ADVERTISEMENT

Honey Trap | ‘ಮಧುಬಲೆ’ ಬೀಸುವವವರಿಗೆ ಕಠಿಣ ಶಿಕ್ಷೆಯಾಗಲಿ: ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 13:14 IST
Last Updated 22 ಮಾರ್ಚ್ 2025, 13:14 IST
ಡಾ.ಎಚ್‌.ಸಿ. ಮಹದೇವಪ್ಪ
ಡಾ.ಎಚ್‌.ಸಿ. ಮಹದೇವಪ್ಪ   

ಮೈಸೂರು: ‘ದೇಶದಲ್ಲಿ ಮಧುಬಲೆ(ಹನಿಟ್ರ್ಯಾಪ್‌)ಗೆ ಸಿಲುಕಿಸುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸುವಂಥ ಕಾನೂನು ಅಗತ್ಯವಿದೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದರು.

ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ರಾಜಕೀಯದಲ್ಲಷ್ಟೇ ಅಲ್ಲ. ಎಲ್ಲಾ ಕ್ಷೇತ್ರದಲ್ಲೂ ಮಧುಬಲೆ ಬೀಸುವುದು ಹೆಚ್ಚಾಗುತ್ತಿದೆ. ಖಾಸಗಿ ಕ್ಷಣಗಳನ್ನು ಬಹಿರಂಗಗೊಳಿಸಿ ವ್ಯಕ್ತಿತ್ವ ಹರಣ ಮಾಡುವ ಸಂಚು ಇದು. ಇದಕ್ಕ ತಕ್ಕೆ ಶಿಕ್ಷೆಯಾಗಬೇಕು. ಸದೃಢವಾದ ಕಾನೂನು ಜಾರಿಗೊಳಿಸಬೇಕು ಎನ್ನುವುದು ನನ್ನ ಒತ್ತಾಯವಾಗಿದೆ’ ಎಂದರು.

‘ಸಚಿವ ಕೆ.ಎನ್. ರಾಜಣ್ಣ ಅವರನ್ನು ಮಧುಬಲೆಗೆ ಸಿಲುಕಿಸಲು ಯತ್ನಿಸಿರುವ ಬಗ್ಗೆ ಉನ್ನತಮಟ್ಟದ ತನಿಖೆ ಆಗುತ್ತದೆ. ಯಾರು ಆ ಕೃತ್ಯ ಮಾಡಿದರು ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕು. ಊಹಾಪೋಹದ ಮಾತುಗಳು ಬೇಡ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

ಹಲೋ ಎಂದರೆ ಬಲೆ ಹೇಗಾಗುತ್ತದೆ?:

‘ನೀವು ಹಲೋ ಎಂದರೆ ಅವರೂ ಹಲೋ ಎನ್ನುತ್ತಾರೆ’ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅದೆಲ್ಲಾ ನನಗೆ ಗೊತ್ತಾಗುವುದಿಲ್ಲ. ನಾನು ಎಲ್ಲರಿಗೂ ಹಲೋ ಎನ್ನುತ್ತೇನೆ. ಎಲ್ಲರೂ ನನಗೆ ಹಲೋ ಎಂದೇ ಪ್ರತಿಕ್ರಿಯಿಸುತ್ತಾರೆ. ಅದರಿಂದ ಬಲೆ ಎನ್ನುವುದು ಹೇಗೆ? ನನ್ನನ್ನು ತುಳಿಯಲು ಯಾರು ಯತ್ನಿಸುತ್ತಾರೆ, ಯತ್ನಿಸಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನಾನಂತೂ ಸದೃಢವಾಗಿ ಕುಳಿತಿದ್ದೇನೆ. ಮಧುಬಲೆ ವಿಚಾರದಲ್ಲಿ ರಾಜಣ್ಣ ಜೊತೆ ಪ್ರತ್ಯೇಕ ಸಭೆಯ ಅಗತ್ಯವೇನೂ ಇಲ್ಲ. ಉನ್ನತಮಟ್ಟದ ತನಿಖೆ ನಡೆಯಲಿ’ ಎಂದು ಹೇಳಿದರು.

