ಮೈಸೂರು: ‘ರಾಜಕಾರಣಕ್ಕೆ ಬರಲು ಬಿ.ರಾಚಯ್ಯ ಹಾಗೂ ವೈ.ರಾಮಕೃಷ್ಣ ಅವರೇ ಕಾರಣ. ಅವರೇ ಮಾರ್ಗದರ್ಶಕರು ಹಾಗೂ ಸ್ಫೂರ್ತಿ ಆಗಿದ್ದರು’ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ‘ಬಾಬೂ ಜಗಜೀವನ್‌ರಾಂ ಅಧ್ಯಯನ, ಸಂಶೋಧನ ಮತ್ತು ವಿಸ್ತರಣ ಕೇಂದ್ರ’ವು ಶುಕ್ರವಾರ ಆಯೋಜಿಸಿದ್ದ ‘ಸಂಸದೀಯ ಪಟು ವೈ.ರಾಮಕೃಷ್ಣ ಅವರ ಸಾಧನೆಗಳು’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
‘ರಾಮಕೃಷ್ಣ ಅವರು ಉತ್ತಮ ಸಂಸದೀಯ ಪಟು ಆಗಿದ್ದರು. ನಡವಳಿಕೆ, ವಿಶ್ವಾಸನೀಯ ಮಾತುಗಳಿಂದಲೇ ಸತತವಾಗಿ ಚುನಾವಣಾ ರಾಜಕಾರಣದಲ್ಲಿದ್ದರು. ಅವರು ಪ್ರತಿನಿಧಿಸುತ್ತಿದ್ದ ಕೋಲಾರ ಲೋಕಸಭಾ ಕ್ಷೇತ್ರದಲ್ಲಿಯೇ ಸ್ಪರ್ಧಿಸಿ ಸಂಸದನಾದೆ. ಅವರ ಆಶೀರ್ವಾದದಿಂದಲೇ ರಾಜಕೀಯ ಕ್ಷೇತ್ರದಲ್ಲಿರುವೆ. ಅಂದು ಪ್ರೋತ್ಸಾಹಿಸದಿದ್ದರೆ, ಇಂದು ಸಚಿವನಾಗಿರುತ್ತಿರಲಿಲ್ಲ’ ಎಂದು ಸ್ಮರಿಸಿದರು.
ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಮಾತನಾಡಿ, ‘ದಲಿತ ನಾಯಕರ ಕೊಡುಗೆಯ ಬಗ್ಗೆ ವಿದ್ಯಾರ್ಥಿಗಳಿಗೆ ಗೊತ್ತಾಗಬೇಕು. ರಾಮಕೃಷ್ಣ ಅವರು ಆಧುನಿಕ ಬೆಂಗಳೂರು ನಿರ್ಮಾಣದ ದೂರದೃಷ್ಟಿಯ ನಿರ್ಧಾರಗಳನ್ನು ಕೈಗೊಂಡರು. ಎಲೆಕ್ಟ್ರಾನಿಕ್ ಸಿಟಿ, ಜ್ಞಾನ ಭಾರತಿ ಕ್ಯಾಂಪಸ್, ತೋಟಗಾರಿಕೆ– ಕೃಷಿ ವಿಶ್ವವಿದ್ಯಾಲಯದ ಸ್ಥಾಪನೆಯಲ್ಲಿ ಅವರ ಕೊಡುಗೆಯಿದೆ’ ಎಂದರು.
‘ಬಿ.ರಾಚಯ್ಯ ಅವರೇ ರಾಜ್ಯದಲ್ಲಿ ಅಂಗನವಾಡಿ ತಂದರು. ರಾಜಕೀಯದ ಆರಂಭದ ದಿನಗಳಲ್ಲಿ ಬಸವಲಿಂಗಪ್ಪ ಅವರು ನಮಗೆ ಊಟ ಕೊಟ್ಟು ಆಡಳಿತದ ಪಾಠ ಹೇಳಿಕೊಟ್ಟರು. ಬಲಿಷ್ಠ ಕೋಮುಗಳ ನಡುವೆ ಕನಿಷ್ಠ ಕೋಮುಗಳ ಸಮಸ್ಯೆಗಳು ಸಮಾಧಿ ಆಗುತ್ತವೆ. ಹೀಗಾಗಿ ಅವರಿಗೆ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದ್ದರು’ ಎಂದು ಸ್ಮರಿಸಿದರು.
‘ತಬ್ಬಲಿ ಸಮುದಾಯಗಳ ಏಳಿಗೆಗೆ ದುಡಿಯಬೇಕು. ಜನರು ಹೋರಾಟ ಮಾಡಿಯೇ ಎಲ್ಲವನ್ನೂ ಪಡೆದುಕೊಳ್ಳಬೇಕು. ಹಲವು ಆಯೋಗದ ವರದಿಗಳು ಇನ್ನೂ ಜಾರಿಯಾಗಿಲ್ಲ. ಸಂಘಟಿತರಾಗಬೇಕು’ ಎಂದು ಸಲಹೆ ನೀಡಿದರು.
ಉದ್ಘಾಟಿಸಿದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ‘ಒಳಮೀಸಲಾತಿಗಾಗಿ ಹೋರಾಡಿದವರು ವೈ.ರಾಮಕೃಷ್ಣ. ನಾವೆಲ್ಲರೂ ಜಾತಿ ಬೇಧ ಮಾಡಬಾರದು. ಇಂಥ ಮಹಾನ್ ವ್ಯಕ್ತಿಗಳ ಹೆಸರು ಸವಿನೆನಪಾಗಿ ಉಳಿಯುವಂತೆ ಮಾಡಬೇಕು’ ಎಂದರು.
ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಮಾಜಿ ಸಚಿವರಾದ ಕೋಟೆ ಎಂ.ಶಿವಣ್ಣ, ಬಿ.ಸೋಮಶೇಖರ್, ಕೆಪಿಸಿಸಿ ಎಸ್.ಸಿ.ಘಟಕದ ಅಧ್ಯಕ್ಷ ಆರ್.ಧರ್ಮಸೇನಾ, ಕೇಂದ್ರದ ನಿರ್ದೇಶಕ ಪ್ರೊ.ಕೆ.ಸದಾಶಿವ, ಮಾತಂಗ ಪ್ರತಿಷ್ಠಾನದ ಅಧ್ಯಕ್ಷ ಆರ್.ಲೋಕೇಶ್, ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಸ್.ಮೂರ್ತಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.