ADVERTISEMENT

ರಂಗಭೂಮಿ ಮನ ಅರಳಿಸುವ ತಾಣ: ಬಿ.ಸುರೇಶ್

​ಪ್ರಜಾವಾಣಿ ವಾರ್ತೆ
Published 10 ಮೇ 2023, 2:48 IST
Last Updated 10 ಮೇ 2023, 2:48 IST
ಮೈಸೂರಿನ ಕಿರುರಂಗಮಂದಿರಲ್ಲಿ ಮಂಗಳವಾರ ಆಯೋಜಿಸಿದ್ದ ರಂಗ ಭೀಷ್ಮ ಬಿ.ವಿ.ಕಾರಂತರಂಗ ‘ಮಕ್ಕಳ ಲೋಕ’ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಕ್ಕಳು ಸಂವಿಧಾನ ಪೀಠಿಕೆ ದೃಶ್ಯರೂಪಕ ಪ್ರದರ್ಶಿಸಿ ‘ಸಂವಿಧಾನ ಅಳವಡಿಕೆ’ ಪ್ರತಿಜ್ಞೆ ಮಾಡಿದರು. ಸಯೋಗ ಸಂಸ್ಥಾಪಕಿ ಶ್ರುತಿ ರಂಗ, ನಿರ್ದೇಶಕ ಬಿ.ಸುರೇಶ್‌ ಇದ್ದಾರೆ –ಪ್ರಜಾವಾಣಿ ಚಿತ್ರ
ಮೈಸೂರಿನ ಕಿರುರಂಗಮಂದಿರಲ್ಲಿ ಮಂಗಳವಾರ ಆಯೋಜಿಸಿದ್ದ ರಂಗ ಭೀಷ್ಮ ಬಿ.ವಿ.ಕಾರಂತರಂಗ ‘ಮಕ್ಕಳ ಲೋಕ’ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಕ್ಕಳು ಸಂವಿಧಾನ ಪೀಠಿಕೆ ದೃಶ್ಯರೂಪಕ ಪ್ರದರ್ಶಿಸಿ ‘ಸಂವಿಧಾನ ಅಳವಡಿಕೆ’ ಪ್ರತಿಜ್ಞೆ ಮಾಡಿದರು. ಸಯೋಗ ಸಂಸ್ಥಾಪಕಿ ಶ್ರುತಿ ರಂಗ, ನಿರ್ದೇಶಕ ಬಿ.ಸುರೇಶ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಮೈಸೂರು: ‘ರಂಗಭೂಮಿಯೆಂಬ ಸೂರ್ಯ ಮಕ್ಕಳ ಮನಸನ್ನು ಅರಳಿಸಲಿ’ ಎಂದು ಚಲನಚಿತ್ರ ನಿರ್ದೇಶಕ ಬಿ.ಸುರೇಶ್ ಆಶಯ ವ್ಯಕ್ತಪಡಿಸಿದರು.

ನಗರದ ಕಿರು ರಂಗಮಂದಿರದಲ್ಲಿ ನೆಲೆ ಹಿನ್ನೆಲೆ, ಜನಮನ ಸಾಂಸ್ಕೃತಿಕ ಸಂಘಟನೆ ಮತ್ತು ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯಿಂದ ಮಂಗಳವಾರ ಆಯೋಜಿಸಿದ್ದ ರಂಗ ಭೀಷ್ಮ ಬಿ.ವಿ.ಕಾರಂತರಂಗ ‘ಮಕ್ಕಳ ಲೋಕ’ ಬೇಸಿಗೆ ಶಿಬಿರ ಸಮಾರೋಪದಲ್ಲಿ ಮಾತನಾಡಿದರು.

‘ರಂಗಭೂಮಿಯು ಪ್ರಶ್ನಿಸುವುದನ್ನು, ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಎಂದು ಕಲಿಸುವ ತಾಣ. ಇಲ್ಲಿ ಮನುಷ್ಯನಾಗುವುದು, ಬದುಕಿನ ಹಲವು ಸನ್ನಿವೇಶಗಳನ್ನು ಅರಿಯುವ ಶಿಕ್ಷಣ ದೊರೆಯುತ್ತದೆ‌’ ಎಂದರು.

ADVERTISEMENT

‘ಬೇಸಿಗೆ ಶಿಬಿರಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆ. ಮನುಷ್ಯರನ್ನು ವಿಭಜಿಸುತ್ತಿರುವ ಜಾತಿ, ಧರ್ಮ, ಬಣ್ಣ ಮುಂತಾದ ತಾರತಮ್ಯಗಳ ಕುರಿತು ಮಕ್ಕಳನ್ನು ಎಚ್ಚರಿಸುತ್ತದೆ. ಭೇದಭಾವ ಅಳಿಯಲು ರಂಗಭೂಮಿ ಸಂಬಂಧಿಸಿದ ಶಿಬಿರಗಳು ಹೆಚ್ಚು ಸಹಕಾರಿ’ ಎಂದು ತಿಳಿಸಿದರು.

