ADVERTISEMENT

ಮೈಸೂರು: ಪ್ರತ್ಯೇಕ ಪ್ರಕರಣ ಮೂವರ ಆತ್ಮಹತ್ಯೆ

ತಮ್ಮ ವಿಷ ಕುಡಿದ ಎಂದು ನೇಣಿಗೆ ಕೊರಳೊಡ್ಡಿದ ಅಣ್ಣ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 4:50 IST
Last Updated 3 ಜುಲೈ 2020, 4:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಆಸ್ತಿ ವಿವಾದವೊಂದಕ್ಕೆ ಸಂಬಂಧಿಸಿದಂತೆ ಅಣ್ಣ ನಿಂದಿಸಿದ ಎಂದು ತಮ್ಮ ವಿಷ ಕುಡಿದು ಮೃತಪಟ್ಟರೆ, ತಮ್ಮ ವಿಷ ಕುಡಿದ ಎಂದು ಅಣ್ಣ ನೇಣು ಹಾಕಿಕೊಂಡ ಹೃದಯ ವಿದ್ರಾವಕ ಘಟನೆ ತಾಲ್ಲೂಕಿನಲ್ಲಿ ಗುರುವಾರ ನಡೆದಿದೆ.

ಸಿದ್ಧಲಿಂಗಪುರದ ನಿವಾಸಿಗಳಾದ ಧರಣೀಶ್ (47) ಮತ್ತು ಸಹೋದರ ಗಣೇಶ್ (40) ಆತ್ಮಹತ್ಯೆ ಮಾಡಿಕೊಂಡವರು.

‘ಸಂಬಂಧಿಕರು ನಿಂದಿಸಿದರು ಎಂದು ಮನನೊಂದ ಗಣೇಶ್ ಅವರು ಹಳೆಕೆಸರೆ ಬಳಿಯ ವರುಣಾ ನಾಲೆಯ ಪಕ್ಕದಲ್ಲಿ ವಿಷ ಕುಡಿದು ಮೃತಪಟ್ಟರು’ ಎಂದು ಎನ್.ಆರ್.ಠಾಣೆ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಇವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಘಾತಕ್ಕೆ ಒಳಗಾದ ಅಣ್ಣ ಧರಣೀಶ್ ಸಿದ್ಧಲಿಂಗಪುರದ ತಮ್ಮ ಜಮೀನಿನ ಬಳಿ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೇಟಗಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಹೆಂಚು ತೆಗೆದು ಚಿನ್ನ ದೋಚಿದ ಕಳ್ಳರು

ಮೈಸೂರು: ಇಲ್ಲಿನ ಆಲನಹಳ್ಳಿಯ ನಿವಾಸಿ ದಾಳಪ್ಪ ಎಂಬುವವರ ಮನೆಯ ಹೆಂಚನ್ನು ತೆಗೆದು ಒಳಗಿಳಿದ ಕಳ್ಳರು ಬೀರುವಿನಲ್ಲಿಟ್ಟಿದ್ದ 150 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ತರಕಾರಿ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ಇವರು ಸಂಸಾರ ಸಮೇತರಾಗಿ 20 ದಿನಗಳ ಹಿಂದೆ ಬೇರೆ ಊರಿಗೆ ಹೋಗಿದ್ದರು. ಗುರುವಾರ ವಾಪಸ್ ಬಂದ ಬಳಿಕ ಕಳ್ಳತನ ಆಗಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರ್ಥಿಕ ಸಂಕಷ್ಟ; ವ್ಯಕ್ತಿ ಆತ್ಮಹತ್ಯೆ

ಮೈಸೂರು: ಲಾಕ್‌ಡೌನ್‌ನಿಂದ ಉಂಟಾದ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟ ರಿಯಲ್‌ಎಸ್ಟೇಟ್‌ ಉದ್ಯಮಿ ರಮೇಶ್ (52) ಎಂಬುವವರು ಖಾಸಗಿ ಹೋಟೆಲ್‌ನಲ್ಲಿ ನೇಣು ಹಾಕಿಕೊಂಡು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಕುವೆಂಪುನಗರದ ನಿವಾಸಿಯಾದ ಇವರು ರಿಯಲ್‌ಎಸ್ಟೇಟ್ ವ್ಯವಹಾರ ಹಾಗೂ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದರು. ಲಾಕ್‌ಡೌನ್‌ ನಂತರ ಎರಡೂ ವ್ಯವಹಾರಗಳಲ್ಲಿ ನಷ್ಟ ಸಂಭವಿಸಿತ್ತು. ಇದರಿಂದ ಬೇಸರಗೊಂಡು ಜೂನ್ 30ರಂದು ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದಾರೆ. ಜುಲೈ 2ರಿಂದ ಇವರ ಫೋನ್ ಸ್ವಿಚ್‌ ಆಫ್‌ ಆಗಿದೆ. ಕೋಣೆಯ ಬಾಗಿಲು ತೆರೆಯದೇ ಇದ್ದಾಗ ಹೋಟೆಲ್‌ನವರ ಮಾಹಿತಿ ಆಧರಿಸಿ ಬಾಗಿಲು ತೆರೆದಾಗ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.