ADVERTISEMENT

ಬದುಕು– ಬರಹ ಒಂದೇ ಆಗಿರದು: ಕಾಂಗ್ರೆಸ್‌ ಮುಖಂಡ ಮರಿತಿಬ್ಬೇಗೌಡ

ಮಲ್ಲಿಕಾ ಮಳವಳ್ಳಿ ಅಭಿನಂದಾನ ಕೃತಿ ಬಿಡುಗಡೆ: ಕಾಂಗ್ರೆಸ್‌ ಮುಖಂಡ ಮರಿತಿಬ್ಬೇಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 6:37 IST
Last Updated 14 ಜುಲೈ 2025, 6:37 IST
   

ಮೈಸೂರು: ‘ಬಹಳಷ್ಟು ಲೇಖಕರು, ಕವಿಗಳ ಬದುಕು–ಬರಹ ಒಂದೇ ಆಗಿರುವುದಿಲ್ಲ. ಆದರೆ, ಗೃಹಿಣಿಯಾಗಿ, 58 ವಯಸ್ಸಿನಲ್ಲಿ ಎಂ.ಎ. ಪದವಿ ಪಡೆದು 12ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಲೇಖಕಿ ಮಲ್ಲಿಕಾ ಮಳವಳ್ಳಿ ಅವರ ಬದುಕು– ಬರಹ ಒಂದೇ ಆಗಿದೆ’ ಎಂದು ಕಾಂಗ್ರೆಸ್‌ ಮುಖಂಡ ಮರಿತಿಬ್ಬೇಗೌಡ ಅಭಿಪ್ರಾಯಪಟ್ಟರು. 

ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಶಿಕ್ಷಣ ಸಂಸ್ಥೆಗಳ ಸಮುಚ್ಚಯದಲ್ಲಿ ಭಾನುವಾರ ಆಯೋಜಿಸಿದ್ದ ಲೇಖಕಿ ಮಲ್ಲಿಕಾ ಮಳವಳ್ಳಿ ಅವರ ಅಭಿನಂದನಾ ಕೃತಿ ‘ಸದಾಚಾರ ಸಂಪನ್ನೆ’ ಬಿಡುಗಡೆಯಲ್ಲಿ ಮಾತನಾಡಿದರು.   

‘12ನೇ ಶತಮಾನದ ಬಸವಾದಿ ಶರಣರ ವಚನಗಳನ್ನು ಅಧ್ಯಯನ ಮಾಡಿ, ಜನರಿಗೆ ಸರಳವಾಗಿ ಅರ್ಥವಾಗುವಂತೆ ಅವುಗಳನ್ನು ದಾಟಿಸಿದರು. ಅವರು ಪ್ರಚಾರ, ಹಣದಾಸೆಗೆ ಕೃತಿಗಳನ್ನು ರಚಿಸಿಲ್ಲ. ಸಾಮಾಜಿಕ ಕಳಕಳಿ, ಕಷ್ಟಗಳ ನಿವಾರಣೆ, ನೆಮ್ಮದಿಯ ಬದುಕಿಗಾಗಿ ತಮ್ಮ ಆಲೋಚನೆಗಳನ್ನು ದಾಖಲಿಸಿದರು. ಮಹಿಳೆಯರ ಕಷ್ಟಗಳಿಗೆ ಮಿಡಿದರು’ ಎಂದರು. 

ADVERTISEMENT

ಕೃತಿ ಬಿಡುಗಡೆ ಮಾಡಿದ ಉದ್ಯಮಿ ಮಾಣಿಕ್‌ಚಂದ್ ಬಲ್ಡೋಟಾ ಮಾತನಾಡಿ, ‘ಮಲ್ಲಿಕಾ ಅವರು ತಾಯಿಯಂತೆ ಬಾಲ್ಯದಲ್ಲಿ ನನ್ನನ್ನು ಪೋಷಿಸಿದರು. ಶಿಕ್ಷಣ ಕೊಡಿಸಿದರು. ಕನ್ನಡವನ್ನೂ ಕಲಿಸಿ ದಾರಿದೀಪವಾಗಿದ್ದರು. ಉನ್ನತ ಸ್ಥಾನಕ್ಕೇರಲು, ಉದ್ಯಮದಲ್ಲಿ ಯಶಸ್ವಿಯಾಗಲು ಅವರ ಆಶೀರ್ವಾದವೇ ಕಾರಣ’ ಎಂದು ಭಾವುಕರಾದರು.‌

ಕೃತಿ ಪರಿಚಯ ಮಾಡಿದ ಲೇಖಕ ಪ್ರದೀಪ್ ಕುಮಾರ ಹೆಬ್ರಿ, ‘ಮಂಡ್ಯ ಜಿಲ್ಲೆಯ ಸಾಹಿತ್ಯ ರತ್ನವಾಗಿದ್ದಾರೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ತಮ್ಮ ಸಂಶೋಧನಾ ವಿದ್ಯಾರ್ಥಿಗಳಿಂದ ಮಲ್ಲಿಕಾ ಅವರ ಕೃತಿಗಳ ಬಗ್ಗೆ ಸಂಶೋಧನೆ ನಡೆಸಬೇಕಿದೆ’ ಎಂದು ಹೇಳಿದರು.  

‘ಮನೆಯಲ್ಲಿ ಗ್ರಂಥ ಭಂಡಾರ ಇದ್ದರೆ, ಮಕ್ಕಳಲ್ಲಿ ಓದುವ ಅಭಿರುಚಿ, ಭಾಷಾ ಪ್ರೌಢಿಮೆ ಹಾಗೂ ಜ್ಞಾನ ಬೆಳೆಯುತ್ತದೆ. ಪುಸ್ತಕ ಲೋಕವೇ ಜಗವನ್ನು ಅಂಗೈಯಲ್ಲಿ ತಂದಿಡುತ್ತದೆ’ ಎಂದು ಅಭಿಪ್ರಾಯಪಟ್ಟರು.

ಕೃತಿಯ ಸಂಪಾದಕ ಎಚ್.ಎಸ್.ಮುದ್ದೇಗೌಡ ಅವರನ್ನು ಅಭಿನಂದಿಸಲಾಯಿತು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹೆಚ್ಚುವರಿ‌ ಜಿಲ್ಲಾಧಿಕಾರಿ ಪಿ.ಶಿವರಾಜು, ಲೇಖಕಿ ಮಲ್ಲಿಕಾ ಮಳವಳ್ಳಿ, ನಟರಾಜ ಪ್ರತಿಷ್ಠಾನದ ಪ್ರೊ.ಎಸ್.ಶಿವರಾಜಪ್ಪ, ಬಿ.ಎಂ.ಮಹದೇವಪ್ಪ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.