ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಕೆರೆ, ಕಟ್ಟೆಗಳು ನಗರೀಕರಣದಿಂದ ನಾಶವಾಗುವ ಹಂತಕ್ಕೆ ತಲುಪಿದ್ದು, ಪುನರುಜ್ಜೀವನಕ್ಕೆ ಜಿಲ್ಲಾಡಳಿತ ಮುಂದಾಗದಿದ್ದಲ್ಲಿ, ಶಾಶ್ವತವಾಗಿ ಜಲಮೂಲ ಕಳೆದುಕೊಳ್ಳುವ ಆತಂಕ ಪರಿಸರಪ್ರಿಯರಲ್ಲಿ ವ್ಯಕ್ತವಾಗಿದೆ.
ಬಂಡಿಪಾಳ್ಯದ ಎಪಿಎಂಸಿ ಮಾರುಕಟ್ಟೆಯ ಪಕ್ಕದಲ್ಲಿಯೇ ಹಾದುಹೋಗಿರುವ ಉತ್ತನಹಳ್ಳಿ ರಸ್ತೆಯ ಪಕ್ಕದಲ್ಲಿಯೇ ಇರುವ ‘ಪರಸಯ್ಯನ ಕೆರೆ’ ಒಡಲಿಗೆ ಪ್ಲಾಸ್ಟಿಕ್ ತ್ಯಾಜ್ಯ ಸೇರುತ್ತಿದ್ದು, ಕಳೆದ ಫೆಬ್ರುವರಿ 21ರಂದು ಬಿದಿದ್ದ ಬೆಂಕಿಗೆ ಕೆರೆಯ ಒಡಲು ಹೊತ್ತಿ ಉರಿದಿತ್ತು. ‘ಚಾಮುಂಡಿ ಬೆಟ್ಟ ಮೀಸಲು ಅರಣ್ಯ’ವು ಕೆರೆಯಂಚಿನಲ್ಲಿಯೇ ಇದ್ದು, ಚಿರತೆ, ನರಿ ಸೇರಿದಂತೆ ವನ್ಯಜೀವಿಗಳಿಗೂ ಆಪತ್ತು ತಂದಿತ್ತು.
ಮಳೆಗಾಲದಲ್ಲಿ ಸದಾ ತುಂಬಿರುವ ಕೆರೆಯು ಬೇಸಿಗೆಯಲ್ಲಿ ಬರಡಾಗಿರುತ್ತದೆ. ಎಪಿಎಂಸಿ ಹಾಗೂ ಸುತ್ತಮುತ್ತಲ ಹೋಟೆಲ್‌ನವರೂ, ತ್ಯಾಜ್ಯ ವಿಲೇವಾರಿ ಮಾಡುವವರು ಕೆರೆಯನ್ನು ತ್ಯಾಜ್ಯ ಸುರಿಯುವ ತಾಣವಾಗಿ ಬದಲಾಯಿಸಿಕೊಂಡಿದ್ದಾರೆ.
ಪ್ಲಾಸ್ಟಿಕ್, ಗಾಜು ಸೇರಿದಂತೆ ಒಣ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಖಾಸಗಿಯವರು ಸ್ಥಾಪಿಸಿದ್ದು, ವಿಲೇವಾರಿ ನಂತರ ಉಳಿದ ತ್ಯಾಜ್ಯವನ್ನು ಕೆರೆಯ ಒಡಲಿಗೆ ಬಿಸಾಡಿದ್ದರು. ಅದರಿಂದ ಕೆರೆಯು ಮಾಲಿನ್ಯಮಯವಾಗಿತ್ತು. ಕಳೆದೆರಡು ತಿಂಗಳಿನಿಂದ ಇದನ್ನು ಪುನರುಜ್ಜೀವನಗೊಳಿಸುವ ಕಾರ್ಯವನ್ನು ಗ್ರಾಮ ಪಂಚಾಯಿತಿಯವರು ಮಾಡಿದ್ದಾರೆ.
ಕೆರೆಯಲ್ಲಿ ಹೇರಳವಾಗಿ ಬೆಳೆದಿದ್ದ ಬಳ್ಳಾರಿ ಜಾಲಿ ಸೇರಿದಂತೆ ಕುರುಚಲು ಗಿಡಗಳು, ಪ್ಲಾಸ್ಟಿಕ್ ತ್ಯಾಜ್ಯ ತೆರವು ಮಾಡಲಾಗಿದೆ. ಇದೀಗ ಕೆರೆಯಲ್ಲಿ 10 ಅಡಿ ಆಳದವರೆಗೂ ಹೂಳನ್ನು ತೆಗೆಯಲಾಗಿದ್ದು, ಸಣ್ಣ– ಸಣ್ಣ ದ್ವೀಪಗಳನ್ನು ನಿರ್ಮಿಸಲಾಗಿದೆ. ಅದರಿಂದ ಜೀವವೈವಿಧ್ಯ ಮತ್ತೆ ಮರಳುವ ಆಶಾಭಾವ ಮೂಡಿದೆ. ಕೆರೆಯ ಏರಿಯ ಮೇಲೆ ಸುಟ್ಟ ಅವಶೇಷ ಹೊಂದಿದ್ದ ಜಾಲಿ, ಮುಳ್ಳುಕಂಟಿ ತೆರವು ಮಾಡಲಾಗಿದೆ.