ರಂಗಕರ್ಮಿ ಜನಾರ್ದನ್‌ (ಜನ್ನಿ) ಮಾತನಾಡಿ, ‘ಮಕ್ಕಳೇ ನಮ್ಮ ಭವಿಷ್ಯವಾಗಿದ್ದಾರೆ. ಅವರನ್ನು ಮಕ್ಕಳಂತೆಯೇ ಬೆಳೆಯಲು ಶಿಕ್ಷಕರು ಹಾಗೂ ಪೋಷಕರು ಅವಕಾಶ ನೀಡಬೇಕು. ನಿರ್ಬಂಧವೆನ್ನುವುದು ದೇಶದ್ರೋಹ’ ಎಂದರು.

‘ಕೋವಿಡ್ ಮಕ್ಕಳನ್ನು ನಿರ್ಬಂಧಿಸಿತ್ತು. ನಾವು ಅವರ ಮನಸ್ಸನ್ನು ಹೊಕ್ಕುವ ಪ್ರಯತ್ನವನ್ನು ಬೇಸಿಗೆ ಶಿಬಿರದಲ್ಲಿ ಮಾಡಿದ್ದೇವೆ. ಇಲ್ಲಿನ ಕಲಿಕೆ ಪ್ರಕ್ರಿಯೆಯಲ್ಲಿ ಮಕ್ಕಳು ತಮ್ಮನ್ನು ಸ್ವತಂತ್ರ ಚೇತನ ಎಂದು ತಿಳಿಸುವಲ್ಲಿ ಗೆದ್ದಿದ್ದಾರೆ’ ಎಂದು ಹೇಳಿದರು.

ಮಕ್ಕಳಿಂದ ಕಂಸಾಳೆ ನೃತ್ಯ ಮತ್ತು ಬಿ.ವಿ.ಕಾರಂತ ರಚನೆಯ ‘ಪಂಜರ ಶಾಲೆ’ ನಾಟಕ ಪ್ರದರ್ಶನ ನಡೆಯಿತು. ಕೆ.ಆರ್‌.ಸುಮತಿ ನಿರ್ದೇಶನ ಹಾಗೂ ಜೆ.ಚಿಂತನ್ ವಿಕಾಸ್ ಸಂಗೀತದಲ್ಲಿ ಮೂಡಿಬಂದ ಸಂವಿಧಾನ ಪೀಠಿಕೆಯ ದೃಶ್ಯರೂಪಕ ನೋಡುಗರ ಗಮನ ಸೆಳೆಯಿತು.

ಶಿಬಿರದಲ್ಲಿ 40 ಮಕ್ಕಳು ಭಾಗವಹಿಸಿದ್ದರು. ಸಯೋಗ ಸಂಸ್ಥಾಪಕಿ ಶ್ರುತಿ ರಂಗ ಮಾತನಾಡಿದರು. ಶಿಬಿರ ಸಂಚಾಲಕ ಕೆ.ಆರ್.ಗೋಪಾಲಕೃಷ್ಣ ಇದ್ದರು.

ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ರಂಗಭೂಮಿ ಪಠ್ಯ ಅಳವಡಿಸಿ

ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ಜೀವಪರ ಸಂವೇದನಾಶೀಲ ರಂಗಭೂಮಿ ಪಠ್ಯಗಳನ್ನು ಅಳವಡಿಸಬೇಕು‌ ಎಂದು ಬಿ.ಸುರೇಶ್‌ ಒತ್ತಾಯಿಸಿದರು. ಅಮೆರಿಕದಲ್ಲಿ ಮಕ್ಕಳು ಗನ್‌ ಹಿಡಿದು ಶಾಲೆಗೆ ಬರುವುದನ್ನು ಕಾಣುತ್ತಿದ್ದೇವೆ. ರಂಗಭೂಮಿ ಗುಲಾಬಿ ಹಿಡಿಯುವುದನ್ನು ಕಲಿಸುತ್ತದೆ. ಪ್ರತಿ ಶಾಲೆಯಲ್ಲೂ ರಂಗ ಚಟುವಟಿಕೆ ನಡೆಯಬೇಕು. ರಂಗಭೂಮಿಗೆ ಅಂಟಿಕೊಂಡವರೂ ಸಮಾಜಕ್ಕೆ ಒಳಿತನ್ನೇ ಮಾಡುತ್ತಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.