ADVERTISEMENT

ಒಂದೇ ದಿನಕ್ಕೆ ಕಳವು ಆರೋಪಿ ಬಂಧನ

ಲಷ್ಕರ್ ಪೊಲೀಸರ ಮಿಂಚಿನ ಕಾರ್ಯಚರಣೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 10:50 IST
Last Updated 2 ನವೆಂಬರ್ 2019, 10:50 IST

ಮೈಸೂರು: ಎಟಿಎಂ ಕಳವಿಗೆ ಯತ್ನಿಸಿದ ಕಳ್ಳನನ್ನು ಒಂದೇ ದಿನದಲ್ಲಿ ಲಷ್ಕರ್ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಮಾತುಬಾರದ ವ್ಯಕ್ತಿ ನಾಗೇಶ್‌ ಬಂಧಿತ ಆರೋಪಿ.

ಅಶೋಕರಸ್ತೆಯ ಎಸ್‌ಬಿಐ ಬ್ಯಾಂಕಿನ ಪಕ್ಕದ ಎಟಿಎಂಗೆ ಗುರುವಾರ ರಾತ್ರಿ ನುಗ್ಗಿದ ಈತ ಎಟಿಎಂ ಕಳವು ಮಾಡುವ ಯತ್ನ ನಡೆಸಿದ್ದ. ಈ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಶುಕ್ರವಾರ ಬೆಳಿಗ್ಗೆ ಬ್ಯಾಂಕಿನ ವ್ಯವಸ್ಥಾಪಕರು ದೂರು ನೀಡಿದ್ದಾರೆ.

ADVERTISEMENT

ದೂರು ದಾಖಲಿಸಿಕೊಂಡ ಕೂಡಲೇ ಅಶೋಕ ರಸ್ತೆಯಲ್ಲಿ ಮಫ್ತಿಯಲ್ಲಿ ಸುತ್ತಾಟ ನಡೆಸಿದ ಪೊಲೀಸರಿಗೆ ಮಾತು ಬರುವುದಿಲ್ಲ ಎಂದು ಹೇಳಿ ಎಟಿಎಂ ಭದ್ರತಾ ಸಿಬ್ಬಂದಿಗಳ ಮುಂದೆ ಅನುಕಂಪ ಗಿಟ್ಟಿಸುತ್ತಿದ್ದ ನಾಗೇಶ್‌ನನ್ನು ಕಂಡು ಅನುಮಾನದ ಮೇಲೆ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು. ಆಗ ಈತನೇ ಎಟಿಎಂ ಕಳವಿಗೆ ಯತ್ನಿಸಿದಾತ ಎಂಬುದು ಗೊತ್ತಾಯಿತು.

ಈತ ತನಗೆ ಮಾತು ಬರುವುದಿಲ್ಲ ಎಂದು ನಟಿಸಿ ಅಂಗಡಿ ಮಾಲೀಕರು, ಭದ್ರತಾ ಸಿಬ್ಬಂದಿಯಿಂದ ಅನುಕಂಪಗಿಟ್ಟಿಸುತ್ತಿದ್ದ. ಈತ ಬಂದಾಗ ಮಾಲೀಕರು ಹಾಗೂ ಭದ್ರತಾ ಸಿಬ್ಬಂದಿ ನಂಬಿಕೆಯಿಂದ ನಿರ್ಲಕ್ಷ್ಯ ವಹಿಸುತ್ತಿದ್ದರು. ಇವರ ಗಮನ ಬೇರೆಡೆ ಸೆಳೆದು ಈತ ಕಳವು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸಿಪಿ ಗಜೇಂದ್ರಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಇನ್‌ಸ್ಪೆಕ್ಟರ್ ಮುನಿಯಪ್ಪ, ಪಿಎಸ್‌ಐ ಪೂಜಾ, ಎಎಸ್‌ಐ ಪ್ರಕಾಶ್, ರಮೇಶ್, ಸಿಬ್ಬಂದಿಯಾದ ಪರಶಿವಮೂರ್ತಿ, ಲೋಕೇಶ್, ವಿಜಯಕುಮಾರ್, ಸೈಯದ್ ಮಕ್ಸೂದ್, ಬಸವರಾಜು ಮಜತಿ, ನಾಗಭೂಷಣ ಕಾರ್ಯಾಚರಣೆ ತಂಡದಲ್ಲಿದ್ದರು.

ಬಡಗಲಹುಂಡಿಯಲ್ಲಿ ಕಳ್ಳತನ

ಇಲ್ಲಿನ ವರುಣಾ ಹೋಬಳಿಯ ಬಡಗಲಹುಂಡಿಯ ಮಂಜುನಾಥ್ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ₹ 8.41 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.

ಇವರ ಮದುವೆ ನಿಮಿತ್ತ ತಂದೆ ಮತ್ತು ತಾಯಿ ಲಗ್ನಪತ್ರಿಕೆ ನೀಡಲು ಮನೆಗೆ ಬೀಗ ಹಾಕಿ ಕೀಲಿಯನ್ನು ಜಂತಿಯಲ್ಲಿ ಇಟ್ಟು ಹೋಗಿದ್ದರು. ಬರುವಷ್ಟರಲ್ಲಿ ಬೀಗ ತೆಗೆದು ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಕಳವು ಮಾಡಿರುವುದು ಗೊತ್ತಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ವರುಣಾ ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.