ADVERTISEMENT

ಕೀಯನ್ನಿಟ್ಟು ಹೋದರೆ ಎಲ್ಲಾ ಕಳವು!

ಬೀಗದ ಕೀ ಎಲ್ಲಿಯಾದರೂ ಇರಿಸಿರಿ ಜೋಕೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 20:40 IST
Last Updated 24 ಏಪ್ರಿಲ್ 2019, 20:40 IST

ಮೈಸೂರು: ಮನೆಗೆ ಬೀಗ ಹಾಕಿ ಮನೆಯ ಇತರ ಸದಸ್ಯರು ಕೀ ತೆಗೆದುಕೊಳ್ಳಲು ಅನುಕೂಲವಾಗಲಿ ಎಂದು ಕೀಯನ್ನು ಎಲ್ಲಾದರೂ ಇರಿಸಿರಿ ಜೋಕೆ. ಬೀಗ ಹಾಕುವುದನ್ನೆ ಹೊಂಚು ಹಾಕುವ ಕಳ್ಳರು ಕೀಯನ್ನು ತೆಗೆದುಕೊಂಡು ಕಳ್ಳತನ ಮಾಡುತ್ತಾರೆ. ಇಂತಹದ್ದೊಂದು ಘಟನೆ ಕುವೆಂಪುನಗರ ‘ಎಂ’ ಬ್ಲಾಕ್‌ನಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ರಾಜಮ್ಮ ಅವರು ಬೀಗ ಹಾಕಿ ಚಪ್ಪಲಿ ಸ್ಟಾಂಡ್‌ನಲ್ಲಿ ಕೀ ಇರಿಸಿ ಹೊರಗೆ ತೆರಳಿದ್ದಾರೆ. ಸಂಜೆ ವಾಪಸ್ ಬಂದು ನೋಡಿದಾಗ ಮನೆಯಲ್ಲಿದ್ದ ₹ 70 ಸಾವಿರ ನಗದು ಮತ್ತು 28 ಗ್ರಾಂ ತೂಕದ ಚಿನ್ನಾಭರಣಗಳು ಕಳವಾಗಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿಟಕಿ ಗ್ರಿಲ್‌ ಮುರಿದ ಕಳ್ಳರು

ADVERTISEMENT

ಮೈಸೂರು: ಇಲ್ಲಿನ ರಾಜೀವ್‌ನಗರದ 1ನೇ ಹಂತದಲ್ಲಿ ನೌಮನ್‌ಖಾನ್‌ ಎಂಬುವವರ ನಿವಾಸದ ಕಿಟಕಿಯ ಗ್ರಿಲ್‌ ಮುರಿದು ಒಳನುಗ್ಗಿದ ಕಳ್ಳರು ₹ 1.5 ಲಕ್ಷ ನಗದು ಮತ್ತು 23 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.

ಇವರು ಮನೆಗೆ ಬೀಗ ಹಾಕಿ ಏಪ್ರಿಲ್ 22ರಂದು ಊರಿಗೆ ಹೋಗಿದ್ದರು. 23ರ ಸಂಜೆ ವಾಪಸ್ ಬಂದು ನೋಡಿದಾಗ ಕಳ್ಳತನವಾಗಿವುದು ಗಮನಕ್ಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿ ಸಾವು; ಗುರುತು ಪತ್ತೆಗೆ ಮನವಿ

ಮೈಸೂರು: ನಗರ ಬಸ್‌ನಿಲ್ದಾಣದಲ್ಲಿ ಪುರುಷ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಇವರು ಕಾಯಿಲೆಯಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

35ರಿಂದ 40 ವರ್ಷ ವಯಸ್ಸಿನವರಾದ ಇವರು ಕಪ್ಪು ಬಣ್ಣ, ಸಿಮೆಂಟ್ ಬಣ್ಣದ ತುಂಬುತೋಳಿನ ಶರ್ಟ್ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುತು ಪತ್ತೆಯಾದವರು ದೂ: 0821– 2418100 ಸಂಪ‍ರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.