‘ಸಿದ್ದರಾಮಯ್ಯ ಪರವಾಗಿ ನಾವು ಮಾತನಾಡಿದರೆ, ಸಣ್ಣ ಮನಸ್ಸಿನ ಕೆಲವರಿಗೆ ಹೊಟ್ಟೆ ಕಿಚ್ಚು ಆಗಬಹುದು. ಆದರೆ, ಅದೇ ಕಾರಣಕ್ಕಾಗಿಯೇ ರಾಜಕೀಯವಾಗಿ ಟಾರ್ಗೆಟ್ ಆಗುತ್ತೇವೆ ಎಂಬುದನ್ನು ಒಪ್ಪುವುದಿಲ್ಲ. ಮಧುಬಲೆ ಬೀಸುವವರಿಗೆ ಪರ– ವಿರುದ್ಧ ಎಂಬುದು ಯಾವುದೂ ಇರುವುದಿಲ್ಲ. ಇಂತಹ ಪ್ರಕರಣಗಳಿಂದಾಗಿ, ರಾಜಣ್ಣ ಅವರ ಆಕ್ರಮಣಕಾರಿ ಗುಣವೇನೂ ಕಡಿಮೆ ಆಗುವುದಿಲ್ಲ’ ಎಂದರು.

‘ಮಧುಬಲೆ ಮಾಡಿಸಿದವರು ಡಿಕೆಶಿ’ ಎನ್ನಲಾಗುತ್ತಿದೆಯಲ್ಲಾ ಎಂಬ ಪ್ರಶ್ನೆಗೆ, ‘ಸುಮ್ಮನೆ ಏನು ಬೇಕಾದರೂ ಹೇಳಿದರೆ ನಡೆಯುತ್ತಾ? ನಾಳೆ ಮಹದೇವಪ್ಪ ಮಾಡಿಸಿದ್ದು ಎನ್ನುತ್ತಾರೆ, ಅದಕ್ಕೆ ಅರ್ಥ ಇದೆಯೇ? ರಾಜಣ್ಣ ಯಾರ ಹೆಸರನ್ನಾದರೂ ಹೇಳಿದ್ದಾರಾ? ತನಿಖೆಯಾಗಲಿ, ಯಾರೇ ಇದ್ದರೂ ತಕ್ಕ ಶಿಕ್ಷೆಯಾಗಲಿ’ ಎಂದು ಹೇಳಿದರು.

‘ಸಿದ್ದರಾಮಯ್ಯ ಅವರ ಆರೋಗ್ಯ ರಾಜಕೀಯ ಆರೋಗ್ಯ ಬಹಳ ಚೆನ್ನಾಗಿದೆ. ನಮ್ಮ ಸರ್ಕಾರದ ಅವಧಿ ಇನ್ನೂ ಮೂರು ವರ್ಷ ಇದೆ. ಅವರೇ ವಿತ್ತ ಸಚಿವ ಆಗಿರುವ ಕಾರಣದಿಂದ ಮುಂದಿನ 3 ಬಜೆಟ್‌ಗಳನ್ನೂ ಅವರೇ ಮಂಡಿಸುತ್ತಾರೆ. ಇದರಲ್ಲಿ ಯಾರಿಗೂ ಅನುಮಾನ ಬೇಡ. ಬಿಜೆಪಿಯವರು ಸಿ.ಎಂ ಬದಲಾವಣೆ ಬಗ್ಗೆ ಸುಮ್ಮನೆ ಮಾತನಾಡುತ್ತಾರೆ. ಮೊದಲು ಅವರ ಪಕ್ಷವನ್ನು ಶಿಸ್ತಾಗಿ ಇಟ್ಟುಕೊಳ್ಳಲಿ. ನಮ್ಮ ಬಗ್ಗೆ ಅವರಿಗೇಕೆ ಚಿಂತೆ?’ ಎಂದು ಕೇಳಿದರು.

ಬಿಜೆಪಿಯ 18 ಶಾಸಕರ ಅಮಾನತು ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಈ ರೀತಿಯ ಗಲಾಟೆ ನೋಡಿರಲಿಲ್ಲ. ಅವರನ್ನು ಅಮಾನತು ಮಾಡದೇ ಸ್ಪೀಕರ್‌ಗೆ ಬೇರೆ ದಾರಿ ಇರಲಿಲ್ಲ. ಅಲ್ಲಿ ಸಂಸದೀಯ ಭಾಷೆಯೇ ಬಳಕೆಯಾಗಲಿಲ್ಲ. ಪ್ರಜಾಪ್ರಭುತ್ವದ ಆಶಾಯಗಳನ್ನು ಬಿಜೆಪಿ ಗಾಳಿಗೆ ತೂರಿದೆ. ಧರ್ಮವೂ ಕೊಳೆಯುತ್ತಿದೆ, ರಾಜಕಾರವೂ ಕೊಳೆಯುತ್ತಿದೆ, ನೈತಿಕತೆಯೂ ಕೊಳೆಯುತ್ತಿದೆ. ಎಲ್ಲಾ ಕ್ಷೇತ್ರವೂ ಅಧಃಪತನದ ಹಾದಿ ಹಿಡಿದಿವೆ. ಇದೆಲ್ಲವನ್ನೂ ನೋಡಿದರೆ ಬೇಸರ ಆಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.