ಮೈಸೂರು: ‘ಮತಗಳ್ಳತನದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ ಕಾಂಗ್ರೆಸ್ ನಗರ ಹಾಗೂ ಗ್ರಾಮಾಂತರ ಸಮಿತಿಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇಲ್ಲಿ ಶನಿವಾರ ಸಹಿ ಸಂಗ್ರಹ ಅಭಿಯಾನ ನಡೆಸಿದರು.
ಗಾಂಧಿ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.
ಪಕ್ಷದ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ.ವಿಜಯ್ ಕುಮಾರ್ ಮಾತನಾಡಿ, ‘ಮತಗಳ್ಳತನದ ಬಗ್ಗೆ ತನಿಖೆ ನಡೆಸಲು, ಪ್ರಿಯಾಂಕ್ ಖರ್ಗೆ ಅವರಿಗೆ ಕೊಲೆ ಬೆದರಿಕೆ ಹಾಕಿದವರನ್ನು ಬಂಧಿಸಲು ಹಾಗೂ ಆರ್‌ಎಸ್‌ಎಸ್ ಸಹಿತ ಬಿಜೆಪಿ ಅಂಗ ಸಂಸ್ಥೆಗಳು ಜಾತಿ ಹೆಸರಿನಲ್ಲಿ ಗಲಭೆ ಎಬ್ಬಿಸುತ್ತಿರುವುದನ್ನು ಖಂಡಿಸಿ ಹೋರಾಟ ನಡೆಸುತ್ತಿದ್ದು, ಸಹಿ ಸಂಗ್ರಹಿಸಿ ರಾಷ್ಟ್ರಪತಿಯವರಿಗೆ ಕಳುಹಿಸಿಕೊಡುತ್ತೇವೆ’ ಎಂದು ತಿಳಿಸಿದರು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ‘ಬಿಜೆಪಿಯವರು ಪ್ರತಿ ಬಾರಿ ಒಂದೊಂದು ನಾಟಕವನ್ನಾಡಿ ಅಧಿಕಾರಕ್ಕೆ ಬರುತ್ತಿದ್ದಾರೆ. ಕೆ.ಆರ್. ಕ್ಷೇತ್ರದಲ್ಲಿ ಹಿಂದೆ ಒಂದೇ ಸೈಟ್‌ನಲ್ಲಿ ಹಲವು ಜನ ಮತದಾರರಿದ್ದದ್ದನ್ನು ಕಂಡುಹಿಡಿದಿದ್ದೆವು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು 26ಸಾವಿರ ಹೆಸರು ತೆಗೆಸಿದ್ದೆವು. ಬಿಜೆಪಿ ಇದೇ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಕಾಂಗ್ರೆಸ್ ಮತ ಹೆಚ್ಚಿರುವ ಕಡೆಗಳಲ್ಲಿ ಮತ ಸೇರಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ವಿಧಾನಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಮಾತನಾಡಿ, ‘ಬಿಜೆಪಿಯು ಜಾತಿ, ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೆ ಬರುತ್ತಿತ್ತು. ಅದು ಸಾಧ್ಯವಾಗದೇ ಇದ್ದಾಗ ಮತಗಳ್ಳತನ ಮಾಡುತ್ತಿದೆ. ವಿಧಾನಸಭಾ ಚುನಾವಣೆಯಲ್ಲೂ ಮತಕಳ್ಳತನ ಆಗಿದೆ. ಇಲ್ಲದಿದ್ದರೆ ಕಾಂಗ್ರೆಸ್ ಇನ್ನಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತಿತ್ತು’ ಎಂದರು.
ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮಾತನಾಡಿ, ‘ನಮ್ಮಲ್ಲಿ ಶಿಸ್ತಿಲ್ಲದ ಕಾರಣ ಬಿಜೆಪಿಗರನ್ನು ಎದುರಿಸಲು ಆಗುತ್ತಿಲ್ಲ. ಪ್ರಜಾಪ್ರಭುತ್ವ ಉಳಿಸುವ ಜವಾಬ್ದಾರಿ ಕಾಂಗ್ರೆಸ್ ಮೇಲಿದೆ. ಇಂದಿನ ಹೋರಾಟದಲ್ಲಿ ನೂರಾರು ಜನ ಭಾಗವಹಿಸಬೇಕಿತ್ತು. ದೇಶಕ್ಕಾಗಿ ಬಿಜೆಪಿಯ ಹೋರಾಟ, ಕೊಡುಗೆ ಏನೂ ಇಲ್ಲ. ಕಾಂಗ್ರೆಸ್ ಕಾರ್ಯಕರ್ತರು ಸಕ್ರಿಯರಾಗಿರುವವರೆಗೆ ಬಿಜೆಪಿಗರು ಸಂವಿಧಾನ ಮುಟ್ಟಲು ಸಾಧ್ಯವಿಲ್ಲ. ಬಿಜೆಪಿ ಹುನ್ನಾರಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು’ ಎಂದು ಆಗ್ರಹಿಸಿದರು.
ಕಾಂಗ್ರೆಸ್ ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ, ಮಾಜಿ ಶಾಸಕ ನಂಜುಂಡಸ್ವಾಮಿ, ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ವಕ್ತಾರ ಕೆ. ಮಹೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.