12 ಎಕರೆ ವಿಸ್ತಾರ: ಬೆಟ್ಟದ ಮೇಲೆ ಬಿದ್ದ ಮಳೆ ನೀರು ಕಬಿನಿ ನದಿ ಕಣಿವೆಗೆ ನೇರವಾಗಿ ಹರಿಯದಿರುವಂತೆ ಪುಟ್ಟ ಕೆರೆಗಳ ಜಾಲವನ್ನು 400 ವರ್ಷಗಳ ಹಿಂದೆಯೇ ನಿರ್ಮಿಸಲಾಗಿದ್ದು, ಜನ– ಜಾನುವಾರಿಗೆ ನೆರವಾಗಿತ್ತು. ಪರಸನಾಯ್ಕನ ಕೆರೆ, ಪರಶುರಾಮನಕೆರೆ ಎಂಬೆಲ್ಲ ಹೆಸರಿನಿಂದ ಕರೆಯಾಗುವ ‘ಪರಸಯ್ಯನ ಕೆರೆ’ 12.20 ಎಕರೆ ವಿಸ್ತಾರವಾಗಿದೆ.
ನಂಜನಗೂಡು ರಸ್ತೆಯ ಬಂಡಿಪಾಳ್ಯ– ಉತ್ತನಹಳ್ಳಿ ರಸ್ತೆ ಪಕ್ಕದಲ್ಲಿ, ಚಾಮುಂಡಿ ಬೆಟ್ಟದ ನೈರುತ್ಯ ಭಾಗಕ್ಕೆ ಹೊಂದಿಕೊಂಡಂತೆ ಕೆರೆಯು ಚಾಚಿದೆ. ‘ದಿಶಾಂಕ್’ ಆ್ಯಪ್‌ನಲ್ಲಿ ಸರ್ವೆ ಸಂಖ್ಯೆ 4 ಎಂದಿದೆ. ಈ ಕೆರೆಯ ಕೆಳಭಾಗದಲ್ಲಿ ಮತ್ತೊಂದು ಕೆರೆಯೂ ಇದ್ದು, ಕಟ್ಟಡ ತ್ಯಾಜ್ಯದಿಂದ ಬಹುತೇಕ ಮುಚ್ಚಿದೆ. ಅದರ ವಿಸ್ತೀರ್ಣ 2.32 ಎಕರೆ ಆಗಿದೆ. ಈ ಎರಡೂ ಕೆರೆಗಳನ್ನು ಹಾಗೂ ಆಗಿರುವ ಒತ್ತುವರಿ ತೆರವುಗೊಳಿಸಿ ಕಾರ್ಯಕಲ್ಪ ನೀಡಬೇಕಿದೆ.
12.20 ಎಕರೆ ವಿಸ್ತೀರ್ಣದ ಕೆರೆ ಜೀವವೈವಿಧ್ಯದ ತಾಣ ಬೆಂಕಿಗೆ ಬೂದಿಯಾಗಿದ್ದ ಒಡಲು
ಬೆಂಕಿಗೆ ಕೆರೆಯಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯ ಬೂದಿಯಾಗಿತ್ತು. ಇದೀಗ ಹೂಳು ತೆಗೆಯಲಾಗಿದೆ. ಮತ್ತೆ ಪ್ಲಾಸ್ಟಿಕ್ ಸುರಿಯುವುದು ನಡೆಯುತ್ತದೆ. ಕೊನೆ ಯಾವಾಗ?ನಯಾಜ್ ಬಂಡಿಪಾಳ್ಯ
‘ಜಲಮೂಲ ರಕ್ಷಿಸಲು ಇಲ್ಲ ದೂರದೃಷ್ಟಿ’ ‘ಚಾಮುಂಡಿ ಬೆಟ್ಟದ ತಪ್ಪಲಿನ ಕೆರೆಗಳ ರಕ್ಷಣೆಗೆ ಆಡಳಿತ ವ್ಯವಸ್ಥೆಗೆ ದೂರದೃಷ್ಟಿ ಇಲ್ಲವಾಗಿದೆ. ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗ್ರಾಮ ಪಂಚಾಯಿತಿ ಜಲಮೂಲಗಳ ರಕ್ಷಣೆಗೆ ಕ್ರಮವಹಿಸಬೇಕಿದೆ’ ಎಂದು ಮುಖಂಡ ಅಹಿಂದ ಜವರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ‘ಪರಸಯ್ಯನ ಕೆರೆಯ ನೀರನ್ನು ಬಂಡಿಪಾಳ್ಯದ ರೈತರು ಭತ್ತ ಬೆಳೆಯಲು ಬಳಸುತ್ತಿದ್ದರು. ಕೆರೆ ಒಡಲಿನಲ್ಲಿ ಹೋಟೆಲ್ ಕೋಳಿ ತ್ಯಾಜ್ಯ ಸುರಿಯುತ್ತಿದ್ದಾರೆ. ನಾಯಿ– ಹಂದಿ ಹೆಚ್ಚಾಗಿದ್ದು ಅವುಗಳನ್ನು ತಿನ್ನಲು ಚಿರತೆಗಳು ಬರುತ್ತಿವೆ’ ಎಂದರು. ‘10 ವರ್ಷದ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಶಿಖಾ ಅವರು ಕೆರೆಗಳನ್ನು ಪರಿಶೀಲಿಸಿದ್ದರು. ಎಷ್ಟೋ ಕೆರೆ ಕಟ್ಟೆಗಳನ್ನು ಕಟ್ಟಡ ತ್ಯಾಜ್ಯದಿಂದ ಮುಚ್ಚಿ ಒತ್ತುವರಿ ಮಾಡಲಾಗುತ್ತಿದೆ. ಹಸಿರು– ಜಲ ವಲಯದ ರಕ್ಷಣೆಗೆ ಅರಣ್ಯ ಇಲಾಖೆ ಪ್ರಾಧಿಕಾರ ಗ್ರಾಮ ಪಂಚಾಯಿತಿ ಒಟ್ಟಾಗಿ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.