ಳುವ ಬಗ್ಗೆ ಆಸಕ್ತಿ ವಹಿಸಬೇಕಿದೆ. ಪಾರಂಪರಿಕತೆಯು ನಾಡಿನ ಇತಿಹಾಸವನ್ನು ಸಂರಕ್ಷಿಸುವುದಷ್ಟೇ ಅಲ್ಲ. ಭವಿಷ್ಯವನ್ನು ಕಟ್ಟುತ್ತದೆ’ ಎಂದರು.
ಬಹುತ್ವದ ಗುರುತು: ‘ಮೈಸೂರು ವಿಶ್ವವಿದ್ಯಾಲಯ ನಾಡಿನ ಬಹುತ್ವದ ಗುರುತನ್ನು ಉಳಿಸಿದೆ. ಇದು ಕೇವಲ ಶಿಕ್ಷಣ ನೀಡುತ್ತಿಲ್ಲ. ಸಂಸ್ಕೃತಿಯ ನೆನಪುಗಳು ಹಾಗೂ ಜ್ಞಾನ ಪರಂಪರೆಯನ್ನು ಜೀವಂತವಾಗಿರಿಸಿದೆ. ಲೇಖಕರು, ಚಿಂತಕರು, ವಿಜ್ಞಾನಿಗಳನ್ನು ದೇಶಕ್ಕೆ ಕೊಟ್ಟಿದೆ’ ಎಂದು ಶಾ ಹೇಳಿದರು.
‘50 ವರ್ಷದ ಹಿಂದೆ ನಾನು ಓದಿದ ಮಣಿಪಾಲ್ ತಾಂತ್ರಿಕ ಸಂಸ್ಥೆಯು ಮೈಸೂರು ವಿಶ್ವವಿದ್ಯಾಲಯದ ಭಾಗವಾಗಿತ್ತು. ಹಳೆ ವಿದ್ಯಾರ್ಥಿಯಾಗಿ ಬರುವುದಕ್ಕಿಂತ ಜಯಲಕ್ಷ್ಮಿವಿಲಾಸ ಅರಮನೆಗೆ ಕಾಯಕಲ್ಪ ನೀಡುವ ಮೂಲಕ ನಮ್ಮ ಪರಂಪರೆಯನ್ನು ಎಲ್ಲರೂ ಸಂಭ್ರಮಿಸುವಂತೆ ಮಾಡುವ ಆಸೆ ಇತ್ತು. ಅದರಂತೆ ಬಂದಿರುವೆ’ ಎಂದು ಹೇಳಿದರು.
‘ಜೀರ್ಣೋದ್ಧಾರಕ್ಕೆ ₹ 30 ಕೋಟಿ ನೆರವು’ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ ‘ಹರೀಶ್ ಶಾ ಅವರು ವಿಶ್ವವಿದ್ಯಾಲಯದ ಹೆಮ್ಮೆಯ ಜಯಲಕ್ಷ್ಮಿವಿಲಾಸ ಅರಮನೆಯ ಪುನರುಜ್ಜೀವನಕ್ಕೆ ₹30 ಕೋಟಿ ನೀಡಿ ನೆರವಾಗಿದ್ದು ವಿಶ್ವದಲ್ಲಿ ಇಷ್ಟು ದೊಡ್ಡ ಮೊತ್ತದ ನೆರವನ್ನು ಯಾವುದೇ ವಿಶ್ವವಿದ್ಯಾಲಯಕ್ಕೆ ಯಾವೊಬ್ಬ ಹಳೆಯ ವಿದ್ಯಾರ್ಥಿಯೂ ನೀಡಿಲ್ಲ’ ಎಂದರು. ‘ಆಕ್ಸ್‌ಫರ್ಡ್ ಕೇಂಬ್ರಿಡ್ಜ್ ಯಾಲೆ ಹಾರ್ವರ್ಡ್ ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ದಾನಿಗಳ ನೆರವಿದೆ. ಹರೀಶ್ ಅವರ ನೆರವಿನಲ್ಲಿ ವಿಶ್ವದಲ್ಲಿ ಬೇರೆಲ್ಲೂ ಇಲ್ಲದ ಜಾನಪದ ವಸ್ತುಸಂಗ್ರಾಲಯವಿರುವ ಅರಮನೆ ಜೀರ್ಣೋದ್ಧಾರವಾಗುತ್ತಿದೆ. ಇದು ವಿಶ್ವವಿದ್ಯಾಲಯದ ಹೆಮ್ಮೆಯಾಗಿದೆ’ ಎಂದು ಶ್ಲಾಘಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.