ಮೈಸೂರು: ‘ಜಾನಪದಕ್ಕೆ ಸಾವಿಲ್ಲ. ಜನರಿರೋ ತನಕವೂ ಜೀವಂತವಿರುತ್ತದೆ’ ಎಂದು ಕರ್ನಾಟಕ ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ ಭಾನುವಾರ ಇಲ್ಲಿ ತಿಳಿಸಿದರು.
ನಗರದ ಮನೆಯಂಗಳದಲ್ಲಿ ನಡೆದ ಕನ್ನಡ ಜಾನಪದ ಪರಿಷತ್‌ನ ಮೈಸೂರು ಜಿಲ್ಲಾ ಘಟಕದ ಐದನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು ‘ಪೀಳಿಗೆಯಿಂದ ಪೀಳಿಗೆಗೆ ಜಾನಪದ ಪಸರಿಸುತ್ತಿದೆ’ ಎಂದರು.
‘ಜಾನಪದ ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿದೆ. ಯಾರೋ ಒಬ್ಬರಿಂದ ರಚನೆಯಾಗಿದ್ದಲ್ಲ. ಅಸಂಖ್ಯಾತ ಜನರ ಗುಂಪಿನಿಂದ ರಚನೆಯಾಗಿರೋದು’ ಎಂದು ಅವರು ಹೇಳಿದರು.
‘ಜನರಿಂದ ಜನರಿಗಾಗಿ ರಚನೆಯಾಗಿದ್ದೇ ಜನಪದ. ಒಬ್ಬರ ಬಾಯಿಂದ ಮತ್ತೊಬ್ಬರ ಬಾಯಿಗೆ ಹರಡಿದೆ. ಜನಪದದಲ್ಲಿರುವ ಮಂಟೇಸ್ವಾಮಿ, ಯಲ್ಲಮ್ಮ, ಮಾದೇಶ್ವರ ಕಾವ್ಯಗಳು ರಾಮಾಯಣದಷ್ಟೇ ಮಹತ್ವವಾದವು’ ಎಂದು ಮರಿದೇವಯ್ಯ ಅಭಿಪ್ರಾಯಪಟ್ಟರು.
ವಾರ್ಷಿಕೋತ್ಸವ ಉದ್ಘಾಟಿಸಿ, ಕಲಾವಿದರಿಗೆ ಪರಿಷತ್‌ನ ಪ್ರಶಂಸನಾ ಪತ್ರ ವಿತರಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರಿಗೌಡ ಮಾತನಾಡಿ ‘ಜನಪದವನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದರು.
ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ.ಎಸ್.ಬಾಲಾಜಿ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಘಟಕದ ಅಧ್ಯಕ್ಷ ಡಾ.ಕ್ಯಾತನಹಳ್ಳಿ ಪ್ರಕಾಶ್ ಎಚ್. ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹೆಳವರಹುಂಡಿ ಸಿದ್ದಪ್ಪ, ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಸಿ.ಜಿ.ಗಂಗಾಧರ್, ವೇದವ್ಯಾಸ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಪನ್ನಗ ವಿಜಯಕುಮಾರ್ ಉಪಸ್ಥಿತರಿದ್ದರು.
ಜನಪದ ಗಾಯಕರು ಜನಪದ ಹಾಡುಗಳನ್ನಾಡಿದರು. ವಿವಿಧ ಭಾಗದ ಕಲಾವಿದರಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.